2

ಆಯುರ್ವೇದ ಕಾಲೇಜು-ಆಸ್ಪತ್ರೆ ಉನ್ನತೀಕರಣಕ್ಕೆ ಶಾಸಕ ನಾರಾ ಭರತ್ ರೆಡ್ಡಿ ಚಾಲನೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 01- ಕಳೆದ ಹಲವು ವರ್ಷಗಳಿಂದ ಜನರ ಆರೋಗ್ಯ ಕಾಪಾಡುತ್ತ ವೈದ್ಯಕೀಯ ಶಿಕ್ಷಣ ನೀಡುತ್ತ ಬಂದಿರುವ ತಾರಾನಾಥ ವೈದ್ಯಕೀಯ ಕಾಲೇಜು- ಆಸ್ಪತ್ರೆಯ ಕಟ್ಟಡ ಉನ್ನತೀಕರಣ ಹಾಗೂ ಬೋಧನಾ ಔಷಧಿ ಘಟಕದ ಕಟ್ಟಡ ನಿರ್ಮಾಣ ಆಗಲಿದೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ನಗರದ ಅನಂತಪುರ ರಸ್ತೆಯ ತಾರಾನಾಥ ಕಾಲೇಜು- ಆಸ್ಪತ್ರೆಯ ಆವರಣದಲ್ಲಿ ಏರ್ಪಡಿಸಿದ್ದ ಭೂಮಿಪೂಜೆ- ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಳೆದ ಎರಡು ಮೂರು ವರ್ಷಗಳಿಂದ ಬಳ್ಳಾರಿಗೆ ಕೆಎಂಇಆರ್’ಸಿಯ ಅನುದಾನ ಬಿಡುಗಡೆ ಆಗಿರಲಿಲ್ಲ. ಕೆಲವರ ಆಕ್ಷೇಪಣೆಗಳಿಂದಾಗಿ ಬಿಡುಗಡೆ ವಿಳಂಬ ಆಗಿತ್ತು. ಆದರೆ ನಾನು ಕೆಎಂಇಆರ್’ಸಿಯ ಉಸ್ತುವಾರಿ ಹೊತ್ತಿರುವ ನ್ಯಾ.ಸುದರ್ಶನ ರೆಡ್ಡಿಯವರಿಗೆ ವಸ್ತು ಸ್ಥಿತಿಯನ್ನು ತಿಳಿಸಿ, ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.

1200 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್ ಅಳವಡಿಕೆಗೆ ಯೋಜನೆ ಶೀಘ್ರ ಜಾರಿ : ಜಿಲ್ಲೆಯಲ್ಲಿ ತುಂಗಭದ್ರಾ ಜಲಾಶಯ ಇದ್ದರೂ ಕೂಡ ಬಳ್ಳಾರಿ ನಗರಕ್ಕೆ ನಿರಂತರ ಕುಡಿಯುವ ನೀರಿನ ಸೌಲಭ್ಯ ಯೋಜನೆ ಮರೀಚಿಕೆಯಾಗಿದೆ. ಹೀಗಾಗಿ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಉದ್ದೇಶದಿಂದ ೧೨೦೦ ಕೋಟಿ ರೂ.ಗಳ ವೆಚ್ಚದಲ್ಲಿ ಜಲಾಶಯದಿಂದ ನೇರವಾಗಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವ ಯೋಜನೆ ರೂಪಿಸಲಾಗಿದೆ. ಕೆಎಂಇಆರ್’ಸಿ ಅಡಿಯಲ್ಲಿದೆ ೧೨೦೦ ಕೋಟಿ ರೂ.ಗಳ ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು ಎಂದು ಹೇಳಿದ ಅವರು ಈ ಯೋಜನೆಯ ಕಾಮಗಾರಿಯನ್ನು ಆರು ತಿಂಗಳ ಒಳಗೆ ಆರಂಭಿಸಲಾಗುವುದು ಎಂದು ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದರು.

ಈ ಸಂದರ್ಭ ಬಳ್ಳಾರಿಯ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ತಾರಾನಾಥ ಆಯುರ್ವೇದ ವೈದ್ಯ ಕಾಲೇಜಿನ ಪ್ರಾಚಾರ್ಯೆ ಡಾ.ಸಯ್ಯದಾ ಅತ್ಹರ್ ಫಾತೀಮಾ, ಪಾಲಿಕೆಯ ಸದಸ್ಯ ತೆರಿಗೆ ಸ್ಥಾಯಿ ಸಮಿತಿಯ ಅಧ್ಯಕ್ಷ ನೂರ್ ಅಹ್ಮದ್, ಸದಸ್ಯರಾದ ಕವಿತಾ ಹೊನ್ನಪ್ಪ, ರಾಮಾಂಜನೇಯ, ಕಾಂಗ್ರೆಸ್ ಮುಖಂಡರಾದ ಬಿಆರೆಲ್ ಸೀನಾ, ಹೊನ್ನಪ್ಪ, ಹೊಂಡ್ರಿ ಮೊದಲಾದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!