ಕಣ್ಣೊರೆಸುವ ಆಯೋಗ ಬೇಡ, ಕಣ್ಣೀರು ಒರೆಸುವ ಒಳಮೀಸಲಾತಿ ಜಾರಿಮಾಡಿ : ಹನುಮಂತಪ್ಪ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 29- ನಗರದ ಪಾರ್ವತಿನಗರ ಮುಖ್ಯ ರಸ್ತೆಯಲ್ಲಿರುವ ಬಾಲ ರಿಜೆನ್ಸಿಯಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷರಾದ ಹೆಚ್. ಹನುಮಂತಪ್ಪ ಅವರು ಪತ್ರಿಕಾಗೋಷ್ಠಿ ನಡೆಸಿ, ಮಾದಿಗ ಸಮಾಜ ಒಳಮೀಸಲಾತಿಗಾಗಿ 3 ದಶಕದಿಂದ ನಿರಂತರ ಹೋರಾಟ ಮಾಡುತ್ತಿದೆ . ರಾಜ್ಯ ಸರ್ಕಾರ ಮೀಸಲಾತಿ ವಂಚಿತರ ಕಣ್ಣೀರು ಒರಸುವ ಬದಲು ಸರ್ಕಾರ ಕಣ್ಣಿಗೆ ಮಣ್ಣೆರುಚುವ ಹೊಸ ಆಯೋಗ ಮಾಡಲು ಹೊರಟಿದುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಆಗಸ್ಟ್ 1 ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರವೂ ನಮ್ಮ ರಾಜ್ಯದಲ್ಲಿ ನಿರಂತರ ಹೋರಾಟ ನಡದಿದೆ. ಸಚಿವ ಸಂಪುಟದ ಅಜೆಂಡಾದಲ್ಲಿಯೇ ಒಳಮೀಸಲಾತಿಯ ವಿಷಯವಿಲ್ಲ ನಮ್ಮ ಸಬ್ಜೆಕ್ಟ್ ಅದಲ್ಲ ಅಂತ ಹೇಳಿ, ಕೆಲವರು ಇದರ ಬಗ್ಗೆ ಕೇಳಿದಾಗ ಆಡಿಷನಲ್ ಸಬ್ಜೆಕ್ಟ್ ನಲ್ಲಿ ಇದೆ ಅಂತ ಸುಳ್ಳು ಹೇಳ್ತಾರೆ, ಹೊಸದೊಂದು ಆಯೋಗ ರಚಿಸಿ ಅನ್ನುವ ಬೇಡಿಕೆ ಮಾದಿಗ ಸಮಾಜದಿಂದ ಬಂದಿರಲೇ ಇಲ್ಲ. ಹೊಸ ಆಯೋಗ ರಚಿಸಿ ಎಂದು ಮಾದಿಗ ಸಮಾಜದ ಯಾವ ಹೋರಾಟಗಾರರೂ ಬೇಡಿಕೆ ಸಲ್ಲಿಸಿರಲಿಲ್ಲ. ಹೊಸ ಆಯೋಗ ರಚಿಸುವ ಹಿಂದೆ ದೊಡ್ಡ ಹುನ್ನಾರವಿದೆ. ಕಾಲಹರಣ ಮಾಡಿ ಸಂತ್ರಸ್ತ ದಲಿತರನ್ನು ವಂಚಿಸುವ ಉದ್ದೇಶದಿಂದಲೇ ಆಯೋಗ ರಚಿಸುವ ನಾಟಕ ನಡೆಯುತ್ತಿದೆ.
ಸುಪ್ರೀಂಕೋರ್ಟಿನ ತೀರ್ಪು ಬಂದು ೩ ತಿಂಗಳಾದರು ಕಾಂಗ್ರೆಸ್ ಸರ್ಕಾರ ಒಳಮೀಸಲಾತಿಯ ಬೇಡಿಕೆಯನ್ನು ನಿರ್ಲಕ್ಷಿಸುತ್ತಾ ಬಂದಿತ್ತು ಈಗ ಉಪಚುನಾವಣೆಯ ಓಟಿನ ಆಸೆಗೆ ಬಿದ್ದು ಈ ಕಾಟಾಚಾರದ ನಿರ್ಣಯ ಘೋಷಿಸಿದೆ.
ಸರ್ಕಾರದ ಈ ನಿರ್ಧಾರವನ್ನು ನಾವು ಒಪ್ಪುವುದಿಲ್ಲ. ಜನಸಂಖ್ಯೆಯ ದತ್ತಾಂಶದ ಕ್ಯಾತೆ ತೆಗೆಯುವವರು ಸುಪ್ರೀಂಕೋರ್ಟಿನ ತೀರ್ಪು ಬರುವರೆಗೂ ಸುದ್ದಿಯಲ್ಲೇ ಇರಲಿಲ್ಲ. ಸದಾಶಿವ ಆಯೋಗಕ್ಕೆ, ಮಾಧುಸ್ವಾಮಿ ಸಮಿತಿಗೆ ಅಂದೇ ಮನವಿ ಸಲ್ಲಿಸಬಹುದಿತ್ತು. ಈ ಕ್ಯಾತೆ ತೆಗೆಯುವವರ ಹಿಂದೆ ರಾಜಕೀಯ ಹಿತಾಸಕ್ತಿ ಆಡಗಿದೆ. ಡಾ.ಮಹದೇವಪ್ಪ ಮತ್ತು ಪ್ರಿಯಾಂಕ ಖರ್ಗೆ ಅವರ ತಾಳಕ್ಕೆ ಕುಣಿಯುವ ಮುಖ್ಯಮಂತ್ರಿಗಳು ಮಾದಿಗ ಸಮಾಜಕ್ಕೆ, ಮತ್ತೆ ಮೋಸ ಮಾಡಿದ್ದಾರೆ. ಇವರಿಗೆ ಬರಲಿರುವ ಮೂರು ಉಪಚುನಾವಣೆಯಲ್ಲಿ ಸೋಲಿಸಿ ಪಾಠ ಕಲಿಸಲಾಗುವುದು, ಸೋಲಿಸಲು ಹಲವಾರು ರೀತಿಯ ಕಾರ್ಯತಂತ್ರ ರೂಪಿಸಿದ್ದೇವೆ ಎಂದು ಹೆಚ್.ಹನುಮಂತಪ್ಪ ನುಡಿದರು.
ಈ ಸಂದರ್ಭದಲ್ಲಿ ಮೀಸಲಾತಿ ಹೋರಾಟ ಸಮಿತಿಯ ಎಂ.ಶ0ಕ್ರಪ್ಪ, ಟಿ.ಸೋಮಶೇಖರ್, ಹುಸೇನಪ್ಪ, ಮಲ್ಲಿಕಾರ್ಜುನ, ಪ್ರಸಾದ್, ರಾಜೇಶ್, ರಾಮಣ್ಣ, ಅರುಣಾಚಲಂ, ಮಹೇಶ್, ಈಶ್ವರಪ್ಪ, ನಾಗರಾಜ್ ಕುರುವಳ್ಳಿ, ತಿಪ್ಪೇಸ್ವಾಮಿ, ಶಂಕರ್, ದೇವಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.