ಗುರುವಂದನೆ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ
ವಿದ್ಯೆ ಕಲಿಸಿದ ಲೋಕಕ್ಕೆ ಅರಿವಿನ ಸಿಹಿ ಹಂಚುವವನೆ ಗುರು : ಸಂಗಪ್ಪ ಜೀವಣ್ಣವರು

ಕರುನಾಡ ಬೆಳಗು ಸುದ್ದಿ

ಕುಕನೂರು, 30- ಸ.ಹಿ.ಪ್ರಾ ಶಾಲೆ ಸಿದ್ನೆಕೊಪ್ಪ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಉದ್ಘಾಟಿಸಲಾಯಿತು.

ವೇದಿಕೆಯ ಮೇಲೆ ಆಶೀನರಾಗಿದ್ದ ಗಣ್ಯರೆಲ್ಲರು ದಿ.ಮಲ್ಲಿಕಾರ್ಜುನಪ್ಪ ಹೈದ್ರಿ, ದಿ.ಬಸಯ್ಯ ಕೋಡಿಕೊಪ್ಪ ಹಾಗೂ ಇನ್ನಿತರ ಶಿಕ್ಷಕರಿಗೆ ಮೌನದಿಂದ ವಂದನೆಗಳನ್ನು ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಲೆಯ ಹಿರಿಯ ನಿವೃತ್ತ ಶಿಕ್ಷಕರು ಸಂಗಪ್ಪ ಜೀವಣ್ಣವರು ವಿದ್ಯ ಕಲಿಸಿದ ಲೋಕಕ್ಕೆ ಅರಿವಿನ ಸಿಹಿ ಹಂಚುವವನೆ ಗುರು, ಗುರುವು ತನ್ನ ಶಿಷ್ಯರ ಅಭಿವೃದ್ದಿಗಾಗಿ ಶ್ರಮಿಸುವವನೇ ನಿಜವಾದ ಗುರು, ಹೆತ್ತ ತಾಯಿ ಜೀವನದ ಮೊದಲ ಗುರು ಮೊದಲು ಅವರನ್ನು ಸ್ಮರಿಸಬೇಕು. ಕಲ್ಲನ್ನು ಕಟೇಡು ಮೂರ್ತಿ ಮಾಡುವವನು ಶೀಲ್ಪಿಯಾದರೆ ಒಬ್ಬ ಮನುಷ್ಯನನ್ನು ತಿದ್ದುವವನ್ನು ಶಿಕ್ಷಕ ಎನ್ನುವರು, ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಶಾಲೆಯ ಶಿಕ್ಷಣವು ಭವ್ಯವಾದ ಶಾಲೆಯಾಗಿ ಮುಂದುವರೆದಿರುವುದು ಸಂತಸದ ಸಂದರ್ಭ ಎಂದರು.

ಹಿರಿಯ ನಿವೃತ್ತ ಶಿಕ್ಷಕರಾದ ಕೆ.ವಿ.ಉಣಚಗೇರಿ ಮಾತನಾಡಿ, ಗುರುವಂದನಾ ಕಾರ್ಯಕ್ರಮ ಎಂದರೆ ಗುರುವಿಗೆ ನಮನ ಮಾಡುವ ಶುಭ ಸಂದರ್ಭವಾಗಿದೆ. ಹಾಗೆಯೇ ಗುರುಗಳೆಂದರೆ ತಾಯಿ ಗುರು, ವಿದ್ಯ ಗುರು, ಧಾರ್ಮಿಕ ಗುರು, ತಾಯಿ ಸಂಸ್ಕಾರ ಕೊಟ್ಟರೆ ಶಿಕ್ಷಕ ಸಂಸ್ಕೃತಿ ಕಲಿಸಿ ಕೊಟ್ಟನು ಎಂದು ಹೇಳಿದರು.

ದೈಹಿಕ ಶಿಕ್ಷಕರಾದ ಬಸವಂತಪ್ಪ ಹಳ್ಳುರು ಮಾತನಾಡಿ, 1999 ರಲ್ಲಿ ಕಾರ್ಗಿಲ್ ಯುದ್ಧ ಮುಗಿದ ತಕ್ಷಣ ಸೈನಿಕ ವೃತ್ತಿಯಿಂದ ನಿವೃತ್ತಿ ಹೊಂದಿ ಮೊದಲು ಸಿದ್ನೆಕೊಪ್ಪ ಗ್ರಾಮಕ್ಕೆ ಶಿಕ್ಷಕರಾಗಿ ಬಂದು ಖೋ-ಖೋ ಪಂದ್ಯಾವಳಿಯನ್ನು ರಾಜ್ಯ ಮಟ್ಟಕ್ಕೆ ಒಯ್ದ ಕೀರ್ತಿಯನ್ನು ಸ್ಮರಿಸಿ ರಾಜ್ಯ ಮಟ್ಟದ ಪ್ರತಿಭೆ ಕಾವೇರಿ ಹಿರೇಮಠ ಮತ್ತು ಸಂಗಡಿಗರನ್ನು ಹಾಡಿ ಹೊಗಳಿದರು.

ಶಿವಕುಮಾರ ಹೊಂಬಳ ಶಿಕ್ಷಕರು ಪ್ರಾಸ್ತಾವಿಕವಾಗಿ ಮಾತನಾಡಿ, ಗುರುವನ್ನು ಮೀರಿಸುವ ಶಕ್ತಿ ಯಾವ ಶಕ್ತಿಗೂ ಇಲ್ಲ ಎಂದು ಹೇಳಿದರು. ಜೀವನದಲ್ಲಿ ಜನ್ಮ ನೀಡಿದ ತಾಯಿ, ಜೀವನ ಕಲಿಸಿದ ತಂದೆ, ಅಕ್ಷರ ಕಲಿಸಿಕೊಟ್ಟ ಗುರುವಿನ ಋಣವನ್ನು ತೀರಿಸಲು ಆಗಲಾರದು, ಗುರು ಎಂದರೆ ಶಾಲೆಯಲ್ಲಿ ಕಲಿಸುವ ವ್ಯಕ್ತಿಯಲ್ಲ ಒಂದಕ್ಷರ ಕಲಿಸಿದವರು ಗುರುವೇ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಶೇಖಪ್ಪ ಗದುಗಿನ ಮಾತನಾಡಿ, ಈ ಕಾರ್ಯಕ್ರಮದ ಆಯೋಜನೆಯ ಮೆರಗು ಗ್ರಾಮದ ಹಳೆಯ ವಿದ್ಯಾರ್ಥಿಗಳಿಗೆ ಸಲ್ಲುವುದು. ಶಿಕ್ಷಕರು ಮೊದಲು ಸಮಯಕ್ಕೆ ಆದ್ಯತೆ ನೀಡುವುದು ಪ್ರಮುಖವಾಗಿದೆ ಎಂದರು.

ಶಾಲೆಯ ಅಭಿವೃದ್ಧಿಗಾಗಿ ಸುಮಾರು 7.ಲಕ್ಷ ರೂ. ಧನ ಸಹಾಯ ಮಾಡಿದ ದಿ. ಸಿದ್ದಪ್ಪ ಹಣವಾಳ ಅವರ ಮಗ ಮಂಜೇಶ ಹನವಾಳ ಅವರನ್ನು ಸ್ಮರಿಸಿದರು.

ಮಂಜುನಾಥ ಕಮ್ಮಾರ ಕಾರ್ಯಕ್ರಮ ನಿರೂಪಣೆ ವಹಿಸಿದ್ದರು. ಕಾಶಿಮಸಾಬ್ ಬಡಿಗೇರ ನೆರೆದಿದ್ದ ಎಲ್ಲಾ ಶಿಕ್ಷಕರ ಕಿರು ಪರಿಚಯ ಮಾಡಿ ಅವರಿಗೆ ಗೌರವ ಸಮರ್ಪಣೆ ನೆರವೇರಿಸಿದರು. ತೇಜಸ್ವಿನಿ ಹಾಗೂ ಸಂಗಡಿಗರು ಪ್ರಾರ್ಥನೆ ಹಾಡಿದರು. ಸಂಗಪ್ಪ ಮನಗೂಳಿ ಗುರುವಂದನಾ ಗೀತೆ ಹಾಡಿದರು.

ಹಳೆಯ ವಿದ್ಯಾರ್ಥಿಗಳಾದ ಸಂಗಯ್ಯ ಪೂಜಾರ, ನಾಗರಾಜ್ ಲಕ್ಷಟ್ಟಿ, ಕೋಟ್ರಯ್ಯ ಹೀರೆಮಠ, ಅಲ್ಲಸಾಬ್ ವಾಲಿಕಾರ, ಅನ್ನಪೂರ್ಣ ತೊಂಡಿಹಾಳ, ಬಸಮ್ಮ ತುಕ್ಕಣ್ಣವರು, ಮರ್ಧನಾಬಿ ಚಿತ್ತಾಪುರ, ಇನ್ನು ಮುಂತಾದವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಶರಣಪ್ಪ ಸಾದರ, ದೇವಪ್ಪ ಕಾಳಿ, ಟಿ.ಎಫ್.ನೂರಭಾಷ್, ಆರ್.ಬಿ.ಅಬ್ಬಿಗೇರಿ, ನಾಗರಾಜ ಅಂಗಡಿ, ರಾಮಣ್ಣ ಜೋಗಟ್ಟಿ, ಎ.ಬಿ.ಸಂಗನಾಳ, ಜೆ.ಎ.ಕುಂಬಾರ, ಪ್ರಕಾಶ್ ಪಾಟೀಲ್, ನಾಗರಾಜ ಉಮಚಗಿ, ಶಿವಲಿಂಗಪ್ಪ ಪಟ್ಟದ, ಶ್ರೀಮತಿ ರತ್ನಮ್ಮ ಸೋಂಪುರ, ಶ್ರೀಮತಿ ಶಿವಲೀಲಾ ಹಿರೇಮಠ, ಮಂಜುಳಾ ದೇಸಾಯಿ, ಚಂದ್ರಯ್ಯ ಮಾಲೀಮಠ, ನಾಗರಾಜ ಅನ್ಸಿ, ವಿರೂಪಾಕ್ಷಪ್ಪ ವನಹಳ್ಳಿ, ಇನ್ನು ಮುಂತಾದ ಶಿಕ್ಷಕ ಶಿಕ್ಷಕಿಯರು ಗ್ರಾಮದ ಯುವಕರು, ಗುರು ಹಿರಿಯರು, ವಿದ್ಯಾರ್ಥಿಗಳು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

 

Leave a Reply

Your email address will not be published. Required fields are marked *

error: Content is protected !!