WhatsApp Image 2024-10-28 at 7.08.24 PM

ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಪಾಠ ಕಲಿಸಲು, ಎನ್‍ಡಿಎ ಗೆಲ್ಲಿಸಲು ಗೋವಿಂದ ಕಾರಜೋಳ ಮನವಿ

ಕರುನಾಡ ಬೆಳಗು ಸುದ್ದಿ

ಬೆಂಗಳೂರು, 28- ಕಾಂಗ್ರೆಸ್ ಪಕ್ಷ ಮತ್ತು ರಾಜ್ಯದ ಈಗಿನ ಸರಕಾರ ಮೋಸದಾಟ ಮುಂದುವರೆಸಿದೆ. ಶೀಘ್ರವೇ ನಡೆಯಲಿರುವ ವಿಧಾನಸಭೆಯ 3 ಉಪ ಚುನಾವಣೆಯಲ್ಲಿ 101 ಜಾತಿಯ ಪರಿಶಿಷ್ಟ ಜಾತಿಗಳ ಜನÀರು ಕಾಂಗ್ರೆಸ್ಸಿಗೆ ಪಾಠ ಕಲಿಸಬೇಕು. ಎನ್‍ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮನವಿ ಮಾಡಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಸ್ವಾತಂತ್ರ್ಯ ಬಂದ ಬಳಿಕ ಇದೇ ಮೋಸದಾಟ ಆಡುತ್ತ ಬಂದಿದ್ದಾರೆ ಎಂದು ಅವರು ಆಕ್ಷೇಪಿಸಿದರು.

ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬರುವುದಕ್ಕೂ ಮೊದಲು ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿ 30 ವರ್ಷಗಳಿಂದ ಅಸ್ಪøಶ್ಯರು ಒಳ ಮೀಸಲಾತಿಗೆ ಹೋರಾಟ ಮಾಡುತ್ತಿದ್ದು, ಆ ಹೋರಾಟಕ್ಕೆ ಬೆಂಬಲ ಇದೆ. ನಮ್ಮ ಸರಕಾರ ಬಂದ ಮೊದಲನೇ ಕ್ಯಾಬಿನೆಟ್ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅದನ್ನು ಈಡೇರಿಸದೆ ದ್ರೋಹ ಮಾಡಿದ್ದಾರೆ ಎಂದು ಟೀಕಿಸಿದರು.

ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಒಳಮೀಸಲಾತಿ ಕುರಿತು ಚರ್ಚೆ ಇಲ್ಲ. ಬಸವರಾಜ ಬೊಮ್ಮಾಯಿಯವರ ನೇತೃತ್ವದ ನಮ್ಮ ಸರಕಾರ ಇದ್ದಾಗ 101 ಜಾತಿಗಳಲ್ಲಿ ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ, ಸಾಮಾಜಿಕ ನ್ಯಾಯದ ದೃಷ್ಟಿಯಿಂದ ವರ್ಗೀಕರಣ ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಚುನಾವಣೆವೇಳೆ ಕಾಂಗ್ರೆಸ್ಸಿನವರು ಜನರಿಗೆ ತಪ್ಪು ಮಾಹಿತಿ ನೀಡಿ ಕೆಲವು ಸಮುದಾಯಗಳನ್ನು ಎಸ್‍ಸಿಯಿಂದ ಕೈಬಿಡುವುದಾಗಿ ಸುಳ್ಳು ಅಪಪ್ರಚಾರ ಮಾಡಿ ಅಧಿಕಾರ ಗಿಟ್ಟಿಸಿಕೊಂಡರು ಎಂದು ಆರೋಪಿಸಿದರು. ಅಧಿಕಾರಕ್ಕೆ ಬಂದ ಬಳಿಕ ಆಶ್ವಾಸನೆ ಈಡೇರಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ ಮತ್ತು ಸರಕಾರಕ್ಕೆ ಒಳ ಮೀಸಲಾತಿ ಕೊಡುವ ಬದ್ಧತೆ ಇರಲಿಲ್ಲ. ನಮ್ಮ ಸರಕಾರವು ಹೋರಾಟಗಳು ಬೀದಿಯಲ್ಲಿ ಹೆಚ್ಚಾದ ಕಾಲದಲ್ಲಿ ಅದನ್ನು ಶಮನ ಮಾಡಲು, ಎಲ್ಲರಿಗೂ ಅವರವರ ಜಾತಿಗಳ ಸಂಖ್ಯೆಗೆ ಅವರಿಗೆ ನ್ಯಾಯ ಕೊಡುವ ಬದ್ಧತೆಯಿಂದ ಕಾಂಗ್ರೆಸ್ಸೇ ಮಾಡಿದ್ದ ಆಯೋಗಕ್ಕೆ ನಾವು ಸಹಕರಿಸಿದ್ದೆವು. ಅವರು ಹಣವನ್ನೂ ಕೊಟ್ಟಿರಲಿಲ್ಲ. ಹಣ ಕೊಟ್ಟು ವರದಿ ತರಿಸಿದ್ದು ಬಿಜೆಪಿ. ಅದಾದ ಬಳಿಕ ಆರೇಳು ವರ್ಷ ವರದಿ ಇದ್ದರೂ ಅದು ದೂಳು ತಿನ್ನುತ್ತಿತ್ತು ಎಂದರು.

ನಮ್ಮ ಸರಕಾರ ಬಂದ ಬಳಿಕ ಬಸವರಾಜ ಬೊಮ್ಮಾಯಿಯವರು ಆ ವರದಿಯಲ್ಲಿ ಲೋಪವಿದೆ; ಯಥಾವತ್ತಾಗಿ ಒಪ್ಪಲಸಾಧ್ಯ ಎಂದು ತಿರಸ್ಕರಿಸಿ, ಕ್ಯಾಬಿನೆಟ್ ಸಬ್ ಕಮಿಟಿ ಮಾಡಿ ವರದಿ ಕೊಟ್ಟಿತ್ತು. ಅದನ್ನು ಆಧರಿಸಿ ವರ್ಗೀಕರಣ ಮಾಡಲಾಗಿತ್ತು ಎಂದರು. ಮೀಸಲಾತಿ ಹೆಚ್ಚಳ, ಯಾರ್ಯಾರಿಗೆ ಎಷ್ಟೆಷ್ಟು ಎಂದು ನಿರ್ಧರಿಸಿದ್ದೆವು. ಅದನ್ನು ಕಾಂಗ್ರೆಸ್ ಸರಕಾರ ಜಾರಿಗೊಳಿಸಬೇಕಿದೆ ಎಂದು ತಿಳಿಸಿದರು. ಕ್ಯಾಬಿನೆಟ್ ಅಜೆಂಡದಲ್ಲಿ ವಿಷಯ ಯಾಕೆ ಇಟ್ಟಿಲ್ಲ? ಜನರ ವಿರೋಧದ ಆತಂಕದಿಂದ ಹೆಚ್ಚುವರಿ ವಿಷಯ ಇಟ್ಟಿದ್ದಾರೆ ಎಂದು ಆಕ್ಷೇಪಿಸಿದರು.

ಯಾರೇ ದಲಿತರೂ ನಿಮಗೆ ಮತ ಕೊಡುವುದಿಲ್ಲ. 3ಕ್ಕೆ 3 ಉಪ ಚುನಾವಣಾ ಕ್ಷೇತ್ರಗಳಲ್ಲಿ ಸೋಲುತ್ತೀರಿ ಎಂದು ಎಚ್ಚರಿಸಿದರು. ದಲಿತರ ಹೆಸರು ಹೇಳಿಕೊಂಡೇ 25 ಸಾವಿರ ಕೋಟಿ ನುಂಗಿದ್ದೀರಿ. ವಾಲ್ಮೀಕಿ ನಿಗಮದ 187 ಕೋಟಿ ನುಂಗಿದಿರಿ ಎಂದು ಟೀಕಿಸಿದರು.

ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಅವರು ಮಾತನಾಡಿ, ದಲಿತರು ಮತ್ತು ಹಿಂದುಳಿದವರ ಶ್ರೇಯಸ್ಸಿಗಾಗಿ ಕಾಂಗ್ರೆಸ್ ಸರಕಾರ ಬರಲಿದೆ ಎಂದು ಅಧಿಕಾರದ ಮಜಾವಾದಿ ಮುಖ್ಯಮಂತ್ರಿಗಳು ಚಿತ್ರದುರ್ಗದಲ್ಲಿ ಹೇಳಿದ್ದರು. ಜನಗಣತಿಯನ್ನು ಅಧಿಕಾರಕ್ಕೆ ಬಂದೊಡನೆ ಇಡುವುದಾಗಿ ಹೇಳಿದ್ದರು. ಒಳ ಮೀಸಲಾತಿಯನ್ನು ಮೊದಲನೇ ಕ್ಯಾಬಿನೆಟ್‍ನಲ್ಲಿ ಜಾರಿ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿಗಳು ಅದನ್ನು ಮಾಡಿಲ್ಲ. ಕೇಂದ್ರ ಸರಕಾರವು ಕೂಡ ಒಳಮೀಸಲಾತಿಯನ್ನು ತಿರಸ್ಕರಿಸಿತ್ತು ಎಂದು ದೂರಿದರು.

ಉಪ ಚುನಾವಣೆ ಘೋಷಣೆ ಆದೊಡನೆ ಜನಗಣತಿ ಮಂಡಿಸುವುದಾಗಿ ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಈ ಸರಕಾರವು ಈ ರಾಜ್ಯದ ದಲಿತರು, ಹಿಂದುಳಿದವರನ್ನು ದಡ್ಡರು ಅಂದುಕೊಂಡಂತಿದೆ ಎಂದು ಟೀಕಿಸಿದರು.

ಭವಿಷ್ಯದ ದಿನಗಳಲ್ಲಿ ನಿಮ್ಮನ್ನು ಯಾವ ಹಿಂದುಳಿದವರು, ದಲಿತರು ನಂಬುವುದಿಲ್ಲ ಎಂದು ಎಚ್ಚರಿಸಿದರು. ಹಿಂದುಳಿದವರು, ದಲಿತರು ಭವಿಷ್ಯದ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ಸೇ ಇಲ್ಲದಂತೆ ಮಾಡುತ್ತಾರೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಮಾತನಾಡಿ, ದಲಿತರ ಪಟ್ಟಿಯಲ್ಲಿದ್ದ 101 ಜಾತಿಗಳನ್ನು ಒಡೆದು, ವಿಭಜಿಸಿ, ರಾಜಕೀಯ ಬೇಳೆ ಬೇಯಿಸಿಕೊಂಡು ಇಲ್ಲಿನವರೆಗೆ ರಾಜಕಾರಣ ಮಾಡಿದ ಕುಖ್ಯಾತಿ ಕಾಂಗ್ರೆಸ್ ಪಕ್ಷಕ್ಕಿದೆ ಎಂದು ಆರೋಪಿಸಿದರು. ಯಡಿಯೂರಪ್ಪ- ಬೊಮ್ಮಾಯಿಯವರ ನೇತೃತ್ವದ ಸರಕಾರ 101 ಜಾತಿಗಳನ್ನೂ ಅಭಿವೃದ್ಧಿಯ ಮುಖ್ಯ ಪಥಕ್ಕೆ ತರುವಂಥ ವೈಜ್ಞಾನಿಕ ವರದಿಯನ್ನು ಜಾರಿ ಮಾಡಿದೆ ಎಂದರು.

ಮಾಜಿ ಸಚಿವ ಎನ್.ಮಹೇಶ್, ಶಾಸಕ ಮತ್ತು ಬಿಜೆಪಿ ರಾಜ್ಯ ಕಾರ್ಯದರ್ಶಿ ಬಸವರಾಜ ಮತ್ತಿಮೂಡ, ಬಿಜೆಪಿ ಮುಖಂಡರಾದ ಅನಿಲ್‍ಕುಮಾರ್, ಬಳ್ಳಾರಿ ಹನುಮಂತಪ್ಪ ಅವರು ಮಾಧ್ಯಮ ಗೋಷ್ಠಿಯಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!