1

ಜಿಲ್ಲೆ ಅಭಿವೃದ್ಧಿ ಕಾಣಲು ಅಧಿಕಾರಿಗಳು ಶ್ರಮ ವಹಿಸಬೇಕು : ಎಂ.ಎಸ್.ದಿವಾಕರ

ಕರುನಾಡ ಬೆಳಗು ಸುದ್ದಿ

ವಿಜಯನಗರ, 24- ವಿಜಯನಗರ ಜಿಲ್ಲೆಯಾಗಿ ೩ ವರ್ಷ ಕಳೆದಿದ್ದು ಇನ್ನೂ ಅಭಿವೃದ್ಧಿ ಪಥದತ್ತ ಸಾಗಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮವಹಿಸಿ ಸರ್ಕಾರದ ಯೋಜನೆ, ಸೌಲಭ್ಯಗಳನ್ನು ಅನುಷ್ಠಾನ ಮಾಡುವ ಪ್ರಾಮಾಣಿಕ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಲಾಖಾವಾರು ಅಧಿಕಾರಿಗಳು ಸಭೆಗೆ ಸರಿಯಾದ ಮಾಹಿತಿ ಒದಗಿಸಬೇಕು, ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಮಾತ್ರವಲ್ಲದೆ ದತ್ತಾಂಶ ಸಂಗ್ರಹಣೆಯಲ್ಲಿಯೂ ಸಹ ನಿಖರತೆ ಇರಬೇಕು, ಆಗಿದ್ದಾಗ ಮಾತ್ರ ಯೋಜನೆಯ ಸ್ಥಿತಿಗತಿ ತಿಳಿಯಲು ಸಾಧ್ಯ. ಜಿಲ್ಲಾ ಮಟ್ಟದ ಅಧಿಕಾರಿಗಳು ಅನುಮತಿ ಪಡೆಯದೆ ಸಭೆಗಳಿಗೆ ಗೈರಾದರೆ ಅಂತವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಜಿಲ್ಲೆಯಲ್ಲಿ ಕೃಷಿ ಇಲಾಖೆಗೆ ಎಸ್‌ಸಿಎಸ್‌ಪಿ ಯೋಜನೆಯಡಿ ಎಲ್ಲಾ ವಲಯಗಳಿಂದ ಒಟ್ಟು ೨೮೩.೫೩ ಲಕ್ಷ ಹಣ ಬಿಡುಗಡೆ ಮಾಡಿದ್ದು, ಅದರ ಪೈಕಿ ೨೭೭.೯೦ ಲಕ್ಷ ಹಣ ಬಳಕೆಯಾಗಿದೆ ಹಾಗೂ ಟಿಎಸ್‌ಪಿ ಯೋಜನೆಯಡಿ ೧೪೨.೪೪ ಲಕ್ಷ ಹಣ ಬಿಡುಗಡೆ ಮಾಡಿದ್ದು, ೧೪೦.೬೫ ಲಕ್ಷ ಹಣ ಬಳಕೆಯಾಗಿದೆ. ಹೀಗೆ ತೋಟಗಾರಿಕೆ ಇಲಾಖೆಯಲ್ಲಿ ಎಸ್‌ಸಿಎಸ್‌ಪಿ ಯೋಜನೆಯಡಿ ಶೇ.೬೬ ಮತ್ತು ಟಿಎಸ್‌ಪಿ ಯೋಜನೆಯಡಿ ಶೇ.೯೩ ರಷ್ಟು ಹಣ ಬಳಕೆಯಾಗಿದೆ. ಈ ಯೋಜನೆಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ರೂಪಿಸಿರುವ ಯೋಜನೆಗಳು ಇದರ ಫಲ ಶೃತಿ ಅವರಿಗೆ ದೊರೆಯುವ ಹಾಗೆ ಕೆಲಸ ನಿರ್ವಹಿಸಿ ಎಂದರು.

ಪಶು ಸಂಗೋಪನಾ ಇಲಾಖೆಯಲ್ಲಿ ಬರುವ ರಾಷ್ಟಿçÃಯ ಜಾನುವಾರು ಮಿಷನ್ ಅಡಿ ವಿಮಾಯೋಜನೆ ಸರಿಯಾಗಿ ನಿರ್ವಹಿಸಿದ್ದಿರಾ ಎಂದು ಜಿಲ್ಲಾಧಿಕಾರಿಗಳು ಕೇಳಿದರು. ಅದಕ್ಕೆ ಉತ್ತರಿಸಿದ ಪಶು ಸಂಗೋಪನಾ ಇಲಾಖೆಯ ಅಧಿಕಾರಿ ವಿಮಾ ಯೋಜನೆಗೆ ೭೫ ಅರ್ಜಿಗಳು ಸ್ವೀಕೃತಿಯಾಗಿದ್ದು, ಅವುಗಳನ್ನು ಮುಂದಿನ ಹಂತಕ್ಕೆ ಕಳುಹಿಸಲಾಗಿದೆ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಈ ಯೋಜನೆಗಳಡಿಯಲ್ಲಿ ಹೆಣ್ಣು ಮಕ್ಕಳ ಶುಲ್ಕ ಮರುಪಾವತಿ ಯಾಗುವುದರಿಂದ ಶೇ.೧೦೦ ರಷ್ಟು ಹಣ ಉಪಯೋಗವಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಪ್ರವಾಸೋದ್ಯಮ ಇಲಾಖೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ೮.೯.೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಯೋಜನೆಯಡಿ ೫ ದಿನ ಪ್ರವಾಸ ಕೈಗೊಳ್ಳಬೇಕಿತ್ತು, ಯಾಕೆ ಪ್ರವಾಸ ಕೈಗೊಂಡಿಲ್ಲ ಎಂದು ಜಿಲ್ಲಾದಿಕಾರಿಗಳು ಪ್ರಶ್ನಿಸಿದರು, ಇದಕ್ಕೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯವರು ಶಾಲಾ ಶಿಕ್ಷಣ ಇಲಾಖೆಯಿಂದ ಮಕ್ಕಳ ಪಟ್ಟಿ ಕಳುಹಿಸುವುದು ತಡವಾದ ಕಾರಣ ಪ್ರವಾಸ ಕೈಗೊಳ್ಳಲಾಗಿಲ್ಲ, ಮುಂದಿನ ದಿನಗಳಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ಉತ್ತರಿಸಿದರು.

ಅಧಿಕಾರಿಗಳು ನಾನಾ ಕಾರಣ ಹೇಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರನ್ನು ಯೋಜನೆಗಳಿಂದ ವಂಚಿತರನ್ನಾಗಿಸಬೇಡಿ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶರಣಪ್ಪ ಮುದಗಲ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಎಸ್., ಡಿ.ಹೆಚ್.ಒ ಡಾ.ಶಂಕರ್ ನಾಯ್ಕ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಬಿ.ರಾಮಚಂದ್ರಪ್ಪ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!