3

ದೇಶದ ರಕ್ಷಣೆಯಲ್ಲಿ ಪೊಲೀಸರ ಸೇವೆ ಅವಿಸ್ಮರಣೀಯ : ನಲಿನ್ ಅತುಲ್

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 21- ನಮ್ಮ ದೇಶದ ರಕ್ಷಣೆಯಲ್ಲಿ ಸೈನಿಕರ ಮತ್ತು ಪೊಲೀಸರ ಸೇವೆ ಅವಿಸ್ಮರಣಿಯವಾಗಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.

ಜಿಲ್ಲಾ ಪೊಲೀಸ್ ಕಾರ್ಯಾಲಯದ ಆವರಣದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಸೈನಿಕರು ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿ ದೇಶವನ್ನು ರಕ್ಷಣೆ ಮಾಡಿದರೆ, ಪೊಲೀಸರು ಜನರ ಮಧ್ಯಯಿದ್ದುಕೊಂಡೇ ಎಲ್ಲರಿಗೂ ರಕ್ಷಣೆ ಒದಗಿಸುತ್ತಾರೆ. ಪ್ರವಾಹ, ಭಯೋತ್ಪಾದನೆಯಂತಹ ಹಲವಾರು ಆಪತ್ತಿನಿಂದ ನಮ್ಮನ್ನು ರಕ್ಷಿಸಲು ತಮ್ಮ ಜೀವನದ ಹಂಗನ್ನು ತೊರೆದು ಕಾರ್ಯನಿರ್ವಹಿಸುವ ಪೊಲೀಸರ ಸೇವೆ ಬಹಳ ಮಹತ್ವದ್ದಾಗಿದೆ. ಸೈನಿಕರಿಗಿಂತ ದೇಶದಲ್ಲಿನ ಪೊಲೀಸರು ಹೆಚ್ಚು ಸಂಖ್ಯೆಯಲ್ಲಿ ಹುತಾತ್ಮ ರಾಗಿದ್ದಾರೆ. ಜಿಲ್ಲೆಯಲ್ಲಿ ಇತ್ತೀಚೆಗೆ ಹುತಾತ್ಮರಾದ ಪೊಲೀಸ್‌ರ ಕುಟುಂಬಗಳಿಗೆ ನಾವೆಲ್ಲರೂ ಆತ್ಮಸ್ಥೈರ್ಯ ತುಂಬಬೇಕಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ ರಾಮ್ ಎಲ್ ಅರಸಿದ್ದಿ ಅವರು ಮಾತನಾಡಿ, ರಾಷ್ಟ್ರದಾದ್ಯಂತ ಇಂದು ಪೊಲೀಸ್ ಹುತಾತ್ಮರ ದಿನ ಆಚರಿಸುತ್ತಿದ್ದು, ಈ ಮೂಲಕ ಹುತಾತ್ಮ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗೌರವ ಸಲ್ಲಿಸಲಾಗುತ್ತದೆ. ಅಕ್ಟೋಬರ್ ೨೧, ೧೯೫೭ರಲ್ಲಿ ಸಿಆರ್‌ಪಿಎಫ್ ಪಡೆಯ ನೇತೃತ್ವ ವಹಿಸಿದ್ದ ಕರಣ್‌ಸಿಂಗ್ ಅವರು ಭಾರತದಲ್ಲಿ ಅತಿಕ್ರಮಣ ಮಾಡಿದ ಚೀನಾ ದೇಶದ ಸೈನಿಕರು ಮತ್ತು ಭಾರತೀಯ ಸಿಆರ್‌ಪಿಎಫ್ ಪೊಲೀಸರ ಮಧ್ಯೆ ನಡೆದ ಘರ್ಷಣೆಯಲ್ಲಿ ಭಾರತೀಯ ಹತ್ತು ಪೊಲೀಸ್‌ರು ಹುತಾತ್ಮರಾದರು. ಉಳಿದವರನ್ನು ಚೀನಿಯರು ಬಂಧಿಸಿದರು. ಅದರ ಸ್ಮರಣಾರ್ಥವಾಗಿ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸುತ್ತಾ ಬರಲಾಗುತ್ತಿದೆ. ಕರ್ತವ್ಯ ಪಾಲನೆಯಲ್ಲಿ ಪೊಲೀಸ್ ಪಡೆಗಳು ತಮ್ಮ ಜೀವನವನ್ನು ಮುಡಿಪಾಗಿಟ್ಟು ಹೋರಾಡಿದ ಹುತಾತ್ಮರನ್ನು ಇಂದು ನಾವು ಸ್ಮರಿಸಬೇಕಾಗಿದೆ. ಹಾಗೂ ಕಳೆದ ಒಂದು ವರ್ಷದಲ್ಲಿ ನಮ್ಮ ದೇಶದಲ್ಲಿ ಹುತಾತ್ಮರಾದ ಪೊಲೀಸರನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೇಮಂತ ಕುಮಾರ್ ಸೇರಿದಂತೆ ಡಿ.ವೈ.ಎಸ್.ಪಿ.ಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಹಲವು ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಪೊಲೀಸ್ ಹುತಾತ್ಮರಿಗೆ ಗೌರವ ಸಮರ್ಪಣೆ: ಕಾರ್ಯಕ್ರಮದ ಆರಂಭದಲ್ಲಿ ಪೊಲೀಸ್ ಸ್ಮಾರಕಕ್ಕೆ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಇತರೆ ಅಧಿಕಾರಿಗಳು ಹಾಗೂ ಹಲವು ಗಣ್ಯರು ಪುಷ್ಪನಮನ ಸಲ್ಲಿಸಿದರು. ಇತ್ತೀಚೆಗೆ ಹುತಾತ್ಮರಿಗೆ ಗೌರವ ಸಮರ್ಪಣೆಗಾಗಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಲಾಯಿತು ಹಾಗೂ ಮೌನಾಚಾರಣೆ ಆಚರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!