
ಬಿಜಕಲ್ಲನಲ್ಲಿ ಫುಡ್ ಪಾಯ್ಸನಿಂದ ವಾಂತಿ-ಬೇಧಿ- ನೂರಾರು ಮಕ್ಕಳು ಆಸ್ಪತ್ರೆಗೆ ದಾಖಲು
ತಾಲೂಕಿನ ಬಿಜಕಲ್ಲ ಗ್ರಾಮದ ಸರಕಾರಿ ಮಾದ್ಯಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಬಿಸಿಯೂಟ ಸೇವಿಸಿ ಫುಡ್ ಪಾಯ್ಸನ್ ಆಗಿ ನೂರಾರು ಮಕ್ಕಳು ವಿಪರೀತ ವಾಂತಿ-ಬೇಧಿಯಿಂದ ಇಲ್ಲಿನ ತಾಲೂಕ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಎಂದಿನಂತೆ ಶಾಲಾಮಕ್ಕಳು ಶಾಲೆಯಲ್ಲಿ ಆಟ ಪಾಠ ಮುಗಿಸಿ ಮದ್ಯಾಹ್ನ ಬಿಸಿಯೂಟ ಸೇವಿಸಿದ್ದಾರೆ. ಶಾಲೆ ಬಿಡುವಿನ ವೇಳೆಗೆ ಅದಾಗಲೇ ಕೆಲ ಮಕ್ಕಳಿಗೆ ಹೊಟ್ಟೆಯಲ್ಲಿ ತಳಮಳ ಹಾಗೂ ವಾಂತಿ ಬೆಧಿಯಿಂದ ನರಳಾಟ ಶುರು ಮಾಡಿದ್ದಾರೆ. ಇದರಿಂದ ಗಾಬರಿಗೊಂಡ ಶಾಲಾ ಸಿಬ್ಬಂದಿಗಳು ಹಾಗು ಗ್ರಾಮಸ್ಥರು ಅಸ್ವಸ್ಥಗೊಂಡ ಹತ್ತಾರು ಮಕ್ಕಳನ್ನು ತಾಲೂಕ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಜೆ ಕತ್ತಲಾಗುತ್ತಿದ್ದಂತೆ ನೂರಾರು ಮಕ್ಕಳು ಅಸ್ವಸ್ಥಗೊಂಡು ವಿಪರೀತ ವಾಂತಿಬೇಧಿ ಯಿಂದ ನರಳಾಡುತ್ತ ಸಂಕಟ ಅನುಭವಿಸುತ್ತಿದ್ದಂತೆ ಅವರ ಪಾಲಕರು ದೌಡಾಯಿಸಿ ಹತ್ತಿರ ದೋಟಿಹಾಳ ಹಾಗೂ ಕುಷ್ಟಗಿ ಸೇರಿದಂತೆ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅನಾಹುತಕ್ಕೆ ಅಡುಗೆ ತಯಾರಕರು ಹಾಗೂ ಶಾಲಾ ಸಿಬ್ಬಂದಿಯವರ ನಿರ್ಲಕ್ಷವೇ ಕಾರಣ. ಸರಿಯಾಗಿ ಅಡುಗೆ ತಾಯಾರಿಸುವಲ್ಲಿ ಹಾಗೂ ಅಡುಗೆ ತಯಾರಾದ ನಂತರ ಶುಚಿತ್ವ ಕಾಪಾಡದೇ ನಿರ್ಲಕ್ಷ ಧೋರಣೆ ಕಾರಣ. ಮಕ್ಕಳಿಗೆ ಏನಾದರೂ ಜೀವಕ್ಕೆ ಅಪಾಯವಾದರೆ ಯಾರು ಹೊಣೆ ಎಂದು ಗ್ರಾಮಸ್ಥರು ಹಿಡಿಶಾಪ ಹಾಕುತ್ತಿರುವುದುಕಂಡು ಬಂದಿತು. ಆದರೂ ಇನ್ನೂ ಹೆಚ್ಚಿನ ಮಕ್ಕಳು ಆಗಮಿಸುತ್ತಿದ್ದು ಆಸ್ಪತ್ರೆಯಲ್ಲಿ ಬೆಡ್ ಇಲ್ಲದೇ ಪರಾದಾಡುತ್ತಿರುವ ದೃಶ್ಯ ಆಸ್ಪತ್ರೆ ಸಿಬ್ಬಂದಿಗಳಿಗೆ ಹಾಗೂ ನೋಡುಗರಿಗೆ ದಿಗ್ಭ್ರಮೆ ಮೂಡಿಸಿದೆ.
ಸುದ್ದಿ ತಿಳಿದ ಬಿಇಓ ಸುರೆಂದ್ರ ಕಾಂಬಳೆ ಆಸ್ಪತ್ರೆಗೆ ದೌಡಾಯಿಸಿ ಮಕ್ಕಳಿಗೆ ಹಾಗೂ ಪಾಲಕರಿಗೆ ಸಾಂತ್ವಾನ ಹೇಳಿದ್ದಾರೆ. ಪುಡ್ ಪಾಯ್ಸನ್ ಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಬಿಜಕಲ್ಲ ಗ್ರಾಮದಲ್ಲಿ ಇದೇ ರೀತಿ ಪದೇ ಪದೇ ಸಾಮೂಹಿಕ ಪ್ರಕರಣಗಳು ಜರುಗುತ್ತಿದ್ದು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.