
ನ. 2ರಂದು ನೂತನ ಕ್ಲಾಕ್ ಟವರ್ ಉದ್ಘಾಟನೆ : ಶಾಸಕ ನಾರಾ ಭರತ್ ರೆಡ್ಡಿ
ಕರುನಾಡ ಬೆಳಗು ಸುದ್ದಿ
ಬೆಂಗಳೂರು/ಬಳ್ಳಾರಿ, ೪- ಬಳ್ಳಾರಿಯ ಐತಿಹಾಸಿಕ ವೃತ್ತ ಗಡಿಗಿ ಚನ್ನಪ್ಪ ವೃತ್ತದ ನೂತನ ಕ್ಲಾಕ್ ಟವರ್ ಅನ್ನು ನ.೦೨ ರಂದು ಉದ್ಘಾಟಿಸಲಾಗುವುದು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.
ಈ ಕುರಿತು ಅವರು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆಗೊಳಿಸಿದ್ದಾರೆ.
ಬಹುಕೋಟಿ ವೆಚ್ಚದ ಕ್ಲಾಕ್ ಟವರ್ ಹಾಗೂ ಗಡಿಗಿ ಚನ್ನಪ್ಪ ವೃತ್ತದಿಂದ ಇಂದಿರಾ ಪ್ರಿಯದರ್ಶಿನಿ (ಸಂಗಮ್) ವೃತ್ತದವರೆಗಿನ ರಸ್ತೆ ಕಾಮಗಾರಿಯನ್ನು ಅಂದು ಲೋಕಾರ್ಪಣೆಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಂದು ಸಂಜೆ ಉದ್ಘಾಟನಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸುವ ಚಿಂತನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಗುರುವಾರ ಬೆಂಗಳೂರಿನ ವಿಕಾಸ ಸೌಧದ ವಸತಿ ಸಚಿವ ಬಿ.ಜಡ್.ಜಮೀರ್ ಅಹ್ಮದ್ ಅವರ ಕಚೇರಿಯಲ್ಲಿ ಸಚಿವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ವಸತಿ ಇಲಾಖೆಯ ಹಿರಿಯ ಅಧಿಕಾರಿಗಳು, ಬಳ್ಳಾರಿಯ ಜಿ.ಪಂ. ಸಿಇಓ ರಾಹುಲ್ ಸಂಕನೂರ, ಮಹಾನಗರ ಪಾಲಿಕೆಯ ಆಯುಕ್ತ ಖಲೀಲಸಾಬ, ದೇವರಾಜ್ ಹಾಜರಿದ್ದರು.