
ಬಿಡಾಡಿ ದನಗಳನ್ನು ಮಾಲಿಕರು ರಸ್ತೆಯಲ್ಲಿ ಬಿಡದಿರಲು ಸೂಚನೆ
ಕರುನಾಡ ಬೆಳಗು ಸುದ್ದಿ
ವಿಜಯನಗರ, 28- ಹೊಸಪೇಟೆ ನಗರದಲ್ಲಿ ಬಿಡಾಡಿ ದನಗಳ ಆವಳಿ ಹೆಚ್ಚಾಗಿದ್ದು, ಬಿಡಾಡಿ ದನಗಳ ಮಾಲೀಕರಿದ್ದಲ್ಲಿ ದನಗಳನ್ನು ತಮ್ಮ ನಿವಾಸದ ಕೊಟ್ಟಿಗೆಯಲ್ಲೆ ಕಟ್ಟಿ ಕೊಳ್ಳಲು ನಗರಸಭೆ ಪೌರಾಯುಕ್ತ ಚಂದ್ರಪ್ಪ ತಿಳಿಸಿದ್ದಾರೆ.
ಬಿಡಾಡಿ ದನಗಳು ನಗರಸಭೆ ವ್ಯಾಪ್ತಿಗೆ ಬರುವ ಸಂಡೂರ್ ರಸ್ತೆ, ವಾಲ್ಮೀಕಿ ಸರ್ಕಲ್, ಎಪಿಎಂಸಿ ಸರ್ಕಲ್, ಬಳ್ಳಾರಿ ರೋಡ್ ಸರ್ಕಲ್, ಚಿತ್ತವಾಡಗಿ, ದೀಪಾಯನ ಶಾಲೆ ಮುಂಭಾಗ, ಆಕಾಶವಾಣಿ ಹತ್ತಿರ, ಆಶೋಕ್ ಬುಕ್‌ಸ್ಟಾಲ್ ಹತ್ತಿರ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ದನಗಳು ಅಡ್ಡಲಾಗಿ, ಗುಂಪು ಗುಂಪುಗಳಾಗಿ ಮಲಗುತ್ತಿರುವುದರಿಂದ ರಸ್ತೆಯಲ್ಲಿ ಒಡಾಡುವ ವಾಹನ ಸವಾರರಿಗೆ, ವಯೋವೃದ್ಧರಿಗೆ, ಚಿಕ್ಕಮಕ್ಕಳಿಗೆ ತೊಂದರೆ ಉಂಟುಮಾಡುತ್ತಿವೆ.
ಇವುಗಳಿಂದ ಅಪಘಾತವಾಗಿ ಪ್ರಾಣಹಾನಿಯ ಸಂಭವ ಇರುವುದರಿಂದ ಬಿಡಾಡಿ ದನಗಳ ಮಾಲೀಕರು ನವೆಂಬರ್ ೩ ರೊಳಗಾಗಿ ದನಗಳನ್ನು ರಸ್ತೆಯಲ್ಲಿ ಬಿಡದೆ ತಮ್ಮ ನಿವಾಸಲದಲ್ಲಿಯೇ ದನಗಳನ್ನು ಕಟ್ಟಿಕೊಳ್ಳಬೇಕು.
ಇಲ್ಲವಾದಲ್ಲಿ ಕರ್ನಾಟಕ ಪುರಸಭೆ ಅಧಿನಿಯಮ ೧೯೬೪ ರನ್ವಯ ಕ್ರಮ ಗೈಗೊಂಡು ದನಗಳನ್ನು ಗೋಶಾಲೆಗೆ ರವಾನಿಸಲಾಗುವುದು, ನಂತರ ಯಾವುದೇ ಕಾರಣಕ್ಕೂ ದನಗಳನ್ನು ಹಿಂದಿರುಗಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.