2c136fae-be38-4577-97e1-318669006cc9

ಪೋಕ್ಸೋ ಪ್ರಕರಣ : ಆರೋಪಿಗೆ ದಂಡ ಸಹಿತ ಜೈಲು ಶಿಕ್ಷೆ ಪ್ರಕಟ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 29- ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ(ಪೋಕ್ಸೋ) ತೀರ್ಪು ಪ್ರಕಟಿಸಿದೆ.

ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ತುಗ್ಗಲದೋಣಿ ಬ್ರಿಡ್ಜ್ ಹತ್ತಿರ ದಿನಾಂಕ: 31-12-2019 ರಂದು ಭೀಮಪ್ಪ ಶಾಂತಗೇರಿ ಈತನು ಮೂರು ಮಕ್ಕಳ ತಂದೆಯಾಗಿದ್ದು, ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕರೆಸಿಕೊಂಡು ಟಂಟಂ ವಾಹನದಲ್ಲಿ ಅಪಹರಿಸಿಕೊಂಡು ಬಾದಾಮಿ ರೈಲ್ವೆ ಸ್ಟೇಷನಗೆ ಹೋಗಿ ಅಲ್ಲಿಂದ ಸೋಲಾಪುರ, ಸಿಕಿಂದ್ರಾಬಾದ ಹೋಗಿ ಅಲ್ಲಿನ ಸಾಯಿಕೃಷ್ಣ ಲಾಡ್ಜನ ರೂಮವೊಂದರಲ್ಲಿ ಅತ್ಯಾಚಾರ ಎಸಗಿದ್ದು ಅಲ್ಲದೇ ಈ ಹಿಂದೆ ಕೂಡ ಸವಡಿ ಗ್ರಾಮದ ಸೀಮಾದ ಜಮೀನನಲ್ಲಿ ಅಪ್ರಾಪ್ತೆಗೆ ಅತ್ಯಾಚಾರ ಎಸಗಿದ ಆರೋಪದ ಹಿನ್ನಲೆಯಲ್ಲಿ ಹನುಮಸಾಗರ ಪಿಎಸ್‌ಐ ಅಮರೇಶ ಹುಬ್ಬಳ್ಳಿ ಅವರು ಈ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ತನಿಖೆಯನ್ನು ಕುಷ್ಟಗಿ ಗ್ರಾಮೀಣ ವೃತ್ತದ ಸಿಪಿಐ ಚಂದ್ರಶೇಖರ.ಜಿ ಅವರು ನಿರ್ವಹಿಸಿ ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಮೇಲ್ನೋಟಕ್ಕೆ ಸಾಬೀತಾದ್ದರಿಂದ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣವು ಸ್ಪೇ.ಎಸ್‌ಸಿ(ಪೋಕ್ಸೋ) ಸಂ: 03/2020 ರಲ್ಲಿ ದಾಖಲಾಗಿದ್ದು, ವಿಚಾರಣೆಯನ್ನು ನಡೆಸಿದ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರಾದ(ಪೋಕ್ಸೋ) ಕುಮಾರ ಡಿ.ಕೆ. ಅವರು, ಆರೋಪಿ ಭೀಮಪ್ಪ ಶಾಂತಗೇರಿ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.25,000 ಗಳ ದಂಡವನ್ನು ಭರಿಸುವಂತೆ ದಿನಾಂಕ 24-08-2024 ರಂದು ಆದೇಶಿಸಿ ತೀರ್ಪು ಪ್ರಕಟಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ವಾದ ಮಂಡಿಸಿದ್ದರು ಎಂದು ನ್ಯಾಯಾಲಯದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!