
ಪಾದಯಾತ್ರೆ ಬಿಜೆಪಿ ಪಕ್ಷದ ಎಡೆಬಿಡಂಗಿತನ : ಎನ್.ಗಂಗಿರೆಡ್ಡಿ ವ್ಯಂಗ್ಯ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 7- ಮೂಡ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಭಾರತೀಯ ಜನತಾ ಪಕ್ಷ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಕೈಗೊಂಡಿದೆ ಇದು ಕೇವಲ ಬಿಜೆಪಿ ಪಕ್ಷದ ನಾಯಕರುಗಳ ಎಡೆಬಿಡಂಗಿತನವೆ ಹೊರತು ಬೇರೇನು ಅಲ್ಲ ಎಂದು ಜನಗಣ ಒಕ್ಕೂಟದ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮಾಜಿನಗರ ಸಭೆ ಸದಸ್ಯರಾದ ಎನ್ ಗಂಗಿರೆಡ್ಡಿ ವ್ಯಂಗ್ಯವಾಡಿದ್ದಾರೆ.
ಅವರು ಇಂದು ತಮ್ಮ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ರಾಜ್ಯದಲ್ಲಿ ಅತಿಯಾದ ಮಳೆಯಾಗಿ ಅತಿವೃಷ್ಟಿ ಉಂಟಾಗಿದೆ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗದೆ ಅನಾವೃಷ್ಟಿ ಉಂಟಾಗಿದೆ, ಈ ತರವಾಗಿ ರಾಜ್ಯದ ರೈತರು ಸಂಕಷ್ಟ ಪರಿಸ್ಥಿತಿಯಲ್ಲಿ ಇರುವಾಗ ಅವರ ಕಷ್ಟಕ್ಕೆ ದನಿಯಾಗಬೇಕೆ ಹೊರತು ಈ ರೀತಿಯಾಗಿ ಪಾದಯಾತ್ರೆ ಮೂಡಯಾತ್ರೆ ಎಂದು ಬಿಜೆಪಿ ಪಕ್ಷದ ನಾಯಕರುಗಳು ವೃಥಾ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಆ ಪಕ್ಷದ ನಾಯಕರುಗಳ ಮನಸ್ಥಿತಿ ಏನೆಂಬುದು ತಿಳಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಒಂದು ವೇಳೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆಯ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು ನಿಜವಾದಲ್ಲಿ ಅದನ್ನು ವಿಧಾನಸಭೆ ಅಧಿವೇಶನದಲ್ಲಿ ವಿರೋಧಿಸಿ ಚರ್ಚೆಗಳು ನಡೆಯಬೇಕೆ ಹೊರತು ಈ ರೀತಿಯಾಗಿ ಪಾದಯಾತ್ರೆಯಿಂದ ಸಾರ್ವಜನಿಕರಿಗೆ ತೊಂದರೆ ಕೊಡಬಾರದು ಎಂದು ಗಂಗಿ ರೆಡ್ಡಿಯವರು ಬಿಜೆಪಿ ಪಕ್ಷದ ನಾಯಕರುಗಳ ಮೇಲೆ ಹರಿಹಾಯ್ದರು.
ಇದೇ ಸಂದರ್ಭದಲ್ಲಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೋಟಿಸ್ ನೀಡಿದ ಕುರಿತು ಸುದ್ದಿಗಾರರ ಪ್ರಶ್ನೆ ಒಂದಕ್ಕೆ ಉತ್ತರ ನೀಡಿ, ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡಿರುವುದು ಮೇಲ್ನೋಟಕ್ಕೆ ಅವರು ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಎನಿಸುತ್ತದೆ.
ಏಕೆಂದರೆ ನಾನು ಸಹ ಈ ಹಿಂದೆ ಬಳ್ಳಾರಿ ಜಿಲ್ಲೆಯ ಮಾಜಿ ಸಚಿವರೊಬ್ಬರ ಮೇಲೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ವಿಷಯವಾಗಿ ರಾಜ್ಯಪಾಲರಿಗೆ ರಾಷ್ಟ್ರಪತಿಗಳಿಗೆ ಮುಖ್ಯಮಂತ್ರಿಗೆ ಸೇರಿದಂತೆ ಹಲವರಿಗೆ ಲಿಕಿತವಾಗಿ ದಾಖಲೆ ಮತ್ತು ಭಾವಚಿತ್ರದ ಸಮೇತ ದೂರನ್ನು ಸಲ್ಲಿಸಿದ್ದನು.
ನಾನು ದೂರು ಸಲ್ಲಿಸಿ ಸುಮಾರು ಎರಡು ವರ್ಷಗಳು ಕಳೆದರೂ ರಾಜ್ಯಪಾಲರಾಗಲಿ ರಾಷ್ಟ್ರಪತಿಗಳೇ ಆಗಲಿ ಪ್ರಧಾನಮಂತ್ರಿಗಳಾಗಲಿ ಯಾರು ಸಹ ಈ ಘಟನೆ ಕುರಿತು ಕ್ರಮ ಕೈಗೊಂಡಿರುವುದಿಲ್ಲ. ಆದರೆ ಅಬ್ರಹಾಂ ಎಂಬುವರು ರಾಜ್ಯಪಾಲರಿಗೆ ಮುಖ್ಯಮಂತ್ರಿಗಳಿಗೆ ವಿರುದ್ಧ ದೂರು ನೀಡಿದ ಕೇವಲ ಒಂದೇ ದಿನದಲ್ಲಿ ತರಾತುರಿಯಲ್ಲಿ ನೋಟಿಸ್ ನೀಡಿರುವುದು ಗಮನಿಸಿದರೆ ಇದೊಂದು ಕೇಂದ್ರ ಸರ್ಕಾರದ ಷಡ್ಯಂತ್ರ ಇರಬಹುದು ಎಂದು ಅನಿಸುತ್ತದೆ ಇದು ರಾಜ್ಯಪಾಲರ ಸರಿಯಾದ ನಡೆಯಲ್ಲ ರಾಜ್ಯಪಾಲರ ಈ ನಡೆ ಖಂಡನೀಯ ಎಂದರು.