ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ (1)

ಜನ ಸಾಮಾನ್ಯರಿಗೆ ಸ್ವಚ್ಛತೆಯ ಅರಿವು ಮೂಡಿಸಿ : ಸಿಪಿಐ ಸುರೇಶ್

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 6- ಗ್ರಾಮೀಣ ಭಾಗದ ಜನ ಸಾಮಾನ್ಯರಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸುವಂತೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಸುರೇಶ ಡಿ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮದ ಮಾರುತೇಶ ದೇವಾಲಯದ ಆವರಣದಲ್ಲಿ ಆಗಸ್ಟ್ 06ರಂದು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

`ಪ್ರಿವೆನ್ಶನ್ ಈಜ್ ಬೆಟರ್ ದೆನ್ ಕ್ಯುರ್’ ಎನ್ನುವ ಆರೋಗ್ಯ ಕುರಿತಾದ ಮಾತು ಸದಾ ಪ್ರಚಲಿತ. ಆರೋಗ್ಯವಿದ್ದರೆ ಎಲ್ಲವೂ ಸಾಧ್ಯ. ಅದಕ್ಕಾಗಿ `ಆರೋಗ್ಯವೇ ಭಾಗ್ಯ’ ಎನ್ನುವುದು ಸ್ಪಷ್ಟವಾಗಿದೆ. ಆರೋಗ್ಯ ಎಂದರೆ ನಮ್ಮ ಮನೆ ಅಷ್ಟೆ ಅಲ್ಲ; ನಮ್ಮ ಸುತ್ತ ಮುತ್ತಲಿನ ವಾತಾವರಣವಾಗಿದೆ. ಅದರ ಸ್ವಚ್ಛತೆ ಕುರಿತು ಮಕ್ಕಳಾದಿಯಾಗಿ ಶ್ರಮವಹಿಸಬೇಕು. ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವ ಸದ್ಯದ ದಿನಗಳಲ್ಲಿ ಬಹಳ ಮಹತ್ವದ್ದಾಗಿದೆ. ಹಾಗಾಗಿ ಪ್ರತಿನಿತ್ಯ ಪತ್ರಿಕೆ, ನಿಯತಕಾಲಿಕೆ ಮತ್ತು ಪಠ್ಯ ಪುಸ್ತಕ ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಬಂಡಾಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು ಅವರು ಮಾತನಾಡಿ, ಸಮಾಜಸೇವೆ ಅನ್ನುವುದು ಕಲಿಯುವುದಲ್ಲ; ಅದು ಸ್ವಯಂ ಕಲಿಕೆಯಿಂದ ಬರುವಂತಹದ್ದು, ಹಾಗಾಗಿ ಮೈಗೂಡಿಸಿಕೊಳ್ಳಲು ಕರೆ ನೀಡಿದರು.

ನಿವೃತ್ತ ಪ್ರಾಚಾರ್ಯ ಬಿ.ಜಿ ಕರಿಗಾರ ಅವರು ಮಾತನಾಡಿ, ಹಿರಿಯರನ್ನು ಗೌರವಿಸಿ, ಉಪಚರಿಸಲು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಬಸಪ್ಪ ಹಂಚಿನಾಳ ಅವರು ಮಾತನಾಡಿ, ಗ್ರಾಮದ ಸಮಸ್ತ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಉಡಚಪ್ಪ ಭೋವಿ ಅವರು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಗೆ ಸಂಪೂರ್ಣ ಸಹಕಾರ ನೀಡಲು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ ಗಣಪತಿ ಕೆ ಲಮಾಣಿ ಅವರು ಮಾತನಾಡಿ, ಮಕ್ಕಳಲ್ಲಿ ಪರಿಸರ ಕಾಳಜಿ ಮತ್ತು ಸಮಾಜ ಸ್ವಾಸ್ತ್ಯದ ಅರಿವು ಮುಖ್ಯ. ಮಹಾತ್ಮಾ ಗಾಂಧಿ ಆ ದಿನಗಳಲ್ಲಿಯೇ ಸ್ವಚ್ಛತೆಗೆ ಬಹಳ ಆದ್ಯತೆ ನೀಡಿದ್ದರು. ಗಾಂಧಿ ಮಾರ್ಗ ಆರೋಗ್ಯ ಮಾರ್ಗ ಎಂದು ಹೇಳಿದರು.

ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಡಾ.ನರಸಿಂಹ ಗುಂಜಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ವಿಠೋಬ ಎಸ್, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಪ್ರದೀಪಕುಮಾರ್ ಯು, ಭೂಗೋಳ ಶಾಸ್ತç ವಿಭಾಗ ಮುಖ್ಯಸ್ಥರಾದ ಡಾ.ಅಶೋಕ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ದ್ಯಾಮನಗೌಡ ಮಾಲಿ ಪಾಟೀಲ, ಶಶಿಕಲಾ ಮಂಜಪ್ಪ ಈಶ್ವರಗೌಡ್ರ ಮತ್ತು ಗ್ರಾಮದ ಮುಖಂಡರು ವೇದಿಕೆಯ ಮೇಲಿದ್ದರು.

ಸಹಾಯಕ ಶಿಬಿರಾಧಿಕಾರಿಗಳಾದ ಶಿವಪ್ಪ ಬಡಿಗೇರ, ಕಲ್ಲಯ್ಯ ವಿ ಪೂಜಾರ್, ವಿರುಪಾಕ್ಷಪ್ಪ ಮುತ್ತಾಳ, ಎಚ್.ಜಿ ಬೊಮ್ಮನಾಳ, ಡಾ.ಆರತಿ ವಿ ಸಜ್ಜನ್, ಲಕ್ಷ್ಮಿ ಹಾಗೂ ತಾರಾಮತಿ ಉಪಸ್ಥಿತರಿದ್ದರು. ಎನ್.ಎಸ್.ಎಸ್ ವಿದ್ಯಾರ್ಥಿನಿ ದ್ರಾಕ್ಷಾಯಿಣಿ ಸ್ವಾಗತಿಸಿದರು, ಮಂಜುಳಾ ಮುಕ್ಕುಂಪಿ ಕಾರ್ಯಕ್ರಮ ನಿರೂಪಿಸಿದರೆ, ಕೊನೆಯಲ್ಲಿ ಸ್ವಾತಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!