
ಬಳ್ಳಾರಿ : ಆದಿತ್ಯ ಟೆಕ್ಸ್ ಟೈಲ್ ಪಾರ್ಕ್‍ಗೆ ಚಾಲನೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 17- ಬಳ್ಳಾರಿಯ ಗಾರ್ಮೆಂಟ್ಸ್ ಉದ್ಯಮಕ್ಕೆ ರಾಷ್ಟ್ರಮಟ್ಟದ ಮನ್ನಣೆ ನೀಡುವ ನಿಟ್ಟಿನಲ್ಲಿ ಭಾರತದ ಪ್ರಪ್ರಥಮ ಜೀನ್ಸ್ ಉತ್ಪಾದನೆ ಮತ್ತು ಟೆಕ್ಸ್ ಟೈಲ್ ಮಾರ್ಕೆಟಿಂಗ್‍ಗಾಗಿ ಆದಿತ್ಯ ಟೆಕ್ಸ್‍ಟೈಲ್ ಪಾರ್ಕ್‍ಗೆ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ. ಮಹಾರುದ್ರಗೌಡ ಅವರು, ಯೋಜನೆಗೆ ಚಾಲನೆ ನೀಡಿ, ಆದಿತ್ಯ ಟೆಕ್ಸ್ ಟೈಲ್ ಪಾರ್ಕ್ ರೂಪನಗುಡಿಯ ತಲಮಾಮಿಡಿ ಗ್ರಾಮದ ವ್ಯಾಪ್ತಿಯಲ್ಲಿ ಹದಿನೇಳು ಎಕರೆ ಭೂ ಪ್ರದೇಶದಲ್ಲಿ ಖಾಸಗಿ ವಲಯದಲ್ಲಿ ಪ್ರಾರಂಭವಾಗುತ್ತಿದೆ. ಈ ಯೋಜನೆಗೆ ಕರ್ನಾಟಕ ಸರ್ಕಾರ ಮಾನ್ಯತೆ ನೀಡಿದೆ ಎಂದರು.
ಈ ಉದ್ಯಮವು ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾದಾಗ ಭಾರತ ದೇಶದಲ್ಲಿಯೇ ವಿಶೇಷವಾಗಿರುವ ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ರಾಷ್ಟ್ರಮಟ್ಟದ ಮನ್ನಣೆ ಸಿಗಲಿದೆ. 2022ರ ನವೆಂಬರ್‍ನಲ್ಲಿ ನಡೆದ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್‍ನಲ್ಲಿ ಪಾಲ್ಗೊಂಡು ಕರ್ನಾಟಕದ ಕೈಮಗ್ಗ ಮತ್ತು ಜವಳಿ ಇಲಾಖೆಯ ಮಾನ್ಯತೆ ಪಡೆದಿರುವ ಈ ಯೋಜನೆಗೆ ಸರ್ಕಾರದ ಎಲ್ಲಾ ಸೌಲಭ್ಯಗಳು ಸಿಗಲಿವೆ.
ಈ ಯೋಜನೆಯ ನಿರ್ದೇಶಕ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ `ನವ ಉದ್ಯಮಿ’ ಪ್ರಶಸ್ತಿ ಪುರಸ್ಕೃತ ಜಿ. ಮಲ್ಲಿಕಾರ್ಜುನಗೌಡ ಮತ್ತು ವಿನಯ್ ಕುಮಾರ್ ಜೈನ್ ಅವರು, ಬಳ್ಳಾರಿಯಿಂದ ಕೇವಲ 10 ಕಿಲೋಮೀಟರ್ ದೂರದ ವಿಘ್ನೇಶ್ವರ ಕ್ಯಾಂಪ್‍ನಲ್ಲಿ 15 ಸಾವಿರ ಉದ್ಯೊಗ ಸೃಷ್ಠಿ, ದಿನಕ್ಕೆ 1 ಲಕ್ಷ ಜೀನ್ಸ್ ಉಡುಪುಗಳ ಉತ್ಪಾದನೆಯ ಜೊತೆಯಲ್ಲಿ 4 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆಯ ಗುರಿಯೊಂದಿಗೆ ಯೋಜನೆ ಪ್ರಾರಂಭವಾಗಲಿದೆ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು, ಯೋಜನೆಯ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾದಲ್ಲಿ ಬಳ್ಳಾರಿಯು ಭಾರತದಲ್ಲಿಯೇ ಅತಿ ದೊಡ್ಡದಾದ ಗಾರ್ಮೆಂಟ್ ಹಬ್ ಆಗಲಿದೆ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು, ಆದಿತ್ಯ ಟೆಕ್ಸ್ ಟೈಲ್ ಪಾರ್ಕ್ ಯೋಜನೆಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ `ನವ ಉದ್ಯಮಿ’ ಪ್ರಶಸ್ತಿ ಬಂದಿದ್ದು, ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಆಶಾಕಿರಣವಾಗಿದೆ ಎಂದು ಹೇಳಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.