
ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯಿಂದ ಗಾಂಧಿ ಜಯಂತಿ ಆಚರಣೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 2- ಭಾರತ ದೇಶದ ಸ್ವತಂತ್ರ ಸಂಗ್ರಾಮದಲ್ಲಿ ಜನಜಾಗೃತಿ ಮೂಡಿಸಲು ಪೂಜ್ಯ ಮಹಾತ್ಮ ಗಾಂಧೀಜಿಯವರು ದಿನಾಂಕ ೧-೧೦-೧೯೨೧ ರಂದು ರೈಲಿನಲ್ಲಿ ಬಳ್ಳಾರಿಗೆ ಆಗಮಿಸಿದ್ದು ಸ್ವತಂತ್ರ ಹೋರಾಟಗಾರರು ಹಾಗೂ ದೇಶಭಕ್ತರ ಸಮಾವೇಶದ ನಂತರ ನಗರದ ಅತಿಥಿಗೃಹದಲ್ಲಿ ತಂಗದೆ ಎರಡು ಗುಂಪುಗಳಾಗಿರುವ ಕಾಂಗ್ರೆಸ್ ಮುಖಂಡರ ಮನೆಗೆ ಹೋಗದೆ ಬಳ್ಳಾರಿಯ ರೈಲು ನಿಲ್ದಾಣದಲ್ಲಿ ನೆಲದ ಮೇಲೆ ರಾತ್ರಿ ೮ ಗಂಟೆಗಳ ಕಾಲ ವಿಶ್ರಾಂತಿ ಪಡೆದಿರುವ ಸ್ಥಳದಲ್ಲಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ವತಿಯಿಂದ ಪೂಜ್ಯ ಗಾಂಧೀಜಿಯವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು ಹಾಗೂ ಸಕ್ರಿಯ ಸದಸ್ಯರು ಮತ್ತು ಬಳ್ಳಾರಿಯ ಪ್ರಜ್ಞಾವಂತ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜ್ಯಮಹಾತ್ಮ ಗಾಂಧೀಜಿ ಅವರಿಗೆ ಹಾಗೂ ಭಾರತ ದೇಶಕ್ಕೆ ಜೈಕಾರ ಹಾಕಿ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಶ್ರೀ ಕಲ್ಯಾಣ ಸ್ವಾಮಿ ಮಠದ ಸ್ವಾಮೀಜಿಯವರ ಸಾನಿಧ್ಯದಲ್ಲಿ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ ಕೆ.ಯಂ.ಮಹೇಶ್ವರ ಸ್ವಾಮಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಕಲ್ಯಾಣ ಸ್ವಾಮಿಗಳು, ಸಮಿತಿ ಅಧ್ಯಕ್ಷ ಮಹೇಶ್ವರ ಸ್ವಾಮಿ, ರೈಲ್ವೆ ಅಧಿಕಾರಿ ನಾಗೇಶ್ ಬಾಬು, ವಕೀಲ ದತ್ತಾತ್ರೇಯ ರೆಡ್ಡಿ, ರಾಮಚಂದ್ರಯ್ಯ ಮಾತನಾಡಿ, ಗಾಂಧೀಜಿಯವರುಆದರ್ಶ ತತ್ವಗಳನ್ನು ಸರಳತೆಯನ್ನು ಜನತೆ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಬಳ್ಳಾರಿ ರೈಲ್ವೆ ನಿಲ್ದಾಣದ ಮ್ಯಾನೇಜರ್ ನಾಗೇಶ್ ಬಾಬು ಸೇರಿದಂತೆ ಅನೇಕ ರೈಲ್ವೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಮಿತಿಯ ಅಧ್ಯಕ್ಷ ಮಹೇಶ್ವರ ಸ್ವಾಮಿ ಗಾಂಧೀಜಿಯವರ ಸ್ವಚ್ಛತೆಯ ಪ್ರತಿಜ್ಞಾ ವಿಧಿಯನ್ನು ಸಭಿಕರಿಗೆ ಬೋಧಿಸಿದರು.
ನಂತರ ಎಲ್ಲರೂ ರೈಲ್ವೆ ನಿಲ್ದಾಣದ ಆವರಣದಲ್ಲಿ ಕಸ ಬಳೆಯುವುದರ ಮೂಲಕ ರೈಲ್ವೆ ಕಾರ್ಮಿಕರೊಂದಿಗೆ ಸ್ವಚ್ಛತೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ರೈಲ್ವೆ ವಿಭಾಗದ ಸಲಹಾ ಸಮಿತಿ ಸದಸ್ಯರಾಗಿ ಎರಡು ವರ್ಷದ ಅವಧಿಗೆ ನೇಮಕೊಂಡಿರುವ ಕೆಎಂ ಕೊಟ್ರೇಶ್, ಸೊಂತ ಗಿರಿಧರ, ಗೋಪಾಲ್ ಕೃಷ್ಣ, ರಾಹುಲ್ ಕುಮಾರ್ ಇವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.