
ಪತ್ರಕರ್ತ, ನ್ಯಾಯವಾದಿ ಬಸವರಾಜ್ ಗಡಾದರಿಗೆ ಪಿಎಚ್‌ಡಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 25- ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ೨೦೨೩ ನೆಯ ಸಾಲಿನ ೭೪ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳು ಹಾಗೂ ಉನ್ನತ ಶಿಕ್ಷಣ ಸಚಿವ ಡಾ: ಎಂ.ಸಿ. ಸುಧಾಕರ್ ಅವರಿಂದ ಮಂಗಳವಾರ ಪತ್ರಕರ್ತ ಹಾಗೂ ನ್ಯಾಯವಾದಿ ಬಸವರಾಜ್ ಶಿವಾನಂದಪ್ಪ ಗಡಾದ್ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಪಿ.ಎಚ್.ಡಿ. ಪದವಿ ಸ್ವೀಕರಿಸಿದರು.
ಕೊಪ್ಪಳದಲ್ಲಿ ಮೂರು ದಶಕಕ್ಕೂ ಹೆಚ್ಚು ಅವಧಿಯಿಂದ ಸ್ಥಳೀಯ ಪತ್ರಿಕೆಗಳಿಂದ ರಾಜ್ಯದ ಹೆಸರಾಂತ ಪತ್ರಿಕೆಗಳು ಹಾಗೂ ದೂರ ದರ್ಶನ ಮಾಧ್ಯಮಗಳಲ್ಲಿ ಪತ್ರಕರ್ತನಾಗಿ ಸೇವೆಯೊಂದಿಗೆ ಶಿಕ್ಷಣವನ್ನು ಮುಂದುವರಿಸುತ್ತಾ ಎಲ್‌ಎಲ್‌ಬಿ ಪದವಿ ಪಡೆದು ನ್ಯಾಯವಾದಿಯಾಗಿದ್ದು ಇದೀಗ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಪಿ.ಹೆಚ್.ಡಿ. ಪದವಿ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ.
ಮಾಧ್ಯಮದಲ್ಲಿ ಸೇವೆಯಲ್ಲಿದ್ದು ಪದವಿ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದು ನಮಗೆಲ್ಲ ಹರ್ಷ ತಂದಿದೆ ಎಂದು ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ (ಎಐಟಿಯುಸಿ)ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ್, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್, ಕೊಳಚೆ ನಿರ್ಮೂಲನಾ ವೇದಿಕೆಯ ಜಿಲ್ಲಾ ಸಂಚಾಲಕ ತುಕಾರಾಮ್ ಬಿ. ಪಾತ್ರೋಟಿ, ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾಸೀಮ್ ಸಾಬ್ ಸರ್ದಾರ್. ಎಐಯುಟಿಯುಸಿ ಜಿಲ್ಲಾ ಮುಖಂಡ ಶರಣು ಗಡ್ಡಿ, ಮೌಲಾ ಹುಸೇನ್ ಹಣಗಿ, ಮಕಬೂಲ್ ರಾಯಚೂರು ಮುಂತಾದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.