ವೀಣಾ ಪಾಟೀಲ್

ಒಲಂಪಿಕ್ ಕ್ರೀಡಾಕೂಟಗಳು 2024 : ವೀಣಾ ಪಾಟೀಲ್

ಕರುನಾಡ ಬೆಳಗು ಸುದ್ದಿ

ನನ್ನ ಮಗ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಇಂಗ್ಲಿಷ್ ನಲ್ಲಿ ಪಠ್ಯವೊಂದು ಇತ್ತು. ಆ ಪಠ್ಯದ ಒಂದು ವಾಕ್ಯ ಇಂದಿಗೂ ನನ್ನ ಮನಸ್ಸಿಗೆ ಅತ್ಯಂತ ಹತ್ತಿರವಾಗಿದೆ. ಬಹುಶಹ ಎಲ್ಲರ ಬದುಕಿಗೂ ಈ ವಾಕ್ಯ ಅನ್ವಯಿಸುತ್ತದೆ. ತುಸು ದೊಡ್ಡದಾಗಿದ್ದ ಆ ವಾಕ್ಯವನ್ನು ಒಂದು ವಾಕ್ಯದ ಉತ್ತರಕ್ಕಾಗಿ ನಾನು ಸರಳೀಕರಿಸಿ ಚಿಕ್ಕದಾಗಿಸಿದಾಗ ಪ್ರಾರಂಭದಲ್ಲಿ ಅದನ್ನು ಬರೆಯಲು ಒಪ್ಪದ ನನ್ನ ಮಗ ನಂತರ ನನ್ನ ಮಾವ ಮತ್ತು ಶಿಕ್ಷಕರು ನಾನು ಬರೆದ ರೀತಿಯೇ ಸರಿಯಾಗಿದೆ ಎಂದು ಹೇಳಿದಾಗ ಅದನ್ನು ಬರೆಯಲು ಒಪ್ಪಿಕೊಂಡ.

ಆ ವಾಕ್ಯ ಹೀಗಿದೆ “ದ ಮೇನ್ ಮೋಟೋ ಆಫ್ ಒಲಂಪಿಕ್ ಗೇಮ್ಸ್ ಇಸ್ ನಾಟ್ ಟು ವಿನ್, ಬಟ್ ಟು ಪಾರ್ಟಿಸಿಪೇಟ್”. ಇದರ ಅರ್ಥ ಒಲಂಪಿಕ್ ಆಟಗಳ ಮುಖ್ಯ ಧ್ಯೇಯ ಇರುವುದು ಆಟದಲ್ಲಿ ಪಾಲ್ಗೊಳ್ಳುವುದರಲ್ಲಿಯೇ ಹೊರತು ಗೆಲ್ಲುವುದರಲ್ಲಿ ಅಲ್ಲ ಎಂದು.

ವಿಶ್ವದ ಬಹುತೇಕ ಎಲ್ಲ ರಾಷ್ಟ್ರಗಳು ಭಾಗವಹಿಸುವ ಒಲಂಪಿಕ್ ಗೇಮ್ಸ್ ನ ಇತಿಹಾಸ ಅತ್ಯಂತ ಪುರಾತನವಾದದ್ದು. ಕ್ರಿಸ್ತಪೂರ್ವ ಏಳನೇ ಶತಮಾನದಲ್ಲಿ ಗ್ರೀಸ್ ನ ಒಲಿಂಪಿಯದಲ್ಲಿ ಈ ಆಟವನ್ನು ಆಯೋಜಿಸಲಾಗುತ್ತಿತ್ತು. ಒಲಂಪಿಯಾದ ಬಳಿ ಇರುವ ದೇವಸ್ಥಾನ ಒಂದರಲ್ಲಿ ಧಾರ್ಮಿಕ ವಿಧಿ ವಿಧಾನಗಳ ಜೊತೆಗೆ ಕ್ರೀಡಾಕೂಟವನ್ನು ಕೂಡ ಆಯೋಜಿಸಲಾಗುತ್ತಿತ್ತು ಆಗ ಇದು ಕೇವಲ ಒಂದು ದಿನದ ಕ್ರೀಡಾಕೂಟವಾಗಿತ್ತು. ಸ್ನೇಹ ವರ್ಧನೆಯ ಸಲುವಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿತ್ತು.

ಉಳಿದ ಸಮಯದಲ್ಲಿ ಅಂತರ್ಯುದ್ಧದಲ್ಲಿ ತೊಡಗಿಕೊಂಡಿರುತ್ತಿದ್ದ ಗ್ರೀಕ್ ರಾಷ್ಟ್ರಗಳು ಕ್ರೀಡಾಕೂಟದ ಸಮಯದಲ್ಲಿ ಪರಸ್ಪರ ಸ್ನೇಹ, ಸೌಹಾರ್ದ ಭಾವವನ್ನು ಹೊಂದಿರುತ್ತಿದ್ದರು.

ಒಲಂಪಿಯ ಕ್ರೀಡೆಗಳಿಗೆ ಅತ್ಯಂತ ಮಾನ್ಯತೆ ಮತ್ತು ಗೌರವಗಳು ದೊರೆಯುತ್ತಿದ್ದ ಕಾರಣ ರಾಜ ಮಹಾರಾಜರು ಕೂಡ ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಹಾತೊರೆಯುತ್ತಿದ್ದರು. ರೋಮ್ ಸಾಮ್ರಾಜ್ಯದ ದೊರೆ ನೀರೋ ಕೂಡ ಈ ಸ್ಪರ್ಧಿಗಳಲ್ಲಿ ಒಬ್ಬನಾಗಿರುತ್ತಿದ್ದನು. ಸ್ಪರ್ಧೆಗಳಲ್ಲಿ ಗೆದ್ದವರ ಆಕೃತಿಗಳನ್ನು ಸಂಗಮವರಿ ಕಲ್ಲಿನಲ್ಲಿ ಕೆತ್ತಿ ಅಲ್ಲಲ್ಲಿ ಪ್ರದರ್ಶನಕ್ಕಿಡಲಾಗುತ್ತಿತ್ತು. ಅವರ ಕುರಿತು ಪದಗಳನ್ನು ಕಟ್ಟಿ ಹಾಡಲಾಗುತ್ತಿತ್ತು, ನರ್ತನ, ಗಾಯನ, ಸಂಗೀತಗಳು ಮತ್ತು ಸರ್ಕಾರಿ ಸಮಾರಂಭಗಳು ನಡೆಯುತ್ತಿದ್ದವು, ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ‘ರಾಷ್ಟ್ರವೀರ’ ಎಂಬ ಗೌರವ ಪ್ರಾಪ್ತವಾಗುತ್ತಿತ್ತು. ಆದ್ದರಿಂದ ಈ ಕ್ರೀಡಾಕೂಟಗಳಿಗೆ ಹೆಚ್ಚಿನ ಮಾನ್ಯತೆ ಇತ್ತು.
ಸುಮಾರು 400 ವರ್ಷಗಳವರೆಗೆ ಈ ಕ್ರೀಡಾಕೂಟ ನಡೆಯಿತು.

ಕಾರಣಾಂತರಗಳಿಂದ ನಿಂತು ಹೋದ ಈ ಕ್ರೀಡಾಕೂಟವನ್ನು ಮತ್ತೆ 18ನೇ ಶತಮಾನದ ಉತ್ತರಾರ್ಧದಲ್ಲಿ ಆರಂಭಿಸಲು ಉತ್ಸಾಹ ತೋರಿದ ವ್ಯಕ್ತಿ ಕವಿ ಮತ್ತು ಪತ್ರಕರ್ತರಾದ ಪನಾಜಿಯೋಟಿಸ್ ಸೌಟ್ಸಾಸ್. ಮುಂದೆ 1896ರಲ್ಲಿ ಗ್ರೀಸ್ ದೇಶದ ಅಥೇನ್ಸ್ ನಲ್ಲಿ ಕ್ರೀಡಾಕೂಟವನ್ನು ಮತ್ತೆ ಆಯೋಜಿಸಲಾಯಿತು. ಫ್ರಾನ್ಸ್ ದೇಶದ ಪಿಯರಿ ಡಿ ಕೊಬರ್ತಿ ಎಂಬ ವ್ಯಕ್ತಿ ಪ್ಯಾರಿಸ್ ನಲ್ಲಿ ನಡೆದ ಒಲಂಪಿಕ್ ವಸ್ತು ಪ್ರದರ್ಶನವನ್ನು ಕಂಡು ಬೆರಗಾಗಿ ಮತ್ತೆ ಒಲಂಪಿಕ್ ಕ್ರೀಡೆಗಳನ್ನು ಆರಂಭಿಸಬೇಕೆಂದು 1892 ರಲ್ಲಿ ಅಂತರರಾಷ್ಟ್ರೀಯ ಕ್ರೀಡಾ ಸಮ್ಮೇಳನದಲ್ಲಿ ಒತ್ತಾಯಿಸಿದನು. ಆದರೆ ಈತನ ಒತ್ತಾಯ ಫಲಪ್ರದವಾಗದೆ ಹೋಯಿತು. ನಿರಾಶನಾಗದ ಪಿಯರಿ ಕ್ರೀಡಾ ಅಧಿವೇಶನವೊಂದನ್ನು ಆಯೋಜಿಸಿ ಅಲ್ಲಿ ಮತ್ತೊಮ್ಮೆ ಈ ವಿಷಯವನ್ನು ಪ್ರಸ್ತಾಪಿಸಿದಾಗ ಎಲ್ಲರೂ ಒಲಂಪಿಕ್ ಕ್ರೀಡಾಕೂಟಗಳನ್ನು ನಡೆಸಲು ಅಂಗೀಕರಿಸಿದರು. ಕೊಬರ್ತಿ ಮೊದಲ ಕ್ರೀಡಾಕೂಟವನ್ನು ಪ್ಯಾರಿಸ್ ನಲ್ಲಿ ನಡೆಸಲು ಇಚ್ಚಿಸಿದ ಆದರೆ ಗ್ರೀಸ್ ನ ಜನರ ಒತ್ತಾಸೆಯ ಮೇರೆಗೆ 1896ರಲ್ಲಿ ಒಲಂಪಿಕ್ ಕ್ರೀಡಾಕೂಟಗಳು ಗ್ರೀಸ್ ದೇಶದ ಅಥೆನ್ಸ್ ನಲ್ಲಿಯೇ ಪುನರಾರಂಭಗೊಂಡವು. ಅಂದು ಕೆಲವೇ ದೇಶಗಳು ಪಾಲ್ಗೊಂಡು ಆರಂಭಿಸಿದ ಈ ಕ್ರೀಡಾಕೂಟ ಇಂದು ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಪಾಲ್ಗೊಂಡು ಸಂಭ್ರಮಿಸುವಂತಹ ಬಹುದೊಡ್ಡ ಕ್ರೀಡಾ ಹಬ್ಬವಾಗಿದೆ.

ಒಲಂಪಿಕ್ ನ ಐದು ವೃತ್ತಗಳು ಪ್ರಪಂಚದ ಐದು ಖಂಡಗಳನ್ನು ಪ್ರತಿನಿಧಿಸುತ್ತಿದ್ದು ಅವುಗಳಲ್ಲಿ ಉತ್ತರ ಮತ್ತು ದಕ್ಷಿಣ ಅಮೆರಿಕವನ್ನು ಒಂದೇಖಂಡವೆಂದು ಗುರುತಿಸಲಾಗುತ್ತದೆ.ವೃತ್ತಗಳು ಹೊಂದಿರುವ ಬಣ್ಣಗಳನ್ನು ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುವ ವಿಶ್ವದ ಎಲ್ಲ ರಾಷ್ಟ್ರಗಳ ಧ್ವಜಗಳಲ್ಲಿ ಒಂದಲ್ಲ ಒಂದು ಬಣ್ಣವು ಇರುವುದು.

ಒಲಂಪಿಕ್ ಕ್ರೀಡಾಕೂಟವನ್ನು ಬೇಸಿಗೆಯ ಮತ್ತು ಚಳಿಗಾಲದ ಕ್ರೀಡಾಕೂಟಗಳೆಂದು ಎರಡು ವಿಭಾಗಗಳಾಗಿ ಆಡಲಾಗುತ್ತದೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವಿಶ್ವದ ವಿವಿಧೆಡೆ ಆಯೋಜಿಸುತ್ತಿದ್ದು ಇದೀಗ ಪ್ಯಾರಿಸ್ ನಲ್ಲಿ ನಾಳೆಯಿಂದ ಈ ಕ್ರೀಡಾಕೂಟಗಳು ನಡೆಯುತ್ತಿವೆ.ಭಾರತದ ಸುಮಾರು 117 ಕ್ಕೂ ಹೆಚ್ಚು ಆಟಗಾರರು ಈ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಮೊದಲು ಕೇವಲ ಒಂದು ದಿನದ ಕ್ರೀಡಾಕೂಟವಾಗಿ ಪ್ರಾರಂಭವಾದ ಒಲಂಪಿಕ್ ಕ್ರೀಡಾಕೂಟದಲ್ಲಿ ಇಂದು ಹಲವಾರು ಕ್ರೀಡೆಗಳನ್ನು ಸೇರಿಸಲಾಗಿದೆ. ಗುಂಪು ಕ್ರೀಡೆಗಳಲ್ಲಿ, ಅಥ್ಲೆಟಿಕ್ಸ್ ಗಳಲ್ಲಿ ಗೆದ್ದ ವ್ಯಕ್ತಿಗಳಿಗೆ ರಾಷ್ಟ್ರ ಮಟ್ಟದ ಗೌರವ ಪ್ರಾಪ್ತವಾಗುತ್ತದೆ. ಅಂತಹ ಕ್ರೀಡಾಪಟುಗಳು ಆ ರಾಷ್ಟ್ರದ ದಂತ ಕಥೆಗಳಾಗಿ ಪರಿಚಿತರಾಗುತ್ತಾರೆ. ಭಾರತವು ಕೂಡ ಕೆಲವೇ ಕೆಲವು ಪದಕಗಳನ್ನು ಈವರೆಗೆ ಪಡೆದುಕೊಂಡಿದ್ದು ಪದಕ ಪಟ್ಟಿಯಲ್ಲಿ ಬಹಳ ಹಿಂದೆ ಉಳಿದುಹೋಗಿದೆ.

ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತ ದೇಶವು ಪದಕ ಪಟ್ಟಿಯಲ್ಲಿ ಹಿಂದುಳಿದಿರಲು ನಮ್ಮ ದೇಶದಲ್ಲಿ ಕ್ರೀಡೆಗೆ ತೋರುತ್ತಿರುವ ಅಸಡ್ಡೆ, ಅನಾದರಗಳೇ ಕಾರಣ. ಕ್ರೀಡೆಗಾಗಿ ತನ್ನ ಬದುಕನ್ನು ಸಮರ್ಪಿಸುವ ಕ್ರೀಡಾಪಟುವಿಗೆ ಆರ್ಥಿಕ ತೊಂದರೆಗಳು ತಪ್ಪುವುದಿಲ್ಲ.

ಇನ್ನು ಕ್ರೀಡೆಗಾಗಿ ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳಲು ಕ್ರೀಡಾಪಟುಗಳಿಗೆ ಒಳ್ಳೆಯ ಆಹಾರ ಗುಣಮಟ್ಟದ ತರಬೇತಿ ಮತ್ತು ತರಬೇತುದಾರರ ಅವಶ್ಯಕತೆ ಇದ್ದು ನಮ್ಮ ಆಡಳಿತ ಶಾಹಿಯ ವಿಫಲತೆಯಿಂದಾಗಿ, ಅಧಿಕಾರಿ ವರ್ಗದ ಬೇಜವಾಬ್ದಾರಿತನದಿಂದ, ಕ್ರೀಡಾ ಪ್ರಾಧಿಕಾರದ ವಿಳಂಬ ನೀತಿಗಳಿಂದ ಭಾರತೀಯ ಕ್ರೀಡಾ ಲೋಕ ಅವ್ಯವಸ್ಥಿತವಾಗಿದ್ದು ಅಂತರಾಷ್ಟ್ರೀಯ ಗುಣಮಟ್ಟವನ್ನು ಸರಿದೂಗಿಸುವ ದೈಹಿಕ ಸದೃಢತೆಯನ್ನು ಉಳಿಸಿಕೊಳ್ಳಲು ಅವಶ್ಯಕವಾದ ಕ್ರೀಡಾ ಚಾಕಚಕ್ಕತೆಯ ತರಬೇತಿಯಾಗಲಿ, ಆಹಾರ ಮತ್ತು ಕೌಶಲವಾಗಲಿ ನಮ್ಮಲ್ಲಿ ಕ್ರೀಡಾಪಟುಗಳಿಗೆ ದೊರೆಯುತ್ತಿಲ್ಲ. ಇದು ಪದಕಗಳ ಗಳಿಕೆಯಲ್ಲಿ ನಮ್ಮನ್ನು ಕೊನೆಯ ಸ್ಥಾನಕ್ಕೆ ದೂಡುತ್ತಿದೆ.

ಕೆಲ ಸಿರಿವಂತ ಕ್ರೀಡಾಪಟುಗಳು ತಮ್ಮ ಸ್ವಂತ ಹಣ ಖರ್ಚು ಮಾಡಿ ತರಬೇತಿ ಪಡೆದು ಪದಕಗಳನ್ನು ಗಳಿಸಿದ್ದಾರೆ ನಿಜ, ಆದರೆ ಇದರಲ್ಲಿ ಸರ್ಕಾರದ ಸಾಧನೆ ಶೂನ್ಯ.

ವಿಜ್ಞಾನ, ತಂತ್ರಜ್ಞಾನ ಉನ್ನತ ವಿದ್ಯಾಭ್ಯಾಸ, ಗಳಿಕೆ, ಆರ್ಥಿಕ ಅಭಿವೃದ್ಧಿ ಮತ್ತು ಆರ್ಥಿಕ ಸ್ಥಿರತೆಗಳಿಗಷ್ಟೇ ಮಹತ್ವ ಕೊಟ್ಟರೆ ಒಂದು ಇಡೀ ಜನಾಂಗ ಕ್ರೀಡೆಯಂತಹ ಮನೋದೈಹಿಕ ಸಾಮರ್ಥ್ಯವನ್ನು ನಿರ್ವಹಿಸುವ, ಪೋಷಿಸುವ ಅಭಿವೃದ್ಧಿಗೊಳಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ.

ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಂಡು ಯಾವುದೇ ರಾಜಕೀಯ ಮಾಡದೆ, ಶ್ರದ್ಧೆಯಿಂದ ಕಾರ್ಯನಿರ್ವಹಿಸಿದರೆ ಮುಂದಿನ ವರ್ಷಗಳಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತ ಪದಕ ಪಟ್ಟಿಯಲ್ಲಿ ಮೊದಲ 30 ರಾಷ್ಟ್ರಗಳಲ್ಲಾದರೂ ಬರುತ್ತದೆ ಎಂಬ ಭರವಸೆ ಮೂಡುತ್ತದೆ.

ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬ ಮಾತನ್ನು ನೀವು ಕೇಳಿರಬಹುದು….. ಹಾಗೆ ಪ್ರತಿ ಬಾರಿ ಒಲಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಲು ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ವಿಳಂಬಗೊಂಡು, ಅವರ ತರಬೇತಿಯಲ್ಲಿ ವ್ಯತ್ಯಯವಾಗುವುದು ನಂತರ ಕ್ರೀಡಾಕೂಟಗಳು ನಡೆಯುವ ಸ್ಥಳಕ್ಕೆ ಹೋಗಲು ಬೇಕಾಗುವ ಅವಶ್ಯಕ ದಾಖಲಾತಿಗಳು, ವಿಮಾನ ಪ್ರಯಾಣದ ಟಿಕೆಟ್ ಮುಂತಾದ ವಿಷಯಗಳಲ್ಲಿ ಸಮಯ ಕಳೆದು ಹೋಗಿರುವ ಘಟನೆಗಳು ಕೂಡ ಸಾಕಷ್ಟಿವೆ.

2024ರ ಒಲಂಪಿಕ್ ಕ್ರೀಡೆಗಳು ಈ ಬಾರಿ ಪ್ಯಾರಿಸ್ ನಲ್ಲಿ ನಡೆಯುತ್ತಿದ್ದು ನಾಳೆಯಿಂದ ಆರಂಭಗೊಳ್ಳುವ ಈ ಕ್ರೀಡೆಗಳಲ್ಲಿ ನಮ್ಮ ಭಾರತೀಯ ಕ್ರೀಡಾಪಟುಗಳು ಉತ್ತಮ ಸಾಧನೆ, ತೋರಲಿ, ಭಾರತ ದೇಶದ ಹೆಮ್ಮೆಯ ಧ್ವಜವನ್ನು ಬಾನೆತ್ತರದಲ್ಲಿ ಹಾರಿಸಲಿ ಎಂದು 140 ಕೋಟಿ ಭಾರತೀಯರ ಹಾರೈಕೆ ಫಲಪ್ರದವಾಗಲಿ.

ವೀಣಾ ಹೇಮಂತ್ ಗೌಡ ಪಾಟೀಲ್

ಮುಂಡರಗಿ ಗದಗ್

Leave a Reply

Your email address will not be published. Required fields are marked *

error: Content is protected !!