
ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿಗೆ ಕ್ರಮ : ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 27- ಜಿಲ್ಲೆಯ ಹೆಸರು ಕಾಳು ಖರೀದಿ ಕೇಂದ್ರಗಳಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಗ್ರೇಡರ್ಗಳನ್ನು ನೇಮಿಸಿ ಆದೇಶ ನೀಡುವಂತೆ ಜಿಲ್ಲಾ ಟಾಸ್ಕ್ಫೋರ್ಸ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಹೆಸರು ಕಾಳು ಖರೀದಿಸುವ ಬಗ್ಗೆ ಖರೀದಿ ಕೇಂದ್ರ ಸ್ಥಾಪಿಸುವ ಕುರಿತಂತೆ ಆಗಸ್ಟ್ 25ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಆದೇಶದಂತೆ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್ಗೆ ರೂ.8,682/- ರಂತೆ ಗರಿಷ್ಠ 22,215 ಮೆಟ್ರಿಕ್ ಟನ್ ಎಫ್.ಎ.ಕ್ಯೂ. ಗುಣಮಟ್ಟದ ಹೆಸರುಕಾಳನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಕೊಪ್ಪಳ ಜಿಲ್ಲೆಯ ರೈತರಿಂದ ಖರೀದಿಸಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಸಂಬಂಧಿಸಿದ ಪಿ.ಎ.ಸಿ.ಎಸ್., ಟಿ.ಎ.ಪಿ.ಸಿ.ಎಂ.ಎಸ್. ಮತ್ತು ಎಫ್.ಪಿ.ಓ.ಗಳ ಮುಖಾಂತರ ನೋಂದಣಿ ಕಾರ್ಯವನ್ನು ಹಾಗೂ ಖರೀದಿ ಪ್ರಕ್ರೀಯೆಯನ್ನು ಕೈಗೊಳ್ಳಬೇಕು. ನೋಂದಣಿ ಕಾರ್ಯವನ್ನು ನಾಫೇಡ್ ಸಂಸ್ಥೆಯಿಂದ ತಂತ್ರಾಂಶ ಹಾಗೂ ತರಬೇತಿ ಆಯೋಜಿಸಿದ ನಂತರ ಕಡ್ಡಾಯವಾಗಿ ರೈತರ ನೋಂದಣಿಯನ್ನು ತಂತ್ರಾಂಶದಲ್ಲಿ ಮಾತ್ರವೇ ನೋಂದಾಯಿಸಿಕೊಳ್ಳಬೇಕು. ಸಹಕಾರ ಸಂಘಗಳ ಉಪ-ನಿಬಂಧಕರಿಗೆ ಸಂಬಂಧಿಸಿದ ಖರೀದಿ ಕೇಂದ್ರಗಳ ಸಹಕಾರ ಸಂಘಗಳಿಗೆ (ಪಿ.ಎ.ಸಿ.ಎಸ್., ಟಿ.ಎ.ಪಿ.ಸಿ.ಎಂ.ಎಸ್. ಮತ್ತು ಎಫ್.ಪಿ.ಓ.) ತಕ್ಷಣವೇ ಖರೀದಿಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಯಾವುದೇ ನ್ಯೂನ್ಯತೆ ಬರದಂತೆ ಕರ್ತವ್ಯ ನಿರ್ವಹಿಸಬೇಕು. ಖರೀದಿ ಕೇಂದ್ರಗಳಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವು ಸಹಕಾರ ಸಂಘಗಳ ಮೇಲುಸ್ತುವಾರಿ ವಹಿಸಿಕೊಂಡು ವರದಿ ಮಾಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿರುವ ಕೊಪ್ಪಳ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರಾದ ಓಂಕಾರ ಎನ್.ಕೆ ಅವರು ಮಾತನಾಡಿ, ಸರ್ಕಾರವು ವಿವಿಧ ಷರತ್ತಿಗೊಳಪಟ್ಟು 2024-25ನೇ ಸಾಲಿನಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ, ಹೆಸರು ಕಾಳು ಖರೀದಿಯನ್ನು ಮಾಡಲು ಆದೇಶಿಸಿದೆ. ಕೇಂದ್ರ ಖರೀದಿ ಏಜನ್ಸಿಯನ್ನಾಗಿ ನಾಫೇಡ್ ಹಾಗೂ ಎನ್.ಸಿ.ಸಿ.ಎಫ್ ಸಂಸ್ಥೆಗಳನ್ನು ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಯನ್ನಾಗಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ದ್ವಿದಳಧಾನ್ಯ ಅಭಿವೃದ್ದಿ ಮಂಡಳಿ ನಿಯಮಿತ ಕಲಬುರಗಿ ಈ ಸಂಸ್ಥೆಗಳನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ನೇಮಿಸಲಾಗಿರುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಹೆಸರುಕಾಳನ್ನು ಖರೀದಿಸಲು ನಾಫೆಡ್ ಸಂಸ್ಥೆಯನ್ನು ಕೇಂದ್ರ ಸರ್ಕಾರದ ಖರೀದಿ ಸಂಸ್ಥಯನ್ನಾಗಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು ರಾಜ್ಯದ ಖರೀದಿ ಸಂಸ್ತೇಯನ್ನಾಗಿ ನೇಮಿಸಲಾಗಿದೆ. ಪ್ರತಿ ಎಕರೆಗೆ 02 ಕ್ವಿಂಟಾಲ್ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿಪಡಿಸಿ, ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳು ಉತ್ಪನ್ನವನ್ನು ಖರೀದಿಸಲು ನಿಗದಿಪಡಿಸಲಾಗಿದೆ. ಖರೀದಿ ಕೇಂದ್ರಗಳಲ್ಲಿ ಹೆಸರುಕಾಳು ಉತ್ಪನ್ನವನ್ನು ಖರೀದಿಸುವ ಪೂರ್ವದಲ್ಲಿ ರೈತರ ನೋಂದಣಿಯನ್ನು ಎನ್.ಐ.ಸಿ sಸಂಸ್ಥೆಯ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಬೆಳೆಗಳ ಉತ್ಪನ್ನವನ್ನು ಖರೀದಿಸಲು ಸಿದ್ಧಪಡಿಸಿರುವ ತಂತ್ರಾಂಶವನ್ನು ಸೂಕ್ತವಾಗಿ ಉನ್ನತಿಕರೀಸಿ ಬೈಯೋಮ್ರೇಟ್ರಿಕ್ ಮೂಲಕ ಹೆಸರುಕಾಳು ನೋಂದಾಯಿಸಲು ನಿರ್ದೇಶನವಿರುತ್ತದೆ. ಎನ್.ಐ.ಸಿ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಈ ನೋಂದಣಿ ತಂತ್ರಾಶವು ಈಗಾಗಲೇ ಫ್ರೂಟ್ಸ್ ತಂತ್ರಾಂಶದೊಂದಿಗೆ ಸಂಯೋಜಿಸಲಾಗಿದೆ. ಫ್ರೂಟ್ಸ್ ದತ್ತಾಂದಲ್ಲಿ ರೈತರಿಗೆ ಸಂಬಂಧಿಸಿದಿರುವ ವಿವರಗಳನ್ನು ಭೂಮಿ ಯುಐಡಿಎಐ ಮತ್ತು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ತಾಳೆ ಮಾಡಿ ವಿವರಗಳನ್ನು ಇಂದೀಕರಿಸಲಾಗಿರುತ್ತದೆ ಎಂದರು.
ಈ ವಿವರಗಳನ್ನು ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಮಾಡಲು ಸಿದ್ಧಪಡಿಸಿದ ತಂತ್ರಾಂಶಕ್ಕೆ ವಿದ್ಯುನ್ಮಾನ ರೀತಿಯಲ್ಲಿ ಒದಗಿಸಲಾಗುತ್ತದೆ. ಬೆಂಬಲ ಬೆಲೆ ಯೋಜನೆಯಡಿಯಲ್ಲಿ ನೋಂದಣಿ ಮಾಡಿದ ನಂತರ ಎನ್.ಐ.ಸಿ ತಂತ್ರಾಂಶದಿಂದ ನಾಫೇಡ್ ಸಂಸ್ಥೆಯ ತಂತ್ರಾಂಶಕ್ಕೆ ರೈತರ ನೋಂದಣಿ ಮಾಹಿತಿಯನ್ನು ಒದಗಿಸಲಾಗುವುದು. ನಾಫೆಡ್ ಸಂಸ್ಥೆಯು ತಮ್ಮ ತಂತ್ರಾಂಶದಲ್ಲಿ ಈ ಮಾಹಿತಿಯನ್ನು ಬಳಸಿ ರೈತರಿಂದ ಹೆಸರುಕಾಳು ಖರೀದಿ ಕೇಂದ್ರಗಳಿಂದ ಖರೀದಿಸಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳು ಮಾತನಾಡಿ, ಖರೀದಿ ಸಂಸ್ಥೆಗಳು ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುಂತೆ ನಾಫೇಡ್ ಮಾರ್ಗಸೂಚಿಯನ್ವಯ ಹಾಗೂ ತ್ರಾಂತ್ರಿಕ ಮತ್ತು ವೈಜ್ಞಾನಿಕ ಸೌಲಭ್ಯದಿಂದ ಕೊಂಡಿರುವ ಗೋದಾಮುಗಳನ್ನು ಒದಿರುವ ಸದೃಢ ಪಿ.ಎ.ಸಿ.ಎಸ್., ವಿ.ಎಸ್.ಎಸ್.ಎನ್., ಎಫ್.ಪಿ.ಓ., ಟಿ.ಎ.ಪಿ.ಸಿ.ಎಂ.ಎಸ್ ಸಂಸ್ಥೆಗಳ ಮುಂಖಾತರ ಒಡಂಬಡಿಕೆ ಮಾಡಿಕೊಂಡು ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮವಹಿಸಬೇಕು. ಬೆಂಬಲ ಬೆಲೆ ಯೋಜನೆಯ ಮಾರ್ಗಸೂಚಿಗಳಂತೆ ರೈತರರಿಗೆ ನಿಗದಿತ ಅವಧಿಯೋಳಗೆ ಖರೀದಿ ಪ್ರಮಾಣದ ಮೌಲ್ಯವನ್ನು ಡಿಬಿಟಿ ಮೂಲಕ ಜಮೆಯಾಗುವಂತೆ ಪಾವತಿ ಮಾಡಲು ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಖರೀದಿ ಕೇಂದ್ರಗಳ ಪ್ರಾರಂಭ : ಜಿಲ್ಲಾಧಿಕಾರಿಗಳು ಖರೀದಿ ಕೇಂದ್ರಗಳ ವಿವರಗಳನ್ನು ಮಾಹಿತಿ ನೀಡಲು ತಿಳಿಸಿದ್ದು, 2024-25ನೇ ಸಾಲಿನಲ್ಲಿ ಕುಕನೂರು, ಯಲಬುರ್ಗಾ, ಬನ್ನಿಕೊಪ್ಪ, ಚಿಕ್ಕನೆಕೊಪ್ಪ, ತೊಂಡಿಹಾಳ, ಮಧೋಳ, ಮಂಡಳಗೇರಿ, ತಾವರಗೇರಾ ಹನುಮಸಾಗರ ಹಿರೇಸಿಂಧೋಗಿ, ಮುದ್ದೇಬಳ್ಳಿ, ಕವಲೂರು ಗ್ರಾಮ ಸೇರಿ ಜಿಲ್ಲೆಯಲ್ಲಿ ಒಟ್ಟು 12 ಖರೀದಿ ಕೇಂದ್ರಗಳಲ್ಲಿ ಹೆಸರು ಖರೀದಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ನೋಡಲ್ ಅಧಿಕಾರಿ ಹಾಗೂ ಸಿಬ್ಬಂದಿಗಳ ನೇಮಕ : ಕೊಪ್ಪಳ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿರುವ ಹೆಸರುಕಾಳು ಖರೀದಿ ಕೇಂದ್ರಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಕೊಪ್ಪಳ ತಾಲ್ಲೂಕಿನ ಹಿರೇಸಿಂಧೋಗಿ, ಮುದ್ದೇಬಳ್ಳಿ ಕವಲೂರು ಖರೀದಿ ಕೇಂದ್ರಗಳಿಗೆ ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದೆ. ಅದರಂತೆ ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕುಗಳ ಯಲಬುರ್ಗಾ, ಬನ್ನಿಕೊಪ್ಪ, ಚಿಕ್ಕಕೊಪ್ಪ, ತೊಂಡಿಹಾಳ, ಮಧೋಳ, ಮಂಡಳಗೇರಿ ಖರೀದಿ ಕೇಂದ್ರಗಳಿಗೆ ಯಲಬುರ್ಗಾ-ಕುಕನೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಅವರನ್ನು ಹಾಗೂ ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಮತ್ತು ತಾವರಗೇರಾ ಖರೀದಿ ಕೇಂದ್ರಗಳಿಗೆ ಕುಷ್ಟಗಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಎಲ್ಲಾ ಅಧಿಕಾರಿ, ಸಿಬ್ಬಂದಿಯವರು ಸರಕಾರದ ಬೆಂಬಲ ಬೆಲೆ ಯೋಜನೆ ಖರೀದಿ ಪ್ರಕ್ರೀಯೆಯಲ್ಲಿ ಭಾಗವಹಿಸಿ ಸಹಕಾರ ನೀಡಿ ಯೋಜನೆಯನ್ನು ಯಶಸ್ವಿಗೊಳಿಸಬೇಕು. ಪ್ರತಿ ದಿನದ ಖರೀದಿಯ ಮಾಹಿತಿಯನ್ನು ತಿಳಿಸಬೇಕು. ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ಲೋಪ ದೋಷಗಳು ಕಂಡುಬಂದಲ್ಲಿ ತಕ್ಷಣ ಜಿಲ್ಲಾ ಟಾಸ್ಕ ಫೋರ್ಸ್ ಸಮಿತಿಯ ಗಮನಕ್ಕೆ ತಂದು, ಖರೀದಿ ಪ್ರಕ್ರೀಯೆಯ ಕಾರ್ಯಗಳನ್ನು ಯಾವುದೇ ನ್ಯೂನ್ಯತೆಗಳಿಲ್ಲದೇ ನಿರ್ವಹಿಸಿ. ಸಂಬಂಧಿಸಿದ ತಾಲೂಕ ತಹಶೀಲ್ದಾರುಗಳಿಗೆ ಹಾಗೂ ನೋಡಲ್ ಅಧಿಕಾರಿಗಳಿಗೆ ಖರೀದಿ ಕೇಂದ್ರದ ಸಂಪೂರ್ಣ ಜವಾಬ್ದಾರಿ ಇರುವುದರಿಂದ ಯಾವುದೇ ನ್ಯೂನ್ಯತೆಗಳಿಗೆ ಆಸ್ಪದ ನೀಡದಂತೆ ಕಾರ್ಯನಿರ್ವಹಿಸಬೇಕು. ಅಲ್ಲದೇ ಖರೀದಿ ಕೇಂದ್ರಗಳಿಗೆ ಸೂಕ್ತ ಪೋಲಿಸ್ ಬಂದೋಬಸ್ತ್ ವ್ಯವಸ್ಥೆಗೂ ಜಿಲ್ಲಾ ಪೋಲಿಸ್ ಇಲಾಖೆಯಿಂದ ಕ್ರಮ ಕೈಗೊಳ್ಳಬೇಕು ಎಂದರು.
ಖರೀದಿ ಕೇಂದ್ರಗಳಿಗೆ ಉಗ್ರಾಣ ಮತ್ತು ಉಪಕರಣಗಳ ವ್ಯವಸ್ಥೆಗೆ ಸೂಚನೆ: ಖರೀದಿ ಕೇಂದ್ರಗಳಿಗೆ ಅಗತ್ಯವಿರುವ ಗೋದಾಮು, ಎಲೆಕ್ಟ್ರಾನಿಕ್ ತೂಕದ ಯಂತ್ರ, ಚಾಣಿಗಳನ್ನು ಮತ್ತು ಪ್ಲೆಕ್ಸ್ ಬೋರ್ಡ್ಗಳನ್ನು ಅಳವಡಿಸಲು ಹಾಗೂ ಇನ್ನಿತರ ಅವಶ್ಯಕ ಸಾಮಗ್ರಿಗಳನ್ನು ಪೂರೈಸಲು ಕೊಪ್ಪಳ, ಕುಷ್ಟಗಿ ಹಾಗೂ ಕುಕನೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾರ್ಯದರ್ಶಿಗಳು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
*ಖರೀದಿ ದಾಸ್ತಾನಿನ ಉಗ್ರಾಣದ ವ್ಯವಸ್ಥೆ ಮಾಡಿ:* ಖರೀದಿಸಿದ ಹೆಸರುಕಾಳನ್ನು ಸಂಬಂಧಿಸಿದ ರಾಜ್ಯ ಉಗ್ರಾಣ ನಿಗಮ, ಕೊಪ್ಪಳ, ಕುಕನೂರು, ಕುಷ್ಟಗಿ, ಗಂಗಾವತಿ ಹಾಗೂ ಕಾರಟಗಿ ಉಗ್ರಾಣಗಳಲ್ಲಿ ಶೇಖರಿಸಲು ಉಗ್ರಾಣ ನಿಗಮದ ವ್ಯವಸ್ಥಾಪಕರು ಕ್ರಮ ಕೈಗೊಳ್ಳಬೇಕು.
ಖರೀದಿಸಿದ ಹೆಸರುಕಾಳು ದಾಸ್ತಾನನ್ನು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಬೆಂಗಳೂರು ಇವರು ಗುರುತಿಸಿದ ಗುತ್ತಿಗೆದಾರರ ಮೂಲಕ ಸಾಗಾಣಿಕೆಯ ಹಾಗೂ ಹಸ್ತಾಂತರ(ಹಮಾಲಿ) ವ್ಯವಸ್ಥೆಯ ಮತ್ತು ಇನ್ನಿತರ ವ್ಯವಸ್ಥೆಗಳ ಕುರಿತು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಕೊಪ್ಪಳ ಶಾಖಾ ವ್ಯವಸ್ಥಾಪಕರು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಕೃಷಿ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಕೊಪ್ಪಳ ಶಾಖಾ ವ್ಯವಸ್ಥಾಪಕರು ಹಾಗೂ ಖರೀದಿ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.