
ಕಾಂಗ್ರೆಸ್‍ಗೆ ಡಿಬಿಸಿ ಮೇಲೆ ವಿಶ್ವಾಸ : ಡಾ.ಸುಧಾಂಶು ತ್ರಿವೇದಿ
ಕರುನಾಡ ಬೆಳಗು ಸುದ್ದಿ
ಬೆಂಗಳೂರು, 28- ಬಿಜೆಪಿ ಸರಕಾರವು ಡಿಬಿಟಿ (ಡೈರೆಕ್ಟ್ ಬೆನೆಫಿಟ್ ಟ್ರಾನ್ಸ್‍ಫರ್) ಮೇಲೆ ವಿಶ್ವಾಸವಿಟ್ಟರೆ, ಕಾಂಗ್ರೆಸ್ಸಿಗರು ಡಿಬಿಸಿ (ಡೈರೆಕ್ಟ್ ಬೆನೆಫಿಟ್ ಟು ಕಾಂಗ್ರೆಸ್) ಮೇಲೆ ವಿಶ್ವಾಸ ಇಟ್ಟವರು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಡಾ.ಸುಧಾಂಶು ತ್ರಿವೇದಿ ಅವರು ಆರೋಪಿಸಿದರು.
ದೆಹಲಿಯಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಡಿಜಿಟಲ್ ಕ್ಯಾಪಿಟಲ್ ಬೆಂಗಳೂರಿನಲ್ಲಿ ಇ ಆಕ್ಷನ್ (ಇ ಹರಾಜು) ನಡೆಯುತ್ತಿಲ್ಲವೇಕೆ? ಪ್ರಧಾನಿ ನರೇಂದ್ರ ಮೋದಿಜೀ ಯವರು ಡಿಬಿಟಿ ಜಾರಿಗೊಳಿಸಿದರು. ಇವರು ಇ ಆಕ್ಷನ್ ಮಾಡುತ್ತಿಲ್ಲ. ಇವರಿಗೆ ಡಿಬಿಸಿಯಲ್ಲಿ ವಿಶ್ವಾಸ ಇರುವುದೇ ಇದಕ್ಕೆ ಕಾರಣ ಎಂದು ಹೇಳಿದರು.
ಇದೇ ಕಾರಣಕ್ಕೆ ಇ ಆಕ್ಷನ್ (ಇ ಏಲಂ) ಮಾಡಲು ಕರ್ನಾಟಕ ಸರಕಾರ ಮುಂದಾಗಲಿಲ್ಲ. ಮೂಡ ಹಗರಣ, ವಾಲ್ಮೀಕಿ ನಿಗಮದ ಹಗರಣಗಳ ಬಳಿಕ ಇದೀಗ ಇನ್ನೊಂದು ಭೂಮಿ ಹಗರಣ ಕರ್ನಾಟಕದಲ್ಲಿ ಬೆಳಕಿಗೆ ಬಂದಿದೆ ಎಂದರು.
ಈ ಹಗರಣ ಬೆಳಕಿಗೆ ಬಂದ ಬಳಿಕ ಸಿದ್ದರಾಮಯ್ಯನವರು ದೆಹಲಿಗೆ ಬಂದಿದ್ದರು. ಮಲ್ಲಿಕಾರ್ಜುನ ಖರ್ಗೆಯವರು ಬೆಂಗಳೂರಿಗೆ ತೆರಳಿದ್ದರು. ಯಾರು ಯಾರನ್ನು ರಕ್ಷಿಸಲು, ಯಾರು ಯಾರನ್ನು ದೂರ ಮಾಡಲು ತೆರಳಿದ್ದಾರೆ ಎಂಬುದನ್ನು ನಿಮ್ಮ ಊಹೆಗೆ ಬಿಡುತ್ತೇನೆ ಎಂದು ನಗುತ್ತ ತಿಳಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರದ ಹೊಸ ಹೊಸ ಹಗರಣಗಳು ಬೆಳಕಿಗೆ ಬಂದಿವೆ. ಮೊದಲು ಪರಿಶಿಷ್ಟ ಜಾತಿ, ಜನಾಂಗಕ್ಕೆ ಸಂಬಂಧಿಸಿದ ವಾಲ್ಮೀಕಿ ನಿಗಮದ ಭ್ರಷ್ಟಾಚಾರ ನಡೆದುದು ಗೊತ್ತಾಗಿದೆ. ಜಾತಿ ಸಮೀಕ್ಷೆ ನಡೆಸಲು ಒತ್ತಾಯಿಸುವ ರಾಹುಲ್ ಗಾಂಧಿಯವರ ನೇರ ಸರಕಾರ ಅಲ್ಲಿದೆ. ಇಂಡಿ ಒಕ್ಕೂಟದ ಸರಕಾರ ಅದಲ್ಲ ಎಂದು ವ್ಯಂಗ್ಯವಾಗಿ ತಿಳಿಸಿದರು.
ವಾಲ್ಮೀಕಿ ನಿಗಮದ ಅವ್ಯವಹಾರದಿಂದ ವಾಹನಗಳನ್ನು ಖರೀದಿಸಲಾಯಿತು. ಒಡವೆಗಳನ್ನೂ ಖರೀದಿ ಮಾಡಲಾಯಿತು. ಆರಂಭದಲ್ಲಿ ಇದನ್ನು ಅಲ್ಲಗಳೆಯಲಾಯಿತು. ನಂತರ ಮುಖ್ಯಮಂತ್ರಿಗಳೇ ಇದನ್ನು ಒಪ್ಪಿಕೊಂಡರು. ನಂತರ ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಗರಣ ಬೆಳಕಿಗೆ ಬಂದಿದೆ. ಇದರಡಿ ಮುಖ್ಯಮಂತ್ರಿಗಳ ಕುಟುಂಬ ಭಾಗಿಯಾದ ದೂರಿದ್ದು, ಇದರ ಕುರಿತು ತನಿಖೆಗೆ ಮಾನ್ಯ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ ಎಂದು ವಿವರಿಸಿದರು.
ಹೈಟೆಕ್ ಪಾರ್ಕ್‍ನಲ್ಲಿ ಭೂಮಿ ಮಂಜೂರಾತಿ ಆಗಬೇಕಿತ್ತು. 14-2-2024ರಂದು ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆಯು ನಿಗದಿತ ಜಾಗವನ್ನು ಕೊಡಲು ಪತ್ರ ಬರೆದಿತ್ತು. ಆದರೆ, ಇಲಾಖೆಗೆ ಜಾಗ ಕೊಡದೇ ಇನ್ಯಾರಿಗೋ ಮಂಜೂರು ಮಾಡಿದ್ದಾರೆ. ಇಲ್ಲಿ ಕಾಂಗ್ರೆಸ್ ಕಲ್ಯಾಣ ಮತ್ತು ಕುಟುಂಬದ ಕಲ್ಯಾಣ ಮಹತ್ವದ್ದಾಗಿದೆ ಎಂದು ಟೀಕಿಸಿದರು.
ಈ ಜಾಗದ ವಿಷಯದಲ್ಲಿ ಸರಕಾರದಲ್ಲಿ ಶಕ್ತಿಶಾಲಿ ವ್ಯಕ್ತಿ, ಕಾಂಗ್ರೆಸ್ ಅಧ್ಯಕ್ಷರ ಮತ್ತು ಅವರ ಕುಟುಂಬದ ಹೆಸರು ಮುನ್ನೆಲೆಗೆ ಬಂದಿದೆ. ಬೆಂಗಳೂರನ್ನು ದೇಶದ ಹೈಟೆಕ್ ಕ್ಯಾಪಿಟಲ್ ಎಂದೇ ಪರಿಗಣಿಸುತ್ತೇವೆ. ಬುದ್ಧಿವಂತರ ರಾಜಧಾನಿ ಎಂದೂ ಕರೆಯಬಹುದು. ಅದೊಂದು ಮಾದರಿ ಪ್ರದೇಶ. ಹಿಂದೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಬೀಜಿಂಗ್ ಮತ್ತು ಬೆಂಗಳೂರಿನ ಜೊತೆ ಸ್ಪರ್ಧೆ ಮಾಡಲು ಮಕ್ಕಳನ್ನು ಸಿದ್ಧಗೊಳಿಸುವ ಮಾತನಾಡಿದ್ದರು ಎಂದು ಗಮನ ಸೆಳೆದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಆಳ್ವಿಕೆ ಬಂದ ಬಳಿಕ ವಿದೇಶಿ ನೇರ ಹೂಡಿಕೆ (ಎಫ್‍ಡಿಐ) ಕಡಿಮೆ ಆದುದರ ಕುರಿತು ಅವರು ಅಂಕಿ ಅಂಶಗಳೊಂದಿಗೆ ಗಮನ ಸೆಳೆದರು.
ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿಯವರು ವೈದ್ಯರನ್ನು ಬೆದರಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.