
ಕಾನ್ ವೇ ನಿಯಮ ಉಲ್ಲಂಘನೆ ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಕ್ರಮಕ್ಕೆ ಮಜ್ಜಿಗಿ ಆಗ್ರಹ
ಕರುನಾಡ ಬೆಳಗು ವರದಿ
ಕೊಪ್ಪಳ, ೦೭- ಮುಖ್ಯಮಂತ್ರಿಗಳ ಝೀರೋ ಟ್ರಾಫಿಕ್ ಹಾಗೂ ಕಾನ್ ವೇ ನಿಯಮ ಉಲ್ಲಂಘಿಸಿದ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ ತಾಲೂಕ ಘಟಕದಿಂದ ಎಸ್ ಪಿ ಅವರಿಗೆ ದೂರು ಸಲ್ಲಿಸಿದ್ದಾರೆ.
ಸೋಮವಾರ ಸೇನೆ ತಾಲುಕ ಅಧ್ಯಕ್ಷ ಕುಬೇರ ಮಜ್ಜಿಗಿ ನೇತೃತ್ವದಲ್ಲಿ ಮನವಿ ಸಲ್ಲಿಸಿದ್ದು ಮನವಿಯಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಮರಳಿ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಜಿಂದಾಲ್ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದಾಗ ಸಿಂಧನೂರಿನಿAದ ತೋರಣಗಲ್ವರೆಗೆ ಝೀರೋ ಟ್ರಾಫಿಕ್ ಮೂಲಕ ಕಾನ್ ವೇಯಲ್ಲಿ ಮುಖ್ಯಮಂತ್ರಿಗಳು ತೆರಳುತ್ತಿದಾಗ ನಿಯಮ ಉಲ್ಲಂಘನೆಯಾಗಿದ್ದು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಗಂಗಾವತಿ ನಗರದಲ್ಲಿ ಮುಖ್ಯಮಂತ್ರಿಗಳು ಬರುವ ಕೆಲವೇ ಸೆಕೆಂಡುಗಳ ಮೊದಲು ಎಡಬದಿ ರಸ್ತೆಯಲ್ಲಿದ್ದ ಗಂಗಾವತಿ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಹಾಗೂ ಅವರ ಬೆಂಬಲಿಗರ ಒಟ್ಟು ೩ ಕಾರುಗಳು ಡಿವೈಡರ್ ದಾಟಿ ಮುಖ್ಯಮಂತ್ರಿಗಳು ಬರುವ ಕಾನ್ ವೇ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸಿವೆ. ಅದೃಷ್ಟವಶಾತ್ ನಡೆಯಬೇಕಿದ್ದ ಭಾರೀ ಅನಾಹುತ ಕೂದಲೆಳೆಯ ಅಂತರದಲ್ಲಿ ತಪ್ಪಿದೆ.
ರಾಜ್ಯ ಹಾಗೂ ರಾಷ್ಟ್ರದ ಅತೀ ಗಣ್ಯರು ಆಗಮಿಸುವ ವೇಳೆ ಅವರ ಭದ್ರತೆ ಹಾಗೂ ಸಮಯ ಪಾಲನೆಗಾಗಿ ಝೀರೋ ಟ್ರಾಫಿಕ್ ಹಾಗೂ ಕಾನ್ವೇಯಂತಹ ಕಾನೂನು ಜಾರಿಗೆ ತರಲಾಗಿದೆ.
ಹಾಲಿ ಶಾಸಕರು ಹಾಗೂ ಮಾಜಿ ಮಂತ್ರಿಯಾಗಿ ಕೆಲಸ ಮಾಡಿದ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ಇದೆಲ್ಲದರ ಬಗ್ಗೆ ಅರಿವಿದ್ದರೂ ಕೂಡ ಶಿಷ್ಟಾಚಾರ ಹಾಗೂ ಕಾನೂನು ಉಲ್ಲಂಘಿಸಿದ್ದು ಅವರ ದರ್ಪವನ್ನು ಎತ್ತಿ ತೋರುತ್ತದೆ. ಮೊದಲಿನಿಂದಲೂ ಸಿದ್ದರಾಮಯ್ಯನವರ ವಿರುದ್ಧ ದ್ವೇಷದ ರಾಜಕಾರಣವನ್ನು ಮಾಡುತ್ತಾ ಬಂದಿರುವುದನ್ನು ಗಮನಿಸಿದ್ದೇವೆ. ಹಾಗಾಗಿ ಸಿದ್ದರಾಮಯ್ಯನವರ ಜೀವಕ್ಕೆ ಧಕ್ಕೆ ತರುವ ದುರುದ್ದೇಶ ಕಂಡುಬರುತ್ತದೆ. ರಾಜ್ಯದ ಮುಖ್ಯಮಂತ್ರಿಗಳಿಗೆ ಈ ರೀತಿಯಾದರೆ ಸಾಮಾನ್ಯರ ಗತಿ ಏನು ಎಂದು ದುರಿದ್ದಾರೆ.ಕಾನೂನು ಉಲ್ಲಂಘಿಸಿ ಮುಖ್ಯಮಂತ್ರಿಗಳ ಪ್ರಾಣಕ್ಕೆ ಕುತ್ತು ತರಲು ಯತ್ನಿಸಿದ ಶಾಸಕ ಜನಾರ್ಧನ ರೆಡ್ಡಿ ಅವರ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.