ಎಂಪವರ್ಡ್ ಸಮಿತಿ ಸಭೆ (1)

ಆರ್ಥಿಕವಾಗಿ ದುರ್ಬಲವಾಗಿರುವ ಕಾರಾಗೃಹ ಬಂಧಿಗಳಿಗೆ ಜಾಮೀನಿಗಾಗಿ ನಗದು ಖಾತರಿ ಸೌಲಭ್ಯಕ್ಕೆ ಕ್ರಮ ವಹಿಸಿ : ನಲಿನ್ ಅತುಲ್

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 23- ಜಿಲ್ಲೆಯ ಕಾರಾಗೃಹದಲ್ಲಿರುವ ಬಂಧಿಗಳಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ, ಜಾಮೀನಿಗೆ ನಗದು ಖಾತರಿ ನೀಡದ ಸ್ಥಿತಿಯಲ್ಲಿರುವ ಕಾರಾಗೃಹ ವಿಚಾರಣಾ ಬಂಧಿಗಳು ಹಾಗೂ ಶಿಕ್ಷಾ ಬಂಧಿಗಳಿಗೆ ಜಾಮೀನಿಗಾಗಿ ನಗದು ಖಾತರಿ ಒದಗಿಸಲು ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿಗಳು ಹಾಗೂ ಎಂಪವರ್ಡ್ ಸಮಿತಿಯ ಅಧ್ಯಕ್ಷರಾದ ನಲಿನ್ ಅತುಲ್ ಅವರು ತಿಳಿಸಿದರು.

ಇತ್ತೀಚಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಎಂಪವರ್ಡ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ನಡುವಳಿಗಳ ಪತ್ರದಲ್ಲಿ ಕೇಂದ್ರ ಗೃಹ ಮಂತ್ರಾಲಯ ನೀಡಿರುವ ನಿರ್ದೇಶನದನ್ವಯ ಕಾರಾಗೃಹಗಳಲ್ಲಿ ದಾಖಲಿರುವ ವಿಚಾರಣಾ ಬಂಧಿಗಳು ಮತ್ತು ಶಿಕ್ಷಾ ಬಂಧಿಗಳಿಗೆ ಗೌರವಾನ್ವಿತ ನ್ಯಾಯಾಲಯದ ಆದೇಶದಂತೆ ಶಿಕ್ಷಾ ಅವಧಿ ಪೂರೈಸಿ ದಂಡದ ಮೊತ್ತ ಪಾವತಿಸದೇ ಇರುವ ಮತ್ತು ಜಾಮೀನು ಬಿಡುಗಡೆಗೆ ನಗದು ಖಾತರಿ ಪಾವತಿಸದೇ ಇರುವ ಬಂಧಿಗಳ ಬಿಡುಗಡೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರೂಪಿಸಿರುವ ಮಾರ್ಗಸೂಚಿ ಹಾಗೂ ಎಸ್‌ಒಪಿ ಅನ್ವಯ ಎಂಪವರ್ಡ್ ಕಮಿಟಿ ಹಾಗೂ ಓವರ್‌ಸೈಟ್ ಕಮಿಟಿಯನ್ನು ರಚಿಸಲಾಗಿದ್ದು, ಸಮಿತಿ ರಚನೆಯ ಉದ್ದೇಶಗಳಂತೆ ಆರ್ಥಿಕವಾಗಿ ದುರ್ಬಲವಾಗಿರುವ ಕಾರಾಗೃಹ ಬಂಧಿಗಳಿಗೆ ಜಾಮೀನಿಗಾಗಿ ಆರ್ಥಿಕ ಸೌಲಭ್ಯ ಒದಗಿಸಲು ಕ್ರಮ ವಹಿಸಿ ಎಂದು ಅವರು ತಿಳಿಸಿದರು.

ಕಾರಾಗೃಹಗಳಲ್ಲಿ ದಾಖಲಿರುವ ವಿಚಾರಣಾ ಬಂಧಿಗಳು ಜಾಮೀನು ಪಡೆದು ನಗದು ಖಾತರಿ ಪಾವತಿಸದೇ ಇರುವ, ಆರ್ಥಿಕವಾಗಿ ದುರ್ಬಲವಾಗಿರುವ ಬಂಧಿಗಳ ಬಿಡುಗಡೆಗೆ ರೂ.40,000/- ವರೆಗೆ ಅನುಕೂಲ ನೀಡುವ ಸಲುವಾಗಿ ಎಂಪವರ್ಡ್ ಸಮಿತಿಯನ್ನು ರಚಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಶಿಕ್ಷೆಯಾದ ಬಂದಿಗಳು ಶಿಕ್ಷ ಪೂರೈಸಿ, ದಂಡದ ಹಣ ಪಾವತಿಸಲಾಗದೇ ಇರುವ ಶಿಕ್ಷಾ ಬಂಧಿಗಳಿಗೆ ರೂ.25,000/- ವರೆಗೆ ಆರ್ಥಿಕ ಸಹಾಯ ನೀಡಲು ಸಮಿತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ಸಮಿತಿ ನೀಡುವ ಆರ್ಥಿಕ ಸಹಾಯವು ಭ್ರಷ್ಟಾಚಾರ ನಿಷೇಧ ಕಾಯ್ದೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ಸೇವನೆ ಮಸೂದೆ, ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ದಾಖಲಿರುವ ಬಂಧಿಗಳಿಗೆ ಈ ಸಮಿತಿಯಡಿ ಯಾವುದೇ ಸೌಲಭ್ಯಗಳು ಅನ್ವಯವಾಗುವುದಿಲ್ಲ ಎಂದು ಅವರು ತಿಳಿಸಿದರು.

ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ವಿಜಯಕುಮಾರ ಚೌಹಾಣ್ ಅವರು ಮಾತನಾಡಿ, ಸಮಿತಿಯ ಆರ್ಥಿಕ ಸೌಲಭ್ಯ ಪಡೆಯಲು ಬಂಧಿಗಳು ಆರ್ಥಿಕವಾಗಿ ದುರ್ಬಲವಾಗಿರಬೇಕು ಮತ್ತು ಪುನರಾವರ್ತಿತ ಅಪರಾಧಿಯಾಗಿರಬಾರದು.

ಸ್ವಂತ ಆಸ್ತಿ ಹೊಂದಿರಬಾರದು. ಖಾಸಗಿ ವಕೀಲರನ್ನು ನೇಮಿಸಿಕೊಂಡಿರಬಾರದು. ಸಮಿತಿಯ ಮಾರ್ಗಸೂಚಿಗಳನ್ವಯ ಪರಿಶೀಲಿಸಿ ಬಂಧಿಗಳಿಗೆ ಆರ್ಥಿಕ ಸೌಲಭ್ಯಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಲಕಾರಿ ರಾಮಪ್ಪ ಒಡೆಯರ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾದ ಮಹಾಂತೇಶ ಸಂಗಪ್ಪ ದರ್ಗದ್, ಹೆಚ್ಚುವರಿ ಎಸ್‌ಪಿ ಹೇಮಂತ್‌ಕುಮಾರ್, ತಹಶೀಲ್ದಾರ ವಿಠ್ಠಲ್ ಚೌಗಲಾ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕುಗಳ ತಹಶೀಲ್ದಾರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!