WhatsApp Image 2024-10-29 at 6.51.22 PM

ಬೆಂಗಳೂರುಗೆ ಸ್ಲೀಪರ್ ಬಸ್ ಗಳ ಆರಂಭಕ್ಕೆ ಆಗ್ರಹ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 29- ಜಿಲ್ಲಾ ಕೇಂದ್ರ ಕೊಪ್ಪಳದಿಂದ ಬೆಂಗಳೂರು ಹಾಗೂ ಬೀದರ್ ನಗರಗಳಿಗೆ ಸ್ಲೀಪರ್ ಬಸ್ಗಳು ಹಾಗೂ ಕೊಪ್ಪಳದಿಂದ ಬೆಂಗಳೂರಿಗೆ ಬೆಳಗಿನ ಜಾವ ಬಸ್ ಸಂಚಾರಕ್ಕೆ ತಕ್ಷಣ ಕ್ರಮ ಕೈಗೊಳ್ಳುವ ಕುರಿತು ಕೆಕೆಆರ್ಟಿಸಿ ಕೊಪ್ಪಳದ ವಿಭಾಗೀಯ ನಿಯಂತ್ರಕರಿಗೆ ಮನವಿ ಮಾಡಿಕೊಳ್ಳಲಾಗಿದೆ.

ಸಾರ್ವಜನಿಕ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ ಈ ಕುರಿತು ವಿಭಾಗೀಯ ನಿಯಂತ್ರಕರಾದ ವೆಂಕಟೇಶ್ ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ, ಈ ಪ್ರಮುಖ ಮಾರ್ಗಗಗಳಲ್ಲಿ ಎಸಿ ಮತ್ತು ನಾನ್-ಎಸಿ ಸ್ಲೀಪರ್ ಬಸ್ಗಳ ಸಂಚಾರವನ್ನು ಪುನಾರಂಭಿಸುವ ಹಾಗೂ ಪ್ರಮಾಣವನ್ನು ಹೆಚ್ಚಿಸುವ ಅವಶ್ಯಕತೆಯನ್ನು ಮನದಟ್ಟು ಮಾಡಿಕೊಟ್ಟರು.

ಕೊಪ್ಪಳದಿಂದ ಬೆಂಗಳೂರಿಗೆ ಅತ್ಯಧಿಕ ಸಂಖ್ಯೆಯಲ್ಲಿ, ವಾರದ ಎಲ್ಲಾ ದಿನಗಳಲ್ಲಿಯೂ, ಪ್ರಯಾಣಿಕರ ಸಂಚಾರ ಇರುತ್ತದೆ. ಆದರೆ, ಈ ಮಾರ್ಗದಲ್ಲಿ, ಒಂದೇ ಒಂದು ಸ್ಲೀಪರ್ ಬಸ್ಸೂ ಇರುವುದಿಲ್ಲ. ಈ ಮುಂಚೆ, ಕೆಲ ತಿಂಗಳುಗಳ ಹಿಂದೆ ಇದ್ದ ಒಂದೇ ಒಂದು ನಾನ್-ಎಸಿ ಸ್ಲೀಪರ್ ಬಸ್ ಸಂಚಾರವನ್ನು ಏಕಾಏಕಿ ಸ್ಥಗಿತಗೊಳಿಸಲಾಗಿದೆ ಎಂಬುದನ್ನು ವಿಭಾಗೀಯ ನಿಯಂತ್ರಕರ ಗಮನಕ್ಕೆ ತರಲಾಯಿತು.

ಕೊಪ್ಪಳ-ಬೆಂಗಳೂರು ಮಾರ್ಗದಲ್ಲಿ ಎಸಿ ಮತ್ತು ನಾನ್-ಎಸಿ ಸ್ಲೀಪರ್ ಬಸ್ಗಳಿಗೆ ಎಷ್ಟು ಬೇಡಿಕೆ ಇದೆಯೆಂದರೆ, ಖಾಸಗಿ ಟ್ರಾವೆಲ್ ಏಜೆನ್ಸಿಗಳು ದಿನಕ್ಕೆ ಅಂತಹ ೨೦ ಬಸ್ಗಳನ್ನು ಕಾರ್ಯಾಚರಿಸುತ್ತಿವೆ. ಈ ಎಲ್ಲ ಬಸ್ಗಳೂ ಭರ್ತಿಯಾಗಿಯೇ ಹೋಗುತ್ತಿರುವುದು, ಈ ಮಾರ್ಗಕ್ಕೆ ಇರುವ ಬೇಡಿಕೆಯ ಪ್ರಮಾಣಕ್ಕೆ ನಿದರ್ಶನವಾಗಿದೆ ಎಂದು ಕೃಷ್ಣ ಇಟ್ಟಂಗಿ ವಿವರಿಸಿದರು.

ಆದರೆ, ಖಾಸಗಿ ಟ್ರಾವೆಲ್ ಏಜೆನ್ಸಿಗಳು ಹಬ್ಬ, ಸಾಲುಸಾಲು ಸಾರ್ವತ್ರಿಕ ರಜಾದಿನಗಳು, ಹಾಗೂ ವಾರಾಂತ್ಯದಲ್ಲಿ ಬೇಕಾಬಿಟ್ಟಿಯಾಗಿ ದರಗಳನ್ನು ಹೆಚ್ಚಿಸುತ್ತವೆ. ಇದನ್ನು ತಡೆಗಟ್ಟಲು ತಮ್ಮ ಇಲಾಖೆಯೂ ಸೇರಿದಂತೆ ಇತರ ಇಲಾಖೆಗಳು ಯಾವುದೇ ಪರಿಣಾಮಕಾರಿ ಕ್ರಮವನ್ನು ಕೈಗೊಂಡಿರುವುದಿಲ್ಲ. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಸ್ಲೀಪರ್ ಬಸ್ಗಳ ಅನುಪಸ್ಥಿತಿಯಿಂದಾಗಿ, ಖಾಸಗಿ ಟ್ರಾವೆಲ್ ಏಜೆನ್ಸಿಗಳ ಸುಲಿಗೆಗೆ ತಮ್ಮ ಸಂಸ್ಥೆಯೇ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಅವಕಾಶ ಮಾಡಿಕೊಟ್ಟಂತಾಗಿದೆ. ಸಾರಿಗೆ ನಿಗಮವೇ ಈ ಖಾಸಗಿ ಟ್ರಾವೆಲ್ ಏಜೆನ್ಸಿಗಳ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡು ಕೊಪ್ಪಳ-ಬೆಂಗಳೂರು ಮಾರ್ಗವಾಗಿ ಸ್ಲೀಪರ್ ಬಸ್ಗಳನ್ನು ರದ್ದುಗೊಳಿಸಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ ಎಂಬ ವಿಷಯವನ್ನು ವಿಭಾಗೀಯ ನಿಯಂತ್ರಕರ ಗಮನಕ್ಕೆ ತರಲಾಯಿತು.

ಈ ಹಿನ್ನೆಲೆಯಲ್ಲಿ

ಅ) ಕೊಪ್ಪಳ-ಬೆಂಗಳೂರು ಮಾರ್ಗವಾಗಿ ಎಸಿ ಮತ್ತು ನಾನ್-ಎಸಿ ಸ್ಲೀಪರ್ ಬಸ್ಗಳ ಸಂಖ್ಯೆಯನ್ನು, ಸದ್ಯ ಓಡಾಡುತ್ತಿರುವ ಖಾಸಗಿ ಟ್ರಾವೆಲ್ ಏಜೆನ್ಸಿಗಳ ಬಸ್ಗಳ ಸಂಖ್ಯೆಯ ಅರ್ಧದಷ್ಟನ್ನಾದರೂ ತಕ್ಷಣದಿಂದ ಒದಗಿಸಬೇಕು.

ಆ) ಕೊಪ್ಪಳದಿಂದ ಬೆಂಗಳೂರಿಗೆ ಕೆಲಸದ ಮೇಲೆ ಹೋಗುವಂತಹ ಪ್ರಯಾಣಿಕರು ದೊಡ್ಡ ಸಂಖ್ಯೆಯಲ್ಲಿರುವುದರಿಂದ, ಬೆಳಗಿನ ಜಾವ ೪.೩೦ರಿಂದ ೫ ಗಂಟೆಯ ವೇಳೆಗೆ ಒಂದಾದರೂ ಎಕ್ಸ್ಪ್ರೆಸ್ ಬಸ್ನ್ನು ಬಿಡಬೇಕು. ಇದಕ್ಕೆ ಕಡಿಮೆ ನಿಲುಗಡೆಗಳನ್ನು ವಿಧಿಸುವ ಮೂಲಕ, ಸದರಿ ಬಸ್ ಬೆಂಗಳೂರಿಗೆ ೧೧ ಗಂಟೆಯ ಹೊತ್ತಿಗೆ ತಲುಪುವಂತೆ ಮಾಡಬೇಕು. ಈ ರೀತಿಯ ಬಸ್ಗಳು ಈಗಾಗಲೇ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಜಾರಿಯಲ್ಲಿರುವುದನ್ನು ತಾವು ಪರಿಶೀಲಿಸಬಹುದು.

ಅದೇ ಬಸ್ ಸಂಜೆ ೫ ಗಂಟೆಗೆ ಬೆಂಗಳೂರಿನಿಂದ ಕೊಪ್ಪಳಕ್ಕೆ ಹೊರಡುವಂತೆ ಸಮಯ ನಿಗದಿಪಡಿಸಬೇಕು. ಸರಕಾರಿ ಕೆಲಸಗಳನ್ನು ಮುಗಿಸಿಕೊಂಡು ಪ್ರಯಾಣಿಕರು ರಾತ್ರಿ ೧೧ರ ವೇಳೆಗೆ ಕೊಪ್ಪಳ ತಲುಪಲು ಇದರಿಂದ ನೆರವಾಗುತ್ತದೆ.

ಇ) ಇದೇ ರೀತಿ ಅತ್ಯಂತ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕೊಪ್ಪಳ-ಬೀದರ್ ಮಾರ್ಗದಲ್ಲಿ ತಕ್ಷಣದಿಂದ ಒಂದು ನಾನ್-ಎಸಿ ಸ್ಲೀಪರ್ ಬಸ್ನ್ನು ಓಡಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಕೇಂದ್ರದಿಂದ ಪ್ರಾದೇಶಿಕ ವಿಭಾಗ ಕೇಂದ್ರವಾದ ಕಲಬುರ್ಗಿ ತಲುಪಲು ಒಂದೇ ಒಂದು ಸ್ಲೀಪರ್ ಬಸ್ ಇಲ್ಲದಿರುವುದು ನಿಜಕ್ಕೂ ವಿಷಾದನೀಯ.

ಈ) ಸಣ್ಣ ಪಟ್ಟಣಗಳಲ್ಲಿ ಪಲ್ಲಕ್ಕಿ ಮಾದರಿಯ ಬಸ್ಗಳು ಸಂಚರಿಸುತ್ತಿವೆ. ಕೊಪ್ಪಳ ಜಿಲ್ಲಾ ಕೇಂದ್ರವಾಗಿದ್ದು, ಇಲ್ಲಿಂದಲೂ ಪಲ್ಲಕ್ಕಿ ಬಸ್ ಸಂಚಾರವನ್ನು ಪ್ರಾರಂಭಿಸಬೇಕು ಎಂಬ ಬೇಡಿಕೆಗಳನ್ನು ಮಂಡಿಸಲಾಯಿತು.

ಮನವಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ವಿಭಾಗೀಯ ನಿಯಂತ್ರಕರಾದ ವೆಂಕಟೇಶ್ ಅವರು, ಈ ಕುರಿತು ತಾವು ಸೂಕ್ತ ನಿರ್ಧಾರವನ್ನು ಆದಷ್ಟು ಬೇಗ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!