
ಕಾರ್ಗಿಲ್ ಜಯದ ಮೂಲಕ ದೆಶಕ್ಕೆ ಹೆಮ್ಮೆ ತಂದುಕೊಟ್ಟ ಸೈನಿಕರು : ಮಹೇಶ ಮಾಲಗಿತ್ತಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 26- ಕಾರ್ಗಿಲ್ ವಿಜಯೋತ್ಸವ ದೇಶದ ಹೆಮ್ಮೆಯಾಗಿದೆ. ಇಂಥ ಹೆಮ್ಮೆಯನ್ನು ತಂದುಕೊಡಲು ಸೈನಿಕರು ಪ್ರಾಣದ ಹಂಗು ತೊರೆದು ಹೋರಾಟ ಮಾಡಿದ್ದನ್ನು ಮರೆಯುವಂತೆಯೇ ಇಲ್ಲ ಎಂದು ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಹೇಳಿದ್ದಾರೆ.
ನಗರದ ಮಾಜಿ ಸೈನಿಕರ ಸಂಘದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಠಿಣ ಪರಿಸ್ಥಿತಯಲ್ಲಿಯೂ ಜಯ ಸಾಧಿಸಿದ್ದಾರೆ. ಅಲ್ಲಿಯ ಸೈನಿಕರ ಹೋರಾಟ ಮೈ ಜುಮ್ಮೆನ್ನಿಸುತ್ತದೆ. ಕಣ್ಣಿಗೆ ನಿದ್ದೆ, ಹೊಟ್ಟೆಗೆ ಊಟ ಇಲ್ಲದಿದ್ದರೂ ಹೋರಾಡಿ ಜಯ ಸಾಧಿಸಿದರು. ಅಂಥ ಹೋರಾಟವನ್ನು ನಾವು ಎಂದು ಸಹ ಮರೆಯಲು ಸಾಧ್ಯವಿಲ್ಲ. ಸದಾ ನೆನಪಿನಲ್ಲಿರಬೇಕಾಗುತ್ತದೆ ಎಂದರು.
ಕೊಪ್ಪಳ ಮಾಜಿ ಸೈನಿಕರ ಸಂಘಕ್ಕೆ ನಿವೇಶನ ಮಂಜೂರಾತಿ ಮಾಜಲಾಗಿದ್ದು, ಅದನ್ನು ಶೀಘ್ರದಲ್ಲಿಯೇ ನೀಡಲಾಗುವುದು ಎಂದರು.
ತಹಸೀಲ್ದಾರ ವಿಠ್ಠಲ್ಲ ಚೌಗಲೇ ಮಾತನಾಡಿ, ಸೈನಿಕರ ಕಾರ್ಯವನ್ನು ದೇಶವೇ ಸ್ಮರಿಸಬೇಕಾಗುತ್ತದೆ. ಅದರಲ್ಲೂ ಕಾರ್ಗಿಲ್ ಯುದ್ಧದಲ್ಲಿ ಪ್ರಾಣದ ಹಂಗು ತೊರೆದು ಹೋರಾಟ ಮಾಡಿದ ಅವರ ದೇಶಕ್ಕೆ ಜಯ ತಂದುಕೊಟ್ಟರು. ಮಾಜಿ ಸೈನಿಕರಾಗಿದ್ದರೂ ಸಹ ಇಷ್ಟೊಂದು ಕ್ರೀಯಾಶೀಲರಾಗಿ ವಿಜಯೋತ್ಸವ ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ಮಾಜಿ ಸೈನಿಕರು ಯಾರೇ ನಮ್ಮ ಕಚೇರಿಗೆ ಕೆಲಸದ ನಿಮಿತ್ಯ ಬಂದರೇ ಅವರಿಗೆ ಮೊದಲ ಆದ್ಯತೆಯಲ್ಲಿ ಕೆಲಸ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ವಾಣಿಜ್ಯ ತೆರಿಗೆ ಅಧಿಕಾರಿ ಶಿವಾನಂದ ಪೂಜಾರ ಅವರು ಮಾತನಾಡಿ. ಸೈನಿಕರು ದೇಶ ಕಾಯುತ್ತಿರುವುದರಿಂದಲೇ ನಾವು ದೇಶದ ಒಳಗೆ ನೆಮ್ಮದಿಯಾಗಿದ್ದೇವೆ. ಅಂಥ ಸೈನಿಕರ ಶ್ರಮದ ಫಲವಾಗಿಯೇ ನೆರೆಯ ಪಾಕಿಸ್ತಾನವನ್ನು ಕಾರ್ಗಿಲ್ ಯುದ್ಧದಲ್ಲಿ ಜಯ ಸಾಧಿಸಲು ಸಾಧ್ಯವಾಗಿದ್ದು. ಅಂಥ ಜಯಕ್ಕೆ 25 ವರ್ಷ ಪೂರ್ಣಗೊಂಡಿರುವುದು ಸಹ ಹೆಮ್ಮೆಯ ಸಂಗತಿ ಎಂದರು.
ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಗೊಂದಿ, ಉಪಾಧ್ಯಕ್ಷ ಶ್ರೀಧರ ಪೊಲೀಸ್ ಪಾಟೀಲ್, ಸಹಕಾರ್ಯದರ್ಶಿ ಗುರುಬಸಯ್ಯ ಬೃಹ್ಮನಮಠ, ಮಲ್ಲಿಕಾರ್ಜುನ ಸಜ್ಜನ, ಉಮೇಶ ಕಾಮನೂರು, ಇಂಧುದರ ಸೊಪ್ಪಿಮಠ, ವಾಸಪ್ಪ ಚಲ್ಲಾ, ಯಂಕರಡ್ಡಿ ರೊಡ್ಡರ, ಕಾರ್ಗಿಲ್ ವೀರನಾರಿ ಸರೋಜಮ್ಮ ಮೇಗಳಮಠ ಇತರರು ಇದ್ದರು.
ಮಾಜಿ ಸೈನಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಶ್ರೀಧರ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.