ಕಿನ್ನಾಳ ದತ್ತು ಗ್ರಾಮ ಅ. 2 ಮತ್ತು 3 ರಂದು ಚಾಲನೆ
ಪ್ರಧಾನ ಜಿಲ್ಲಾ ಮತ್ತು ಸತ್ರ ನಾಯಾಧೀಶ ಚಂದ್ರಶೇಖರ್ ಸಿ.
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 30- ಸ್ವಚ್ಛತಾ ಹಿ ಸೇವಾ 2024ರ ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ ಅಭಿಯಾನದಡಿಯಲ್ಲಿ ಕಿನ್ನಾಳ ಗ್ರಾಮ ಸ್ವಚ್ಚತಾ ಕಾರ್ಯಕ್ರಮ ಹಾಗೂ ದತ್ತು ಗ್ರಾಮದ ಉದ್ಘಾಟಾನ ಕಾರ್ಯಕ್ರಮ ಅ. 2 ಮತ್ತು 3 ರಂದು ಜರುಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನಾಯಾಧೀಶರಾದ ಚಂದ್ರಶೇಖರ್ ಸಿ. ಹೇಳಿದರು.
ಅವರು ಜಿಲ್ಲಾ ನ್ಯಾಯಲಯ ಸಂಕೀರ್ಣದಲ್ಲಿ ಸೋಮುವಾರ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿ, ಕೊಪ್ಪಳದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಿನ್ನಾಳ ಗ್ರಾಮ ಪಂಚಾಯತ್, ಸಂಘ ಸಂಸ್ಥೆಗಳು, ಹಾಗೂ ಗ್ರಾಮಸ್ಥರುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಅ 2 ರಂದು ಸ್ವಚ್ಛತಾ ಹಿ ಸೇವಾ 2024ರ ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ ಅಭಿಯಾನದಡಿಯಲ್ಲಿ ಕಿನ್ನಾಳ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮವು ಅಕ್ಟೋಬರ್ 2ರಂದು ಬುಧವಾರ ಬೆಳಿಗ್ಗೆ 8 ಗಂಟೆಗೆ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಯ ಆವರಣದಲ್ಲಿ ಜರುಗಲಿದ್ದು ಸ್ವಚ್ಚತಾ ಕಾರ್ಯಕ್ರಮದಲ್ಲಿ ಗ್ರಾಮದ ವಿವಿಧ ಸಂಘ ಸಂಸ್ಥೆಗಳು ಹಾಗೂ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಅಲಬಣ್ಣ ವಿ. ಕಣವಿ ಅವರು ಭಾಗವಹಿಸುವರು. ಕಿನ್ನಾಳ ಗ್ರಾಮ ಪಂಚಾಯತನ ಅಧ್ಯಕ್ಷರಾದ ಕರಿಯಮ್ಮ ಮಲ್ಲಪ್ಪ ಉಪ್ಪಾರ ಅವರು ಘನ ಉಪಸ್ಥಿತಿ ವಹಿಸುವರು. ಕಿನ್ನಾಳ ಗ್ರಾಮ ಪಂಚಾಯತನ ಉಪಾಧ್ಯಕ್ಷರಾದ ದುರಗಪ್ಪ ಡಂಬರ ಅವರು ಉಪಸ್ಥಿತಿ ವಹಿಸುವರು.
ದತ್ತು ಗ್ರಾಮ ಉದ್ಘಾಟನೆ : ಕಿನ್ನಾಳ ದತ್ತು ಗ್ರಾಮ ಉದ್ಘಾಟನೆ ಸ್ವಾಮಿ ವಿವೇಕಾಂದ ವೃತ್ತದಲ್ಲಿ ಅ.3 ರಂದು ಸಂಜೆ 6 ಗಂಟೆಗೆ ಜರುಗಲಿದ್ದು ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು ಉದ್ಘಾಟಿಸಲಿದ್ದಾರೆ.
ಅಥಿತಿಗಳಾಗಿ ಜಿಲ್ಲಾಧಿಕಾರಿ ನಳಿನ್ ಅತುಲ್, ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ರತ್ನಂ ಪಾಂಡೆಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಢಾ. ರಾಮ್ ಅರಿಸಿದ್ದಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಲಬಣ್ಣ ವಿ. ಕಣವಿ, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಕರಿಯಮ್ಮ ಉಪ್ಪಾರ, ಉಪಾಧ್ಯಕ್ಷ ದುರುಗಪ್ಪ ಡಂಬರ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಶೇಖರ.ಸಿ ಅವರು ಮತ್ತು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಸಂಗಪ್ಪ ದರ್ಗಾದ್ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಗ್ರಾಮ ದತ್ತು ಪಡೆದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಕಾನೂನು ನೇರವು ಅರಿವಿನ ಮೂಲಕ ವ್ಯಾಜ್ಯ ಹಾಗೂ ತ್ಯಾಜ್ಯ ಮುಕ್ತ ಮತ್ತು ದೂರು ಮುಕ್ತ ಗ್ರಾಮವನ್ನಾಗಿ ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳ ಸಹಕಾರದೊಂದಿಗೆ ಒಂದು ವರ್ಷದ ಅವಧಿಯಲ್ಲಿ ಅಭಿವೃದ್ಧಿ ಪಡಿಸಲು ಶ್ರಮಿಸುವುದಾಗಿ ತಿಳಿಸಿದರು.