ರತನ್ ಟಾಟಾ ಅವರಿಗೆ `ಭಾರತ ರತ್ನ’ ಸಿಗಲಿ : ಬಿಡಿಸಿಸಿಐ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 10- ಭಾರತೀಯ ಕೈಗಾರಿಕೋದ್ಯಮವನ್ನು ವಿಶ್ವಮಟ್ಟದಲ್ಲಿ ಬೆಳೆಸಿದ ಮಹಾನ್ ರಾಷ್ಟ್ರಪ್ರೇಮಿ ರತನ್ ಟಾಟಾ ಅವರಿಗೆ ಭಾರತ ರತ್ನ’ ಗೌರವ ಪುರಸ್ಕಾರವನ್ನು ನೀಡಿ ಕೇಂದ್ರ ಸರ್ಕಾರ ಗೌರವಿಸಬೇಕು ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ನಿರ್ಣಯಗೊಂಡಿದೆ.
ರತನ್ ಟಾಟಾ ಅವರ ಆತ್ಮಕ್ಕೆ ಶಾಂತಿಕೋರಿ ನಡೆಸಿದ `ಶ್ರದ್ಧಾಂಜಲಿ’ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು, ಟಾಟ ಅವರು ಸದಾ ಸಾಹಸಗಳನ್ನ – ಸವಾಲುಗಳನ್ನು ಸ್ವೀಕರಿಸುತ್ತಲೇ ಸಾಧನೆಯ ಹೆಜ್ಜೆಗಳನ್ನು ಹಾಕಿದವರು. ರತನ್ ಟಾಟ ಅವರು ದೇಶದ ಅಮೂಲ್ಯವಾದ ರತ್ನ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಕೈಗಾರಿಕೋದ್ಯಮಕ್ಕೆ ಬ್ರಾಂಡ್ ನಿರ್ಮಿಸಿದ ಕೀರ್ತಿ ಇವರದ್ದು ಎಂದರು.
ರತನ್ ಟಾಟಾ ಅವರಂಥಹ ಕೈಗಾರಿಕೋದ್ಯಮಿ, ದಾನಿ, ಶಿಕ್ಷಣಪ್ರೇಮಿ, ಸದಾಕಾಲ ದೇಶದ ಜನರ ಹಿತಕ್ಕಾಗಿ – ದೇಶಕ್ಕಾಗಿ ಚಿಂತಿಸುವ ವ್ಯಕ್ತಿ ಮತ್ತೊಮ್ಮೆ ಹುಟ್ಟಿ ಬರಬೇಕು. ರತನ್ ಟಾಟಾ ಅವರ ಜೀವನ, ಆದರ್ಶಗಳನ್ನು ಪ್ರತಿಯೊಬ್ಬ ಕೈಗಾರಿಕೋದ್ಯಮಿಗಳು ಅಳವಡಿಸಿಕೊಂಡು ದೇಶಸೇವೆ ಮಾಡಬೇಕು ಎಂದರು.
ನಿಕಟಪೂರ್ವ ಅಧ್ಯಕ್ಷ ಬಿ. ಮಹಾರುದ್ರಗೌಡ ಅವರು, ರತನ್ ಟಾಟಾ ಅವರು, ರತನ್ ಟಾಟಾ ಅವರು ದೇಶಕಂಡ ಮಹಾನ್ ಮಾನವತಾವಾದಿ, ಕೈಗಾರಿಕೋದ್ಯಮಿ, ಶಿಕ್ಷಣಪ್ರೇಮಿ, ದಾನಿ. ರತನ್ಟಾಟಾ ಅವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಮಾಜಿ ಅಧ್ಯಕ್ಷರಾದ ಸಿ. ಶ್ರೀನಿವಾಸರಾವ್ ಅವರು, ರತನ್ ಟಾಟಾ ಅವರ ನಿರ್ಗಮನ ದೇಶಕ್ಕೇ ಆಘಾತಕಾರಿ. ಟಾಟಾ ಸಮೂಹ ಸಂಸ್ಥೆಗಳನ್ನು ಸಮರ್ಥವಾಗಿ ಬೆಳೆಸಿದ ಕೀರ್ತಿ-ಗೌರವ ಇವರಿಗೆ ಸಲ್ಲುತ್ತದೆ ಎಂದರು.
ಜAಟಿ ಕಾರ್ಯದರ್ಶಿ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ ಅವರು, ರತನ್ ಟಾಟಾ ಮತ್ತು ಅವರ ಕುಟುಂಬದ ಹಿರಿಯ ಜೆಮ್ಶೆಡ್ ಜೀ ಅವರ ಸಾಹಸಗಳು, ಉದ್ಯಮಗಳು ಮತ್ತು ತಾಜ್ ಗ್ರೂಫ್ ಆಫ್ ಕಂಪನಿಗಳ ಯಶೋಗಾಥೆಯನ್ನು ವಿವರಿಸಿ, ದೇಶದಲ್ಲಿ ಭ್ರಷ್ಟಾಚಾರ, ಅವ್ಯವಹಾರ ಮತ್ತು ಕಪ್ಪುಚುಕ್ಕೆ ಇಲ್ಲದ ದೊಡ್ಡ ಸಂಸ್ಥೆ ಇದಾಗಿದೆ ಎಂದು ಟಾಟಾ ಗ್ರೂಫ್ ಆಫ್ ಹೋಟಲ್ನಲ್ಲಿ ತಮ್ಮ ಎಂಟು ವರ್ಷಗಳ ಸೇವೆಯನ್ನು ಸ್ಮರಿಸಿದರು.
ಕಾರ್ಯಕಾರಿ ಸಮಿತಿ ಸದಸ್ಯ ಎಸ್. ಜಿತೇಂದ್ರಪ್ರಸಾದ್ ಅವರು, ರತನ್ಟಾಟಾ ಅವರ ಆದರ್ಶಗಳನ್ನು-ವ್ಯವಹಾರದಲ್ಲಿಯ ಕೌಶಲ್ಯಗಳನ್ನು ಯಶಸ್ಸಿನ ಸೂತ್ರಗಳನ್ನು ಇಂದಿನ ಯುವಶಕ್ತಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕಾರಿ ಸಮಿತಿ ಸದಸ್ಯ ಕೆ.ಗೋಪಾಲರೆಡ್ಡಿ, ಕೋವಿಡ್-೧೯ರ ಸಂಕಷ್ಟದಲ್ಲಿ ಕೇಂದ್ರ ಸರ್ಕಾರಕ್ಕೆ ೨೫೦೦ ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿ, ಅಗತ್ಯವಿದಲ್ಲಿ ಇನ್ನೂ ಹೆಚ್ಚಿನ ಹಣ ನೀಡುವುದಾಗಿ ಸ್ಥೈರ್ಯ ತುಂಬಿದ ಮಹಾನ್ ವ್ಯಕ್ತಿ ಎಂದರು.
ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಪಿ ವೆಂಕಟೇಶ್ ಅವರು, ರತನ್ ಟಾಟಾ ಅವರ ಸಾಧನೆಯ ಸ್ಮರಣೆಗಾಗಿ ಅವರ ಹೆಸರಲ್ಲಿ ನಮ್ಮ ಸಂಸ್ಥೆ ಪ್ರಶಸ್ತಿ – ಪುರಸ್ಕಾರ ನೀಡುವಂತಾಗಲಿ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು ಸ್ವಾಗತಿಸಿದರು. ಸಭೆಯಲ್ಲಿ ಎರೆಡು ನಿಮಿಷಗಳ ಮೌನಾಚರಿಸಿ, ಪುಷ್ಪನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.