ಅಕ್ಟೋಬರ್ 11ಕ್ಕೆ ಮಾರ್ಟಿನ್ ಚಿತ್ರ ಬಿಡುಗಡೆ ಪೋಸ್ಟರ್ ಬಿಡುಗಡೆ ಮಾಡಿದ ಶಾಸಕ ಭರತ್ ರೆಡ್ಡಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 31- ಧ್ರುವ ಸರ್ಜಾ ನಟಿಸಿರುವ ಮಾರ್ಟಿನ್ ಕನ್ನಡ ಚಲನಚಿತ್ರ ಅಕ್ಟೋಬರ್ 11ರಂದು ಬಿಡುಗಡೆಯಾಗಲಿದ್ದು, ನಗರದಲ್ಲಿ ಧ್ರುವ ಸರ್ಜಾ ಅಭಿಮಾನಿಗಳಿಂದ ಅಬ್ಬರದ ಪ್ರಚಾರ ಮಾಡಲಾಗುತ್ತಿದೆ. ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಮಂಗಳವಾರ ‘ಮಾರ್ಟಿನ್’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.
ನಂತರ ಮಾತನಾಡಿದ ಶಾಸಕ ನಾರಾ ಭರತ್ ರೆಡ್ಡಿ ಅವರು, ಇಂದಿನ ದಿನಗಳಲ್ಲಿ ಕನ್ನಡ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಿಲ್ಲ. ಬೇರೆ ಬೇರೆ ಭಾಷೆಗೆ ಹೆಚ್ಚಿನ ಮಹತ್ವ ನೀಡುತ್ತಿರುವುದರಿಂದ ಕನ್ನಡ ಚಿತ್ರ ರಂಗ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ ನಾವು ಕನ್ನಡ ಚಿತ್ರಗಳನ್ನು ನೋಡುವುದರಿಂದ ಮತ್ತು ಕನ್ನಡ ಭಾಷೆಯ ಬಳಕೆ ಮಾಡುವುದರಿಂದ ಕನ್ನಡವನ್ನು ಉಳಿಸಬಹುದು ಮತ್ತು ಕನ್ನಡ ಚಿತ್ರರಂಗವನ್ನು ಬೆಳೆಸಬಹುದಾಗಿದೆ. ಧ್ರುವ ಸರ್ಜಾ ಅವರ ‘ಮಾರ್ಟಿನ್’ ಚಿತ್ರ ಇದೇ ಅಕ್ಟೋಬರ್ ತಿಂಗಳು 11ರಂದು ಬಿಡುಗಡೆಯಾಗಲಿದೆ ಎಲ್ಲರೂ ತಪ್ಪದೇ ‘ಮಾರ್ಟಿನ್’ ಚಿತ್ರ ನೋಡಿ ಹಾರೈಸಿ ಮತ್ತು ಕನ್ನಡ ಚಿತ್ರರಂಗವನ್ನು ಉಳಿಸಿ ಎಂದರು.
ಇದೇ ವೇಳೆ ಮಾತನಾಡಿದ ಧ್ರುವ ಸರ್ಜಾ ಅಭಿಮಾನಿಗಳ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಎಂ.ಜಿ ಕನಕ ಅವರು ಧ್ರುವ ಸರ್ಜಾ ಅವರ ನಟನೆಯ ‘ಮಾರ್ಟಿನ್’ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಸೃಷ್ಟಿ ಆಗಿದೆ. ಅಕ್ಟೋಬರ್ 11ರಂದು ದೇಶಾದ್ಯಂತ ಬಿಡುಗಡೆ ಆಗುತ್ತಿದೆ. ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತಹ ಸಿನಿಮಾ ‘ಮಾರ್ಟಿನ್’ ಆಗಿದೆ. ಹಾಗಾಗಿ ಕನ್ನಡ ಚಲನಚಿತ್ರದ ಪ್ರೇಮಿಗಳು ಹಾಗೂ ಅಭಿಮಾನಿಗಳು ಧ್ರುವ ಸರ್ಜಾ ಅವರ ನಟನೆಯ ‘ಮಾರ್ಟಿನ್’ ಚಲನಚಿತ್ರವನ್ನು ಕುಟುಂಬದವರ ಸಮೇತ ಚಿತ್ರಮಂದಿರದಲ್ಲಿ ನೋಡಿ ಆಶೀರ್ವದಿಸಬೇಕೆಂದು ಎಂ.ಜಿ ಕನಕ ಅವರು ಹೇಳಿದರು.
ನಂತರ ಧ್ರುವ ಸರ್ಜಾ ಅಭಿಮಾನಿಗಳು ಬಳ್ಳಾರಿ ನಗರ ಮತ್ತು ಗ್ರಾಮಾಂತರದಲ್ಲಿನ ಕೆಲವು ಪ್ರದೇಶಗಳಲ್ಲಿ ಸಾವಿರಾರು ಆಟೋಗಳ ಮೇಲೆ ಮಾರ್ಟಿನ್ ಚಿತ್ರದ ಫೋಸ್ಟರ್ ಗಳನ್ನು ಅಂಟಿಸುವ ಮೂಲಕ ಅಬ್ಬರದ ಪ್ರಚಾರ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹಗರಿ ಗೋವಿಂದ, ಕೆ.ಶಿವಕುಮಾರ್ ಧ್ರುವ ಸರ್ಜಾ ಅವರ ಆಪ್ತರಾದ ರವಿ, ನೂತನ್, ವರುಣ್, ಮೂರ್ತಿ, ನಗರಾಧ್ಯಕ್ಷರಾದ ಉಮಾರ್ ಫಾರೂಕ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೈ ಅರುಣ್ ಕುಮಾರ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಧ್ರುವ ಸರ್ಜಾ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.