
ಮಾಸ್ಕ್ ಇಲ್ಲದೇ ಸ್ವಚ್ಚತೆ ಮಾಡಿದ ನ್ಯಾಯಾಧೀಶರು ಹಾಗೂ ವಿದ್ಯಾರ್ಥಿಗಳು : ಅಧಿಕಾರಿಗಳ ನಿರ್ಲಕ್ಷ
ತಾಲೂಕಿನ ಜೆ. ಬೆಂಚಮಟ್ಟಿ ಗ್ರಾಮದಲ್ಲಿ ತಾಲೂಕ ಆಡಳಿತ ಹಾಗೂ ತಾಲೂಕ ಪಂಚಾಯತಿ, ತಾಲೂಕ ಕಾನೂನು ಸಮಿತಿ ವತಿಯಿಂದ ಗಾಂಧೀ ಜಯಂತಿ ನಿಮಿತ್ತ ಗ್ರಾಮ ದತ್ತುಪಡೆದು ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದ ಪ್ರಧಾನ ಸಿವಿಲ್ ನ್ಯಾಯಾಧೀಶರಿಗೂ ತಾಲೂಕ ದಂಡಾಧಿಕಾರಿಗಳಿಗೂ ಹಾಗೂ ವಿದ್ಯಾರ್ಥಿಗಳಿಗೂ ಸಹ ಮಾಸ್ಕ ನೀಡದೇ ದಿವ್ಯ ನಿರ್ಲಕ್ಷ ತೋರಿ ಸ್ವಚ್ಚತೆ ಮಾಡಿದ ಘಟನೆ ಬುಧವಾರ ನಡೆದಿದೆ.
ಕೊರೊನಾ ಸಂದರ್ಭದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆಯೇ ಮಾಸ್ಕ್ ಬಗ್ಗೆ ಸರಕಾರವೇ ಜಾಗೃತಿ ಮೂಡಿಸಿ ಮಾಸ್ಕ ಬಳಕೆ ಕಡ್ಡಾಯ ಮಾಡಿ ಜಾರಿಗೂ ಕೂಡ ಬಂದಿತು. ಆದರೂ ಮಾಸ್ಕ್ ಅರಿವಿಲ್ಲದ ಸಾರ್ವಜನಿಕರು ಇನ್ನೂ ಬಳಕೆ ಮಾಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿನ ತಾಲೂಕ ಪಂಚಾಯತಿ ಹಾಗೂ ತಾಲೂಕ ಆಡಳಿತ ಇವರ ಸಹಯೋಗದಲ್ಲಿ ಹಾಗೂ ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಸ್ವಚ್ಚತಾ ಗ್ರಾಮವನ್ನು ದತ್ತು ಪಡೆದು ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಆದರೆ ಧೂಳು ಕಸ ಸ್ವಚ್ಚ ಮಾಡುವ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಪಿಡಿಓ ಹಾಗೂ ಸಿಬ್ಬಂದಿಗಳು ಯಾವುದೇ ಮಾಸ್ಕ ನೀಡದೇ ನ್ಯಾಯಧೀಶರೂ ಸಹ ಮಾಸ್ಕ್ ಇಲ್ಲದೇ ಕಸ ಗುಡಿಸಿ ಸ್ವಚ್ಛತೆಗೆ ಚಾಲನೆ ನೀಡಿದ್ದು ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಎನ್ಎಸ್ಎಸ್ ವಿದ್ಯಾರ್ಥಿಗಳು ಗ್ರಾಮಸ್ಥರು ಮಾತನಾಡುತ್ತಿದ್ದುದು ಕಂಡು ಬಂದಿತು.
ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಎನ್ಎಸ್ಎಸ್ ವಿದ್ಯಾರ್ಥಿಗಳು ನಾವೆಲ್ಲ ಬೆಳಗ್ಗೆಯೇ ಸ್ವಚ್ಚತೆ ಮಾಡಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಲು ಬಂದಿದ್ದೇವೆ. ನಮಗೆ ಕನಿಷ್ಟಪಕ್ಷ ಸ್ವಚ್ಛತಾ ಸಲಕರಣೆಗಳಾದ ಸಲಿಕೆ, ಕಸ ಗುಡಿಸುವ ಬಾರಿಗೆ, ಧೂಳು ರಕ್ಷಣೆಗಾಗಿ ಮಾಸ್ಕ ನೀಡದೇ ಅಧಿಕಾರಿಗಳು ದಿವ್ಯ ನಿರ್ಲಕ್ಷ ವಹಿಸಿದ್ದಾರೆ. ನಮ್ಮ ಕರವಸ್ತ್ರವನ್ನೆ ಮೂಗಿಗೆ ಕಟ್ಟಿಕೊಂಡು ಸ್ವಚ್ಚತೆ ಮಾಡಬೇಕಾಗಿದೆ. ಇಲ್ಲಿರುವ ಎಲ್ಲಾ ಸಲಕರಣೆಗಳನ್ನು ನಾವೇ ತಂದಿದ್ದೇವೆ. ಸ್ವಚ್ಚತೆ ಮಾಡಿ ಧೂಳು ಕುಡಿದು ನಾವು ಅನಾರೋಗ್ಯಕ್ಕೆ ತುತ್ತಾದರೆ ಇದಕ್ಕೆ ಹೊಣೆ ಯಾರು? ನಾವು ಸ್ವಯಂ ಸೇವೆ ಮಾಡಬೇಕಾದರೆ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ಮಾಹಿತಿ ಪಡೆಯಲು ಪಿಡಿಓ ದಸ್ತಗೀರಸಾಬ ಅವರಿಗೆ ಪೋನ್ ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ.
ಎನ್ಎಸ್ಎಸ್ ವಿದ್ಯಾರ್ಥಿಗಳ ಮೂಲಕ ಜೆ.ಬೆಂಚಮಟ್ಟಿ ಗ್ರಾಮದ ಸ್ವಚ್ಚತೆಗೆ ಮುಂದಾಗಿದ್ದೇವೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಸಲಕರಣೆ ಮಾಸ್ಕ, ಕಸಬಾರಿಗೆ ನೀಡದೇ ನಿರ್ಲಕ್ಷ ತೋರಿದ್ದಾರೆ. ಕಸಗುಡಿಸಲು ಸಲಕರಣೆ ನಾವೇ ತಂದಿದ್ದೇವೆ….
…. ನಾಗರಾಜ್ ಹೀರಾ, ಎನ್.ಎಸ್.ಎಸ್. ಅಧಿಕಾರಿ ಕುಷ್ಟಗಿ.