3

ವರ್ಷದೊಳಗಿನ ಮಕ್ಕಳ ಆರೋಗ್ಯಕ್ಕಾಗಿ ‘ಕಿಲ್ಕಾರಿ’ ಮೊಬೈಲ್ ಕರೆ ಮೂಲಕ ಕಾಳಜಿ : ಡಾ.ಶ್ವೇತಾ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 8- ಕೇಂದ್ರ ಸರ್ಕಾರವು 4 ತಿಂಗಳು ಮೇಲ್ಪಟ್ಟ ಗರ್ಭಿಣಿ ಮಹಿಳೆಯ ಹಾಗೂ ಒಂದು ವರ್ಷದೊಳಗಿನ ಮಕ್ಕಳಿಗೆ ಕುಟುಂಬದ ಸದಸ್ಯರು ವಹಿಸಬೇಕಾದ ಕಾಳಜಿ, ಲಸಿಕೆ ಒದಗಿಸುವಿಕೆ ಹಾಗೂ ಇತರೆ ತಪಾಸಣೆ ಕೈಗೊಳ್ಳಲು ಸಹಾಯಕವಾಗುವ ದಿಶೆಯಲ್ಲಿ ದೇಶಾದ್ಯಂತ ಎಲ್ಲ ಭಾಷೆಗಳಲ್ಲಿ ವಿನೂತನ ಕಾರ್ಯಕ್ರಮ ‘ಕಿಲ್ಕಾರಿ’ ಮೊಬೈಲ್ ಕರೆ ಆರಂಭಿಸಲಾಗಿದೆ ಎಂದು ಕಿಲ್ಕಾರಿ ಕಾರ್ಯಕ್ರಮದ ರಾಜ್ಯ ಸಲಹೆಗಾರರಾದ ಡಾ.ಶ್ವೇತಾ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿ ಜಿಲ್ಲಾ ಮಟ್ಟದಲ್ಲಿ ಆಶಾ ಮೇಲ್ವಿಚಾರಕರು ಹಾಗೂ ಗ್ರಾಮೀಣ ಭಾಗದಲ್ಲಿಯ ಆಶಾ ಸುಗಮಕಾರರಿಗೆ ನಗರದ ಜಿಲ್ಲಾ ಲಸಿಕಾ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತರಬೇತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಳೆದ ಅಕ್ಟೋಬರ್ ತಿಂಗಳಲ್ಲಿ ಅನುಷ್ಠಾನಗೊಳಿಸಿರುವ ‘ಕಿಲ್ಕಾರಿ’ ಕಾರ್ಯಕ್ರಮದಡಿ ಅರ್‌ಸಿಹೆಚ್ ಪೋರ್ಟಲ್‌ನಲ್ಲಿ ನೋಂದಾಯಿಸಿದ ಗರ್ಭಿಣಿ ಅಥವಾ ಕುಟುಂಬದ ಸದಸ್ಯರ ಮೊಬೈಲ್ ಸಂಖ್ಯೆಗೆ ಪ್ರತಿವಾರ ಕರೆ ಮಾಡುವ ಮೂಲಕ ಕಾಳಜಿ ವಹಿಸಲಾಗುವುದು ಎಂದು ತಿಳಿಸಿದರು.

ಮೊಬೈಲ್ ಸಂಖ್ಯೆ 0124-4588000ರ ಮೂಲಕ ಸಂಪರ್ಕಿಸಿ ಪಾಲಕರೊಂದಿಗೆ ಮಾತನಾಡಲಾಗುವುದು. ಹಾಗಾಗಿ ಕುಟುಂಬದ ಸದಸ್ಯರು ತಾಯಿ ಮಗುವಿನ ಸುಸ್ಥಿರ ಆರೋಗ್ಯಕ್ಕಾಗಿ ಸಹಕರಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ಮಾತನಾಡಿ, ಗರ್ಭಿಣಿ ಎಂದು ತಿಳಿದ ದಿನದಿಂದಲೇ ಆರೋಗ್ಯ ಇಲಾಖೆ ಮೂಲಕ ತಾಯಿ ಕಾರ್ಡ್ ವಿತರಣೆ, ಟಿಡಿ ಚುಚ್ಚುಮದ್ದು ನೀಡುವಿಕೆ, ರಕ್ತ ಹೀನತೆ ತಡೆಗೆ ಕನಿಷ್ಠ ೧೮೦ ಕಬ್ಬಿಣಾಂಶ ಮಾತ್ರೆಗಳ ವಿತರಣೆ, ಪ್ರತಿ ತಿಂಗಳು ವೈದ್ಯರಿಂದ ತಪಾಸಣೆ, ರಕ್ತಪರೀಕ್ಷೆ, ಹುಟ್ಟಿನಿಂದ ಒಂದು ವರ್ಷದೊಳಗಿನ ಮಕ್ಕಳಿಗೆ ನೀಡಬೇಕಾದ ಲಸಿಕೆ ಕುರಿತು ಪಾಲಕರಿಗೆ ಮನನ ಮಾಡುವ ಮಹತ್ವಪೂರ್ಣ ಕಾರ್ಯಕ್ರಮ ಇದಾಗಿದೆ ಎಂದರು.

ಜಿಲ್ಲೆಯಲ್ಲಿ ಪ್ರತಿ 09 ಮತ್ತು 14 ತಾರೀಖಿನಂದು ಎಲ್ಲ ಗರ್ಭಿಣಿಯರ ತಪಾಸಣೆಯನ್ನು ಮಾಡಲಾಗುತ್ತಿದ್ದು, ಎಲ್ಲ ಮಾಹಿತಿಯನ್ನು ಪೋನ್ ಮೂಲಕ ಪಾಲಕರಿಗೆ ಮಾಹಿತಿ ವಿನಿಮಯ ಮಾಡುವ ಮೂಲಕ ಮಗುವಿನ ಆರೋಗ್ಯದ ಕಾಳಜಿ ವಹಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಜಿಲ್ಲಾ ವಿಹೆಚ್‌ಎಸ್‌ಎನ್‌ಸಿ ಸಂಯೋಜಕ ರಾಘವೇಂದ್ರ, ಜಿಲ್ಲಾ ಆಶಾ ಸಂಯೋಜಕಿ ಆಶಾ ಪ್ರೇಮಲತಾ, ರಾಘವೇಂದ್ರ, ಸಹಾಯಕ ಸಾಂಖಿಕ ಅಧಿಕಾರಿ ಮಹಾದೇವಿ, ತಾಲ್ಲೂಕು ಆಶಾ ಮೇಲ್ವಿಚಾರಕರಾದ ನೇತ್ರಾ, ಸುಜಾತಾ, ರೇಣುಕಾ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!