
ಲಂಘನಂ ಪರಮೌಷಧಮ್ ಉಪವಾಸದ ಮಹತ್ವ : ವೀಣಾ ಪಾಟೀಲ್
ಕರುನಾಡ ಬೆಳಗು ಸುದ್ದಿ
ಹಸಿವಾದಾಗ ಮಾತ್ರ ತಿಂದು ಹಸಿವಿಲ್ಲದಾಗ ಉಣ್ಣದಿರುವ ಪ್ರಾಣಿಸಂಕುಲದ ಮಧ್ಯದಲ್ಲಿ ಬುದ್ಧಿಜೀವಿ ಎನಿಸಿಕೊಂಡ ಮನುಷ್ಯ ಮಾತ್ರ ಹಸಿವಿರಲಿ ಇಲ್ಲದಿರಲಿ ಬಾಯಿಚಪಲಕ್ಕೆ ಒಳಗಾಗಿ ಹೊಟ್ಟೆ ತುಂಬಿಸುತ್ತಾನೆ, ಪರಿಣಾಮವಾಗಿ ಆತನಲ್ಲಿ ಜೀರ್ಣ ಸಂಬಂಧಿ ತೊಂದರೆಗಳು, ಬೊಜ್ಜು, ರಕ್ತದೊತ್ತಡ, ಮಧುಮೇಹ ಮತ್ತು ಥೈರಾಯಿಡ್ ನಂತಹ ಹಾರ್ಮೋನಗಳಿಗೆ ಸಂಬಂಧಿಸಿದ ಖಾಯಿಲೆಗಳಿಗೆ ತುತ್ತಾಗುತ್ತಾನೆ.
ಸಾಮಾನ್ಯವಾಗಿ ನಮ್ಮ ಮನೆಯಲ್ಲಿರುವ ಸಾಕಿದ ನಾಯಿ ಬೆಕ್ಕುಗಳು ಅವುಗಳ ದೇಹಕ್ಕೆ ಒಗ್ಗದೆ ಇರುವ ಏನನ್ನಾದರೂ ತಿಂದರೆ ಕೆಲ ಸಮಯದಲ್ಲಿಯೇ ಹುಲ್ಲನ್ನು ತಿಂದು ಈ ಮೊದಲು ತಿಂದಿರುವುದೆಲ್ಲವನ್ನು ಕಕ್ಕುವುದನ್ನು ಕಾಣುತ್ತೇವೆ. ಇದು ಪ್ರಾಣಿಗಳು ತಮ್ಮ ಆರೋಗ್ಯ ಕಾಯ್ದುಕೊಳ್ಳಲು ಕಂಡುಕೊಂಡ ಪರಿಹಾರ. ಹಸಿವಿಲ್ಲದಿರುವಾಗ ಅದೆಷ್ಟೇ ಮೃಷ್ಠಾನ್ನ ಭೋಜನವನ್ನು ಮುಂದೆ ಇಟ್ಟರೂ ಪ್ರಾಣಿಗಳು ತಿನ್ನುವುದಿಲ್ಲ.
ನಮ್ಮ ಆಯುರ್ವೇದದಲ್ಲಿ ‘ಲಂಘನಂ ಪರಮೌಷಧಂ’ ಎಂಬ ಮಾತಿದೆ. ‘ಲಂಘನ’ ಎಂದರೆ ಉಪವಾಸ ಎಂದರ್ಥ. ಎಷ್ಟೋ ಬಾರಿ ನಾವು ಕೈಗೊಳ್ಳುವ ಉಪವಾಸವೊಂದೇ ನಮ್ಮೆಲ್ಲ ಜೀರ್ಣ ಸಂಬಂಧಿ ತೊಂದರೆಗಳನ್ನು ಪರಿಹರಿಸಬಲ್ಲದು.
ಉಪವಾಸ ಎಂದರೆ ವಾರದಲ್ಲಿ ಒಂದು ದಿನ ಕೇವಲ ಒಂದೇ ಹೊತ್ತು, ಆಹಾರವನ್ನು,ಉಳಿದೆರಡು ಹೊತ್ತಿನಲ್ಲಿ ಕೇವಲ ದ್ರವಾಹಾರವನ್ನು ಸ್ವೀಕರಿಸುವುದನ್ನು ಒಪ್ಪೊತ್ತು ಎಂದು ಹೇಳುತ್ತಾರೆ. ಇಡೀ ದಿನ ಕೇವಲ ದ್ರವಾಹಾರಗಳಾದ ಹಾಲು, ಕಾಫಿ, ಚಹಾ, ಪಾನಕ ಶರಬತ್ತುಗಳಲ್ಲಿ ಯಾವುದಾದರೂ ಒಂದೆರಡನ್ನು ಹೊರತುಪಡಿಸಿ ಮತ್ತೇನನ್ನು ಸೇವಿಸದೇ ಇರುವುದು ಮತ್ತೊಂದು ವಿಧ. ಮತ್ತೆ ಕೆಲವರು ಇಡೀ ದಿನ ಕೇವಲ ನೀರನ್ನು ಸೇವಿಸಿ ಉಪವಾಸ ಮಾಡಿದರೆ ಇನ್ನೂ ಕೆಲವರು ನೀರನ್ನು ಕೂಡ ಸೇವಿಸದೆ ಕಠಿಣ ಉಪವಾಸ ವ್ರತದಲ್ಲಿ ತೊಡಗುತ್ತಾರೆ.
ಯಾವುದಾದರೂ ಸರಿ ಆರೋಗ್ಯ ಅನುಮತಿಸದ ಹೊರತು ಉಪವಾಸ ಒಳ್ಳೆಯದೇ. ಸದಾ ಏನನ್ನಾದರೂ ಬಾಯಾಡಿಸುತ್ತಲೇ ಇರುವುದರಿಂದ ಮನುಷ್ಯನ ಜೀರ್ಣಾಂಗಗಳು ಸತತವಾಗಿ ಕಾರ್ಯನಿರ್ವಹಿಸುತ್ತವೆ. ಅವಶ್ಯಕತೆಗಿಂತ ಹೆಚ್ಚು ಆಹಾರ, ಉಪ್ಪು ಹುಳಿ, ಖಾರ ಹೆಚ್ಚಾಗಿರುವ ಆಹಾರಗಳು ಪಿತ್ತ ಕೆರಳಲು,ಹೊಟ್ಟೆಯಲ್ಲಿ ಆಮ್ಲವನ್ನು ಹೆಚ್ಚಿಸಲು,ಹೊಟ್ಟೆ ಉಬ್ಬರ, ಉದರವಾಯು, ಹುಳಿತೇಗು, ಒಣ ತೇಗು ಮುಂತಾದ ಉದರ ವಿಕಾರಗಳಿಗೆ ಕಾರಣವಾಗುತ್ತದೆ. ನಿಯಮಿತವಾಗಿ ಉಪವಾಸ ಮಾಡುವುದರಿಂದ ನಮ್ಮ ಜೀರ್ಣಾಂಗವ್ಯೂಹಕ್ಕೆ ವಿಶ್ರಾಂತಿ ದೊರೆತು ಮತ್ತೆ ಸಕ್ಷಮವಾಗಿ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ. ಇದು ವೈಜ್ಞಾನಿಕ ಕಾರಣವಾದರೆ, ಉಪವಾಸದಿಂದಾಗುವ ಮತ್ತಷ್ಟು ಪರಿಣಾಮಗಳು ಹೀಗಿವೆ.
*ಉಪವಾಸದಿಂದ ದೇಹದಲ್ಲಿ ಹೆಚ್ಚಾಗಿರುವ ಕೊಲೆಸ್ಟ್ರಾಲ್, ಬೊಜ್ಜು ಕರಗುವುದರಿಂದ ದೇಹದಲ್ಲಿ ಹಗುರತೆ ಉಂಟಾಗಿ ಮಾನಸಿಕ ನೆಮ್ಮದಿಯನ್ನು ಅನುಭವಿಸುತ್ತೇವೆ.
*ರಕ್ತದೊತ್ತಡ ಮತ್ತು ಮಧುಮೇಹಗಳು ನಿಯಂತ್ರಣ ಹೊಂದುತ್ತವೆ.
*ಉಪವಾಸವು ನಮ್ಮ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
*ದೇಹದ ತೂಕ ಇಳಿಕೆಯಿಂದ ಉಂಟಾದ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಡಿಮೆಯಾಗಿ ಒತ್ತಡ ನಿವಾರಣೆಯಾಗುತ್ತದೆ, ಪರಿಣಾಮವಾಗಿ ಮಾನಸಿಕ ನೆಮ್ಮದಿ ದೊರೆಯುತ್ತದೆ.
* ಜೀರ್ಣಾಂಗ ವ್ಯೂಹ ಮತ್ತು ಕರುಳಿನ ಭಾಗಗಳು ವಿಶ್ರಾಂತಿಯನ್ನು ಪಡೆಯುತ್ತವಲ್ಲದೆ ನೀರಿನ ಸೇವನೆಯಿಂದ ದೇಹದಲ್ಲಿ ಅಳಿದುಳಿದ ಎಲ್ಲ ಕಶ್ಮಲಗಳು ಹೊರಹಾಕಲ್ಪಡುತ್ತವೆ.
*ಮನೋದೈಹಿಕ ಆರೋಗ್ಯ ಸುಧಾರಿಸಿದ ಪರಿಣಾಮವಾಗಿ ದೇಹವು ಕಾಂತಿಯುತವಾಗಿ ಹೊಳೆಯುತ್ತದೆ ಚರ್ಮವು ನುಣುಪಾಗುತ್ತದೆ.
*ಉಪವಾಸದಿಂದ ಬೊಜ್ಜು ಕರಗುವುದಲ್ಲದೆ ದೇಹದಲ್ಲಿ ಸುಲಭ ರಕ್ತ ಪರಿಚಲನೆ ಉಂಟಾಗುತ್ತದೆ. ಇದರಿಂದ ಹೃದ್ರೋಗದ ತೊಂದರೆ ಬಾಧಿಸುವುದಿಲ್ಲ, *ಕ್ಯಾನ್ಸರ್ ವಿರುದ್ಧ ಹೋರಾಡುವ ಪ್ರತಿರೋಧ ಶಕ್ತಿಯನ್ನು ದೇಹವು ಗಳಿಸಿಕೊಳ್ಳುತ್ತದೆ ರಕ್ತದೊತ್ತಡ ಮತ್ತು ಮಧುಮೇಹಗಳು ಕೂಡ ದೂರವಾಗುತ್ತವೆ.
* ಮೆದುಳು ಹೆಚ್ಚು ಕ್ರಿಯಾಶೀಲವಾಗಿ ಮತ್ತು ಒತ್ತಡ ರಹಿತವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ.
*ಉತ್ತಮ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದಲ್ಲದೆ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.
*ಸ್ನಾಯು,ಖಂಡಗಳು ಬಲಿಷ್ಠವಾಗುತ್ತವೆ. ದೈಹಿಕ ಬಲಿಷ್ಠತೆ ದೇಹಕ್ಕೆ ಒದಗುವ ನೋವುಗಳನ್ನು ತಡೆಗಟ್ಟುವ ಶಕ್ತಿಯನ್ನು ಹೊಂದುತ್ತದೆ. ಒಳ್ಳೆಯ ದೈಹಿಕ ಶಕ್ತಿಯಿಂದಾಗಿ ಮಾನಸಿಕ ಶಕ್ತಿಯು ಕೂಡ ಹೆಚ್ಚಾಗುತ್ತದೆ, ಮನಸ್ಸು ಪ್ರಕುಲತವಾಗುತ್ತದೆ. *ಸಕಾರಾತ್ಮಕ ಚಿಂತನೆಗಳು ಹೆಚ್ಚಾಗಿ ಬುದ್ಧಿ ಮನಸ್ಸು ದೇಹ ಎಲ್ಲವೂ ಏಕತ್ರ ಭಾವದಲ್ಲಿ ಒಂದಾಗುತ್ತವೆ.
ಆದ್ದರಿಂದ ಉಪವಾಸ ಪ್ರಕ್ರಿಯೆಯ ಮೂಲಕ ಉತ್ತಮವಾದ ಎಲ್ಲ ವಿಷಯಗಳನ್ನು ನಿಮ್ಮದಾಗಿಸಿಕೊಂಡು ಒಳ್ಳೆಯ ಆರೋಗ್ಯಕರ ಜೀವನವನ್ನು ಸಾಧಿಸಿ.