5

ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಹಾಸ್ಟೆಲ್‌ಗಳು ಪ್ರಮುಖ ಪಾತ್ರವಹಿಸುತ್ತವೆ : ಗವಿಯಪ್ಪ

ಕರುನಾಡ ಬೆಳಗು ಸುದ್ದಿ

ವಿಜಯನಗರ, 19- ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣಕ್ಕೆ ಮಾತ್ರವಲ್ಲದೆ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ವಿದ್ಯಾರ್ಥಿನಿಲಯಗಳು ಸಾಕಷ್ಟು ಅನುಕೂಲವಾಗುತ್ತವೆ ಎಂದು ವಿಜಯನಗರ ಶಾಸಕರಾದ ಹೆಚ್.ಆರ್.ಗವಿಯಪ್ಪ ಹೇಳಿದರು.

ಹೊಸಪೇಟೆಯ ಆರ್‌ಟಿಒ ಕಚೇರಿ ಹಿಂಭಾಗದಲ್ಲಿ ನೂತನವಾಗಿ ಮಂಜೂರಾದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಿ ಮಾತನಾಡಿದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಜನರು ಮುಂದೆ ಬರುಲು ಸಾಕಷ್ಟು ಯೋಜನೆ ರೂಪಿಸಿದ್ದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಸಮುದಾಯಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿ ಅವರನ್ನು ವಿದ್ಯಾವಂತರನ್ನಾಗಿಸಿ ರಾಜಕೀಯವಾಗಿಯು ಮುಂದೆ ಬರಲು ಹಲವಾರು ಯೋಜನೆ ರೂಪಿಸಿದ್ದರು ಎಂದರು.

ವಿದ್ಯಾರ್ಥಿಗಳು ಸರ್ಕಾರದಿಂದ ಒದಗಿಸುವ ಎಲ್ಲ ಸೌಲಭ್ಯಗಳನ್ನು ಸರಿಯಾಗಿ ಉಪಯೋಗ ಮಾಡಿಕೊಂಡು ತಮ್ಮ ತಂದೆ, ತಾಯಿಯರ ಆಸೆಯನ್ನು ಈಡೇರಿಸಬೇಕು, ವಿದ್ಯಾಭ್ಯಾಸದ ಜೊತೆಗೆ ಉತ್ತಮ ಸಂಸ್ಕಾರ ಕಲಿಬೇಕು. ತಂದೆ, ತಾಯಿ, ಗುರು ಹಿರಿಯರಿಗೆ ಗೌರವ ಕೊಡಬೇಕು ಎಂದು ಶಾಸಕರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆ ಮಾಡಬೇಕಾದರೆ ಅವರಿಗೆ ಮೊದಲು ಮೂಲಭೂತ ಸೌಲಭ್ಯಗಳಿರಬೇಕು. ವಿಜಯನಗರ ಜಿಲ್ಲೆಯನ್ನು ಶೈಕ್ಷಣಿಕವಾಗಿ ಮುಂದೆ ತರಲು ಸಾಕಷ್ಟು ಯೋಜನೆಗಳು ರೂಪಿಸುತ್ತಿದ್ದು ಅದರ ಭಾಗವೇ ಡಿ. ದೇವರಾಜ ಅರಸು ಬಾಲಕಿಯರ ವಿದ್ಯಾರ್ಥಿನಿಲಯ ಆರಂಭ, ಈಗೆ ಜಿಲ್ಲೆಯಲ್ಲಿ ಕಾನೂನು ಪದವಿ ಕಾಲೇಜು ಮತ್ತು ಮೆಡಿಕಲ್ ಕಾಲೇಜು ಸೇರಿದಂತೆ ಉನ್ನತ ಶಿಕ್ಷಣದ ಕಾಲೇಜುಗಳನ್ನು ತೆರೆಯಲು ಯೋಜನೆ ರೂಪಿಸಿದ್ದು, ಈಗಾಗಲೇ ಕಾನೂನು ಪದವಿ ಕಾಲೇಜು ಆರಂಭಕ್ಕೆ ಸ್ಥಳ ನಿಗಧಿಯಾಗಿದೆ. ಉಳಿದ ಕಾಲೇಜುಗಳಿಗೆ ಉತ್ತಮ ಸ್ಥಳಕ್ಕಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎನ್.ಎಫ್ ಇಮಾಮ್ ನಿಯಾಜಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕೆ.ಬಿ.ರಾಮಚಂದ್ರಪ್ಪ ಸೇರಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ವಸತಿ ನಿಲಯಗಳ ವಾರ್ಡನ್‌ಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!