
ಅರಣ್ಯ ಸಂರಕ್ಷಣೆ ಜೊತೆಗೆ ವನ್ಯಜೀವಿಗಳ ಉಳಿವಿಗಾಗಿ ಶ್ರಮಿಸಿ : ಕಾವ್ಯ ಚತುರ್ವೇದಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 9- ವನ್ಯಜೀವಿ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆಯ ಕೊಪ್ಪಳ ಪ್ರಾದೇಶಿಕ ವಿಭಾಗದಿಂದ ೭೦ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಕನಕಗಿರಿ ತಾಲೂಕಿನ ಬಂಕಾಪುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕಾವ್ಯ ಚತುರ್ವೇದಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇಂದಿನ ಪರಿಸ್ಥಿತಿಯಲ್ಲಿ ಕಾಡು, ವನ್ಯಜೀವಿಗಳ ನಾಶ, ಅರಣ್ಯ ಪ್ರದೇಶ ಒತ್ತುವರಿ, ವನ್ಯಜೀವಿ ಸಂಘರ್ಷ ಮುಂತಾದ ಕಾರಣಗಳಿಂದ ಒತ್ತಡದಲ್ಲಿದ್ದು, ಅರಣ್ಯ ಇಲಾಖೆಯು ಅರಣ್ಯ ಸಂರಕ್ಷಣೆ ಜೊತೆಗೆ ವನ್ಯಜೀವಿಗಳ ಉಳಿವಿಗಾಗಿ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ಕೊಪ್ಪಳದಲ್ಲಿ ಸಹ ವನ್ಯಜೀವಿ ಸಪ್ತಾಹ ಕಾರ್ಯಕ್ರಮನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ವಲಯ ಅರಣ್ಯಾಧಿಕಾರಿಗಳಾದ ಸುಭಾಸಚಂದ್ರ ನಾಯಕ ಅವರು ಮಾತನಾಡಿ, ಪರಿಸರದಲ್ಲಿ ಪ್ರತಿಯೊಂದು ಜೀವಿಯು ಮುಖ್ಯವಾಗಿದ್ದು, ಪ್ರತಿಯೊಂದು ಪ್ರಾಣಿಯೂ ಇನ್ನೊಂದರ ಮೇಲೆ ಅವಲಂಬನೆಯಾಗಿದ್ದು, ಆಹಾರ ಸರಪಳಿ ಕ್ರಮವಾಗಿದೆ. ಈ ಆಹಾರ ಸರಪಳಿ ಕಾಡು ನಾಶ, ಒತ್ತುವರಿ, ಕೀಟನಾಶಕ ಬಳಕೆಯಿಂದ ತುಂಡಾಗಿದ್ದು, ಪರಿಸರ ರಕ್ಷಣೆಗಾಗಿ ಇಲಾಖೆಯೊಂದಿಗೆ ಜನರ ಸಹಕಾರ ಅಗತ್ಯವೆಂದು ಹೇಳಿದರು.
ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾದ ಮಂಜುನಾಥ ಅವರು ಮಾತನಾಡಿ, ಅರಣ್ಯ ಇಲಾಖೆ ಈ ಹಿಂದೆ ಬಂಕಾಪುರ ಗ್ರಾಮದಲ್ಲಿ ಗ್ರಾಮ ಅರಣ್ಯ ಸಮಿತಿ ರಚನೆ ಮಾಡಿ ಊರ ಜನರಿಗೆ ಎತ್ತಿನ ಬಂಡಿ, ಶಾಲೆಗೆ ಡೆಸ್ಕ್ ಮತ್ತು ಕಟ್ಟಡ ಕೂಡ ನಿರ್ಮಿಸಿ ಕೊಟ್ಟಿದೆ. ಊರ ಜನರು ಅರಣ್ಯ ಇಲಾಖೆಯೊಂದಿಗೆ ಸಹಕಾರದೊಂದಿಗಿದ್ದು, ಇಲಾಖೆ ಕೂಡ ನಮಗೆ ಇಲಾಖೆಯಿಂದ ಇರುವ ಯೋಜನೆಗಳನ್ನು ತಲುಪಿಸಬೇಕು ಎಂದು ತಿಳಿಸಿದರು.
ಕೊಪ್ಪಳ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ.ಎಚ್.ಮುಲ್ಲಾ ಅವರು ಮಾತನಾಡಿ, ಪ್ರತಿಯೊಂದು ಪ್ರದೇಶವು ವಿಶೇಷ, ವಿಭಿನ್ನವಾಗಿದ್ದು, ಇಲ್ಲಿ ಕರಡಿ, ಚಿರತೆ ಹೈನಾ, ತೋಳ, ನರಿ, ನೀರು ನಾಯಿ, ಇನ್ನೂ ಮುಂತಾದ ವನ್ಯಜೀವಿಗಳ ಆವಾಸಸ್ಥಾನವಾಗಿದೆ. ಮೊನ್ನೆ ನಡೆದ ಕೆ.ಎ.ಎಸ್ ಪರೀಕ್ಷೆಯಲ್ಲಿ ಬಂಕಾಪುರ ತೋಳಧಾಮದ ಬಗ್ಗೆ ಪ್ರಶ್ನೆ ಕೇಳುವ ಮೂಲಕ ಬಂಕಾಪುರ ಗ್ರಾಮವು ಇಡೀ ರಾಜ್ಯಕ್ಕೆ ಹಾಗೂ ದೇಶಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಈ ಸಂದ0ರ್ಭದಲ್ಲಿ ಮುನಿರಾಬಾದ್ ವಲಯ ಅರಣ್ಯಾಧಿಕಾರಿಗಳಾದ ಸ್ವಾತಿ ಎಲ್., ಕುಷ್ಟಗಿ ವಲಯ ಅರಣ್ಯಾಧಿಕಾರಿಗಳಾದ ಶಿವರಾಜ್ ಮೇಟಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಯಮನೂರಪ್ಪ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಲಕ್ಷಮ್ಮ, ಪಾಮಣ್ಣ ಸೊಲ್ಲರ್, ಶಾಲೆ ಶಿಕ್ಷಕರು, ಮಕ್ಕಳು, ಗ್ರಾಮಸ್ಥರು ಮತ್ತು ಆಡಳಿತ ಸಿಬ್ಬಂದಿಗಳು ಸೇರಿದಂತೆ ಮತ್ತಿತರರಿದ್ದರು.