3

ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವರ್ಧೆ ಅವಶ್ಯ : ಡಿಡಿಪಿಐ ಓ.ಆರ್.ಪ್ರಕಾಶ್

ಕರುನಾಡ ಬೆಳಗು ಸುದ್ದಿ

ವಿಜಯನಗರ, 29- ಜಿಲ್ಲೆಯಲ್ಲಿ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಅವರಿಗೆ ವಿದ್ಯಾಭ್ಯಾಸದಲ್ಲಿ ಸ್ಪರ್ಧಾ ಮನೋಬಾವ ಮೂಡಿಸಿದರೆ ಮಾತ್ರ ಮಕ್ಕಳು ಕಲಿಕೆಯಲ್ಲಿ ಪ್ರಗತಿಕಾಣಲು ಸಾಧ್ಯ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಓ.ಆರ್.ಪ್ರಕಾಶ್ ಅಭಿಪ್ರಾಯಪಟ್ಟರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಅಕ್ಷರ ಫೌಂಡೇಶನ್ ಇವರ ಸಂಯುಕ್ತಾಶ್ರಯದಲ್ಲಿ, ಜಿಲ್ಲಾ ಪಂಚಾಯಿತ್ ಸಭಾಂಗಣದಲ್ಲಿ ನವಂಬರ್ ೨೯ ರಂದು ನಡೆದ ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಕರು ಮತ್ತು ಪೋಷಕರು ಮಕ್ಕಳ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮವಹಿಸಬೇಕು. ಗಣಿತ ಕಲಿಕಾ ಆಂದೋಲನದ ವರದಿಯ ಪ್ರಕಾರ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಹೋಲಿಸಿದರೆ ಹರಪನಹಳ್ಳಿ ತಾಲೂಕು ಪ್ರಗತಿಯಲ್ಲಿದೆ, ಹೊಸಪೇಟೆ ತಾಲೂಕು ಹಿಂದುಳಿದಿದೆ. ಶಿಕ್ಷಕರು, ಈ ವರದಿಯನ್ನು ಅವಲೋಕಿಸಿ ಮಕ್ಕಳು ಯಾವುದರಲ್ಲಿ ಹಿಂದುಳಿದಿದ್ದಾರೆ, ಆ ವಿಷಯಗಳಿಗೆ ಹೆಚ್ಚು ಒತ್ತು ನೀಡುವುದರ ಮೂಲಕ ಮಕ್ಕಳಿಗೆ ವಿದ್ಯಾಭ್ಯಾಸದ ಅಭಿರುಚಿ ಹೆಚ್ಚಿಸಬೇಕು ಎಂದು ಹೇಳಿದರು.

ಅಕ್ಷರ ಫೌಂಡೇಶನ್‌ನ ಪ್ರೋಗ್ರಾಮ್ ಮ್ಯಾನೇಜರ್ ಹೆಚ್.ಬಿ.ಕಣ್ಣಿ ಮಾತನಾಡಿ, ಶಾಲಾ ಶಿಕ್ಷಣ ಇಲಾಖೆ, ಗ್ರಾಮ ಪಂಚಾಯಿತಿಗಳು ಹಾಗೂ ಸಮುದಾಯಗಳ ಸಹಭಾಗಿತ್ವದಲ್ಲಿ ನಡೆದ ಗಣಿತ ಕಲಿಕಾ ಆಂದೋಲನವು ಯಶಸ್ವಿಯಾಗಿ ಮುಕ್ತಾಯವಾಗಿದೆ. ಮಕ್ಕಳ ಗುಣಾತ್ಮಕ ಶಿಕ್ಷಣಕ್ಕಾಗಿ ಅಕ್ಷರ ಫೌಂಡೇಶನ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತದೆ. ಈ ಆಂದೋಲನದ ವರದಿಯ ಪ್ರಕಾರ ಪ್ರತಿ ವರ್ಷಕಿಂತ ಈ ವರ್ಷ ಹೆಚ್ಚಿನ ಫಲಿತಾಂಶ ಬಂದಿರುವುದು ಕಂಡುಬರುತ್ತದೆ. ಜಿಲ್ಲೆಯಲ್ಲಿ ೭೫೬ ಶಾಲೆಗಳ ೨೩,೩೮೫ ಮಕ್ಕಳು ಭಾಗವಹಿಸಿದ್ದು, ಈ ಆಂದೋಲನಕ್ಕೆ ಗ್ರಾಮ ಪಂಚಾಯಿತಿಗಳು ಹಾಗೂ ಶಾಲಾ ಶಿಕ್ಷಕರ ಕಾರ್ಯ ಶ್ಲಾಘನೀಯ. ಅಕ್ಷರ ಫೌಂಡೇಶನ್ ವತಿಯಿಂದ ಜಿಕೆ ೨.೭ ಕೋರ್ಸ್ ಪರಿಚಯಿಸಿದ್ದು, ಎಲ್ಲ ಶಿಕ್ಷಕರು ಇದರ ಸದುಪಯೋಗ ಪಡೆಸಿಕೊಂಡು ಗಣಿತ ಕಲಿತು, ಮಕ್ಕಳಿಗೆ ಗಣಿತದ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ೨೫ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ೨೫ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಪಿಡಿಓ ಗಳಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೂಡ್ಲಿಗಿ ತಾಲೂಕಿನ ಕ್ಷೇತ್ರ ಶಿಕ್ಷಾಣಾಧಿಕಾರಿ ಪದ್ಮನಾಭ, ಶಾಲಾ ಶಿಕ್ಷಣ ಇಲಾಖೆಯ ಕವಿತಾ ಸೇರಿದಂತೆ ಗ್ರಾಮ ಪಂಚಾಯಿತಗಳ ಅಧ್ಯಕ್ಷರು, ಪಿಡಿಓಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!