ಅ. 2 ರಂದು ಆನೆಗೋಂದಿ ದತ್ತು ಗ್ರಾಮ ಸ್ವಿಕಾರ : ನ್ಯಾ ಸದಾನಂದ ನಾಯ್ಕ್
ಕರುನಾಡ ಬೆಳಗು ಸುದ್ದಿ
ಗಂಗಾವತಿ, 30- ತಾಲೂಕು ಕಾನೂನು ಸೇವೆಗಳ ಸಮಿತಿ ಸಹಯೋಗದಲ್ಲಿ ತಾಲೂಕು ಆಡಳಿತ ಮತ್ತಿತರ ಇಲಾಖೆವತಿಯಿಂದ ತಾಲೂಕಿನ ಐತಿಹಾಸಿಕ ಮತ್ತು ಕಿಷ್ಕಿಂದಾ ಪ್ರದೇಶವೆಂದು ಗುರುತಿಸಿಕೊಂಡಿರುವ ಆನೆಗೊಂದಿ ಗ್ರಾಮದ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಸ್ವಚ್ಚ, ಸುಂದರ ಪರಿಸರ ನಿರ್ಮಾಣಕ್ಕೆ ಗ್ರಾಮವನ್ನು ದತ್ತು ಸ್ವೀಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅ.೨ ರಂದು ಗಾಂಧಿ ಜಯಂತಿ ಪ್ರಯುಕ್ತ ಗ್ರಾಮದಲ್ಲಿ ದತ್ತು ಸ್ವೀಕಾರ ಮತ್ತು ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಸದಾನಂದ ನಾಯ್ಕ್ ತಿಳಿಸಿದರು.
ನಗರದ ನ್ಯಾಯಾಲಯದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು. ಅ.೨ ರಂದು ಗಾಂಧಿ ಜಯಂತಿ ಪ್ರಯುಕ್ತ ಜಿಲ್ಲೆಯ ಪ್ರತಿಯೊಂದು ತಾಲೂಕುನ್ನು ಕಾನೂನು ಸೇವೆಗಳ ಸಮಿತಿ ಮೂಲಕ ದತ್ತು ಸ್ವೀಕಾರ ಮಾಡಿ ಒಂದು ವರ್ಷದಲ್ಲಿ ಆ ಗ್ರಾಮದಲ್ಲಿರುವ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಜಿಲ್ಲಾ ಕಾನೂನು ಸೇವೆಗಳ ಸಮಿತಿ ಸೂಚನೆಯಂತೆ ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಮೂಲಕ ವಕೀಲರ ಸಂಘ, ಕಂದಾಯ, ತಾಲೂಕ ಪಂಚಾಯತ್, ಶಿಕ್ಷಣ, ಪೊಲೀಸ್, ಕಾರ್ಮಿಕ, ಆರೋಗ್ಯ, ಶಿಶು ಅಭಿವೃದ್ಧಿ ಇಲಾಖೆ, ನಗರಸಭೆ, ಅಪ್ಸಾನಿ ಎನ್.ಆರ್.ಕಾನೂನು ಮಹಾವಿದ್ಯಾಲಯ ಹಾಗೂ ಆನೆಗೊಂದಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಆನೆಗೊಂದಿ ಗ್ರಾಮದಲ್ಲಿ ಸ್ವಚ್ಚತಾ ಆಂದೋಲನ ಹಮ್ಮಿಕೊಳ್ಳಲಾಗಿದೆ.
ಗ್ರಾಮವನ್ನು ಒಂದು ವರ್ಷದ ಅವಧಿಯಲ್ಲಿ ದತ್ತು ಸ್ವೀಕರಿಸಲಾಗುತ್ತಿದೆ. ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಳೆದ ತಿಂಗಳು ಆನೆಗೊಂದಿ ಗ್ರಾಮದ ಮನೆ ಮನೆ ಮನೆ ಸಮೀಕ್ಷೆ ಮಾಡಿದ್ದು, ಮೂಲಭೂತ ಸಮಸ್ಯೆಗಳಾ ಕುಡಿಯುವ ನೀರು, ಶೌಚಾಲಯ, ವಿದ್ಯುತ್, ವಸತಿ ಸೇರಿದಂತೆ ಸುಮಾರು ೫೭೦ಕ್ಕೂ ಹೆಚ್ಚು ಸಮಸ್ಯೆಗಳಿವೆ ಎಂಬ ವರದಿ ನೀಡಿದ್ದಾರೆ.
ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ನಾವು ಆನೆಗೊಂದಿ ಗ್ರಾಮದ ಮೂಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಮುಂದಾಗಿದ್ದೇವೆ.
ತುಂಗಭದ್ರಾ ನದಿ ತಟದಲ್ಲಿರುವ ಗ್ರಾಮದಲ್ಲಿ ಕುಡಿಯುವ ನೀರು ಸಮಸ್ಯೆ ಇದೆ ಎಂದರೆ ಆಶ್ಚರ್ಯವಾಗುತ್ತದೆ.
ಐತಿಹಾಸಿಕ ಮತ್ತು ಧಾರ್ಮಿಕ ಪುಣ್ಯಕ್ಷೇತ್ರಗಳನ್ನು ಹೊಂದಿರುವ ಆನೆಗೊಂದಿ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದಿರುವುದು ಅತ್ಯಂತ ಖೇದವಾಗುತ್ತಿದೆ.
ನಾವು ಗಂಭೀರವಾಗಿ ಪರಿಗಣಿಸಿದ್ದು, ಈ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಅಹ್ವಾನಿಸಿದ್ದೇವೆ.
ಅ.೨ರಂದು ನಡೆಯುವ ಸ್ವಚ್ಚತಾ ಅಭಿಯಾನದ ನಂತರ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸೂಚನೆ ನೀಡಲಾಗುತ್ತದೆ ಎಂದರು.
ಅ.೨ ರಂದು ಬ್ರಹ್ಮಾನಂದಸ್ವಾಮಿಗಳ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆನೆಗೊಂದಿ ರಾಜಮನೆತನದ ಪ್ರಮುಖರಾದ ಲಲಿತಾರಾಣಿ ಶ್ರೀರಂಗದೇವರಾಯಲು, ರಾಜಾ ಹರಿಹರ ದೇವರಾಯಲು, ಶ್ರೀಕೃಷ್ಣದೇವರಾಯಲು, ಗ್ರಾಪಂ ಅಧ್ಯಕ್ಷೆ ಮಹಾದೇವಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗಣ್ಯರು ಉಪಸ್ಥಿತರರಲಿದ್ದಾರೆ.
ಆನೆಗೊಂದಿ ಗ್ರಾಮಸ್ಥರು ಸೇರಿದಂತೆ ಸುತ್ತಲಿನ ಗ್ರಾಮದ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.
ವಕೀಲರ ಸಂಘದ ಕಾರ್ಯದರ್ಶಿ ಹೆಚ್.ಎಂ.ಮAಜುನಾಥ ಮಾತನಾಡಿ, ಐತಿಹಾಸಿಕ ಆನೆಗೊಂದಿ ಗ್ರಾಮದಲ್ಲಿ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ನ್ಯಾಯಾಧೀಶರು ವಿಶೇಷ ಮುತುವರ್ಜಿವಹಿಸಿದ್ದಾರೆ ಐತಿಹಾಸಕ ಮತ್ತು ಪುಣ್ಯ ಕ್ಷೇತ್ರವಾಗಿರುವ ಆನೆಗೊಂದಿ ಕೇವಲ ಪ್ರವಾಸಿ ಕೇಂದ್ರವಾಗಿಲ್ಲ. ಇದೊಂದು ಪುಣ್ಯ ಕ್ಷೇತ್ರವಾಗಿದೆ ಧಾರ್ಮಿಕ ಕ್ಷೇತ್ರವೆಂದು ಪರಿಗಣಿಸಿ ಇಲ್ಲಿಗೆ ಬರುವ ಭಕ್ತರಿಗೆ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಎಲ್ಲರು ಸೇರಿ ಕೆಲಸ ಮಾಡಬೇಕಾಗಿದೆ ಎಂದರು.
ಗೋಷ್ಟಿಯಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ ಉಪಸ್ಥಿತರಿದ್ದರು.