ರೈಲು ನಿಲ್ದಾಣಕ್ಕೆ ಗವಿಸಿದ್ದೇಶ್ವರ ಹೆಸರಿಡಿ
ಡಾ. ಬಸವರಾಜ ಕ್ಯಾವಟರ್ ಒತ್ತಾಯ
krunada belagu suddi
ಕೊಪ್ಪಳ,01- ಜಿಲ್ಲಾ ಕೇಂದ್ರದ ರೈಲು ನಿಲ್ದಾಣಕ್ಕೆ ಶ್ರೀ ಗವಿಸಿದ್ದೇಶ್ವರ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈಲು ನಿಲ್ದಾಣಗಳಿಗೆ ಜಿಲ್ಲೆಯ ಐತಿಹಾಸಿಕ ತಾಣಗಳ ಹೆಸರಿಡುವ ಕುರಿತು ರಾಜ್ಯ ಸರಕಾರ ಕೊಪ್ಪಳ ರೈಲು ನಿಲ್ದಾಣವನ್ನೆ ಮರೆತಿರುವುದು ಶೋಚನೀಯ ಸಂಗತಿ. ಭಾನಾಪೂರ, ಹುಲಿಗಿ, ಗಂಗಾವತಿ ಈ ಮೂರು ರೈಲು ನಿಲ್ದಾಣಗಳ ಹೆಸರನ್ನೆ ಮಾತ್ರ ಸೂಚಿಸಲಾಗುತ್ತಿದ್ದು, ಕೊಪ್ಪಳದ ನಿಲ್ದಾಣಕ್ಕೆ ಶ್ರೀ ಗವಿಸಿದ್ದೇಶ್ವರ ರೈಲು ನಿಲ್ದಾಣ ಎಂದು ಮರು ನಾಮಕರಣ ಮಾಡಿ. ಪ್ರಸ್ತಾವನೆ ಸಲ್ಲಿಸಬೇಕು. ಇಲ್ಲವಾದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗವಿಮಠ ಸುಮಾರು ಒಂದು ಸಾವಿರ ವರ್ಷದ ಭವ್ಯ ಇತಿಹಾಸ ಹೊಂದಿದೆ. ಸಾವಿರಾರು ಬಡ ಮಕ್ಕಳಿಗೆ ಶಿಕ್ಷಣ, ವಸತಿ, ಅನ್ನ ನೀಡುತ್ತಿದ್ದು, ಪರಿಸರ ಕಾಳಜಿಗೂ ಹೆಸರುವಾಸಿಯಾಗಿದೆ. ಜತೆಗೆ ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಸಿದ್ಧಿ ಪಡೆದ ಶ್ರೀಮಠದ ಜಾತ್ರೆ ಪ್ರತಿವರ್ಷವೂ ಒಂದೊಂದು ಸಂಕಲ್ಪದೊಂದಿಗೆ ನಡೆಯುತ್ತಿದೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಮುನ್ನಡೆಯುತ್ತಿರುವ ಮಠದ ಹೆಸರು ರೈಲು ನಿಲ್ದಾಣಕ್ಕೆ ನಾಮಕಾರಣ ಮಾಡುವ ಮೂಲಕ ಮತ್ತಷ್ಟು ಮುನ್ನೆಲೆಗೆ ತರಬೇಕು. ಶಾಸಕ, ಸಂಸದರು ಇದಕ್ಕೆ ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ.