
ಯುವ ಜನಾಂಗ ಜಾನಪದ ಸಂಸ್ಕೃತಿ ರಕ್ಷಿಸದಿದ್ದಲ್ಲಿ ಅಪಾಯ : ಉಮಚಗಿ ಕಳವಳ
ಕರುನಾಡ ಬೆಳಗು ಸುದ್ದಿ
ಕುಕನೂರು, 28- ಪ್ರಸ್ತುತ ಯಾಂತ್ರಿಕ ಜೀವನದಲ್ಲಿ ಕನ್ನಡ ಭಾಷೆ ಮತ್ತು ಜಾನಪದ ಸಂಸ್ಕೃತಿ ಅಳಿವಿನ ಅಂಚಿನಲ್ಲಿರುವ ಹಿನ್ನಲೆಯಲ್ಲಿ ಅದನ್ನು ರಕ್ಷಿಸಲು ಯುವ ಜನಾಂಗ ಶ್ರಮಿಸಬೇಕೆಂದು ಕೆ.ಎಲ್. ಇ. ಕಾಲೇಜು ಉಪನ್ಯಾಸಕ ಶರಣಪ್ಪ ಉಮಚಗಿ ಹೇಳಿದರು.
ಅವರು ಇಲ್ಲಿಯ ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಾನಪದ ಯುವ ಸಾಂಸ್ಕೃತಿಕ ಹಬ್ಬ , ಹಾಡು ಮಾತು ಮಂಥನ ಕಾಯ೯ಕ್ರಮ ದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಇಂದಿನ ಯಾಂತ್ರಿಕ ಜೀವನದಲ್ಲಿ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ಉತ್ತಮ ಕೆಲಸ ನಡೆಯಬೇಕಾಗಿದೆ, ಬೀಸುವ, ಕುಟ್ಟುವ ಹಾಡುಗಳು, ಹಂತಿ ಪದ ಹೀಗೆ ಜನಪದರು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಸಂಗತಿಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡೋಣ , ಜನಪದ ಕಲೆಗಳು ಮತ್ತಷ್ಟು ಉತ್ಸಾಹ ತುಂಬುವ ನಿಟ್ಟಿನಲ್ಲಿ ಉತ್ತಮ ಬೆಳವಣಿಗೆ ಸಾಧ್ಯ ಎಂದರು. ಇದನ್ನು ಮರೆತರೇ ಮುಂದಿನ ಪೀಳಿಗೆಗೆ ದೊಡ್ಡ ಆತಂಕ ಎದುರಾಗುವುದನ್ನು ತಪ್ಪಿಸೋಣ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಈಶಪ್ಪ ಮಳಗಿ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಕಲಾವಿದರಾದ ಸಿದ್ದಪ್ಪ ಬಗರೀಕರ, ಮೇಘರಾಜ ಜೀಡಗಿ, ಭರಮಪ್ಪ ಸಾಬಳ್ಳಿ ಸೇರಿದಂತೆ ಹಲವರು ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು.
ಯುವ ಮುಖಂಡರಾದ ಮಂಜುನಾಥ ಕುದರಿ ಮನಿ, ರಾಮು ಕೌದಿ, ವೀರಯ್ಯ ಕುತ೯ಕೋಟಿ ,ಮಂಜುನಾಥ್ ಅಂಗಡಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಸಂಸ್ಥೆಯ ಅಧ್ಯಕ್ಷ ರುದ್ರಪ್ಪ ಭಂಡಾರಿ ಪ್ರಾಸ್ತಾವಿಕ ಮಾತನಾಡಿದರು.