1

ಲಾರಿ ಮಾಲೀಕರ ಸಂಘದಿಂದ ಅನಿರ್ದಿಷ್ಟಾವಧಿ ಮುಷ್ಕರ ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರ : ಮಿಂಚು ಶ್ರೀನಿವಾಸ್

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 21- ಸರಕು ಸಾಗಾಟದ ದರ ಹೆಚ್ಚಿಸಬೇಕು, ಸ್ಥಳೀಯ ಲಾರಿಗಳಿಗೆ ಆದ್ಯತೆ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳಿಗೆ ಆಗ್ರಹಿಸಿ ಲಾರಿ ಮಾಲೀಕರ ಸಂಘದ ವತಿಯಿಂದ ಅನಿರ್ದಿಷ್ಟಾವಧಿ ಶಾಂತಿಯುತ ಮುಷ್ಕರ ಆರಂಭಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ವಿ.ಶ್ರೀನಿವಾಸ್ (ಮಿಂಚು) ತಿಳಿಸಿದರು.

ಹಲಕುಂದಿ ಬಳಿಯ ವಿಆರ್ಕೆಪಿ ಸ್ಪಾಂಜ್ ಕಾರ್ಖಾನೆ ಎದುರು ಮುಷ್ಕರದ ನೇತೃತ್ವ ವಹಿಸಿ ಮಾತನಾಡಿದರು.

ಓವರ್ ಲೋಡ್ ಲಾರಿಗಳನ್ನು ನಿಷೇಧಿಸಬೇಕು, ಸೀರಿಯಲ್ ಪ್ರಕಾರವಾಗಿ ಸ್ಥಳೀಯ ಲಾರಿಗಳಿಗೆ ಸರಕು ಸಾಗಣೆಗೆ ಅವಕಾಶ ನೀಡಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಗಳು ಎಂದು ಹೇಳಿದರು.

ಸ್ಥಳೀಯವಾಗಿ ಅಂದಾಜು ಸಾವಿರದ ಐದುನೂರು ಲಾರಿಗಳು ಇದ್ದು, ನೂರಾರು ಲಾರಿಗಳಿಗೆ ಸರಕು ಸಾಗಣೆ ಸಿಗದೇ ಲಾರಿ ಮಾಲೀಕರು ಭಾರೀ ಪ್ರಮಾಣದ ನಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದ ಅವರು, ಲಾರಿಗಳ ಮಾಸಿಕ ಕಂತು ಕಟ್ಟಲಾಗದೇ, ಆರ್ಥಿಕ ಸಂಕಷ್ಟದಿಂದಾಗಿ ಈಗಾಗಲೇ ಹಲವು ಜನ ಲಾರಿ ಮಾಲೀಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

ಕಳೆದ ತಿಂಗಳು ಸಂಘದ ವತಿಯಿಂದ ಐದು ದಿನಗಳ ಕಾಲ ಹಗಲು ರಾತ್ರಿ ಶಾಂತಿಯುತ ಮುಷ್ಕರ ನಡೆಸಿ, ಸ್ಪಾಂಜ್ ಕಾರ್ಖಾನೆಗಳಿಗೆ ಒಳ-ಹೊರ ಹೋಗುವ ಲಾರಿಗಳನ್ನು ನಿಲ್ಲಿಸಲಾಗಿತ್ತು. ಆಗ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ, ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ಅಧ್ಯಕ್ಷರ ಮಧ್ಯಸ್ಥಿಕೆಯಲ್ಲಿ ಮಾತುಕತೆಗೆ ಬಂದಿದ್ದ ಸ್ಪಾಂಜ್ ಐರನ್ ಕಾರ್ಖಾನೆಗಳ ಮಾಲೀಕರ ಸಂಘ ಆರಂಭದಲ್ಲಿ ನಮ್ಮ ಬೇಡಿಕೆಗಳಿಗೆ ಒಪ್ಪಿದಂತೆ ಮಾಡಿ, ತದನಂತರ ಮಾತು ಬದಲಿಸಿ, ಈಗ ಏನಾದರೂ ಮಾಡಿಕೊಳ್ಳಿ ಎನ್ನುತ್ತಿದ್ದಾರೆ. ಹೀಗಾಗಿ ನಮಗೆ ಅನ್ಯಾಯ ಆಗಿದ್ದು, ಹೋರಾಟ ಮುಂದುವರೆಸಿದ್ದೇವೆ ಎಂದರು.

ನಮ್ಮ ಬೇಡಿಕೆಗಳು ಈಡೇರದಿದ್ದರೆ ಹೋರಾಟ ತೀವ್ರಗೊಳಸಲಾಗುವುದು ಎಂದು ಮಿಂಚು ಶ್ರೀನಿವಾಸ್ ತಿಳಿಸಿದ್ದಾರೆ.

ಉಪಾಧ್ಯಕ್ಷರಾದ ನೂರ್ ಮೊಹಮ್ಮದ್, ಪ್ರಧಾನ ಕಾರ್ಯದರ್ಶಿಗಳಾದ ಮೆಹಬೂಬ ಬಾಷ, ಖಜಾಂಚಿ ಪ್ರವೀಣಕುಮಾರ್, ಸದ್ಯಸರಾದ ಎಂ.ಡಿ. ಫಯಾಜ್, ನಾಗರಾಜ, ಪೂಜಾದೇವಿ ಶ್ರೀನಿವಾಸುಲು, ರಾಂಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!