
ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನಕ್ಕೆ ಪಿಡಿಓ ವೀರನಗೌಡ ಚಾಲನೆ
ಕರುನಾಡ ಬೆಳಗು ಸುದ್ದಿ
ಕುಕನೂರು, 24- ತಾಲೂಕಿನ ತಳಕಲ್ ಗ್ರಾ.ಪಂ ವ್ಯಾಪ್ತಿಯ ತಳಕಲ್ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 2025-26 ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನದಡಿ ಐಇಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ವೇಳೆ ಗ್ರಾಮದ ಮನೆ-ಮನೆಗೆ ಭೇಟಿ ನೀಡಿ ಸಾರ್ವಜನಿಕರು ತಮ್ಮ ಫೋನಿನ ಮೂಲಕ ಸ್ಕ್ಯಾನ್ ಮಾಡಿ ಬೇಡಿಕೆ ಸಲ್ಲಿಸುವ ಬಗ್ಗೆ, ಪ್ರತಿ ದಿನಕ್ಕೆ 349 ರೂಪಾಯಿ ಕೂಲಿ, ಯೋಜನೆಯಡಿ ದೊರಕುವ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಬಗ್ಗೆ ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ತಿಳಿಸಲಾಯಿತು.
ನಂತರ ವಾರ್ಡ್ ಸಭೆ ಮತ್ತು ಗ್ರಾಮ ಸಭೆಯಲ್ಲಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಸಲ್ಲಿಸಿದ ಬೇಡಿಕೆಗಳನ್ನು ಪರಿಶೀಲನೆ ಮಾಡಿ ಪಟ್ಟಿ ತಯಾರಿಸಲಿದ್ದು, ಎಲ್ಲರೂ ಭಾಗವಹಿಸುವಂತೆ ತಿಳಿಸಲಾಯಿತು.
ಗ್ರಾಮದ ಕಿರಾಣಿ ಅಂಗಡಿ, ಹಾಲಿನ ಕೇಂದ್ರ ಸೇರಿ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಬೇಡಿಕೆ ಸಲ್ಲಿಸಲು ಕ್ಯೂ ಆರ್ ಕೋಡ್ ಪ್ರತಿ ಅಂಟಿಸಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜಹಿರಾ ಬೇಗಂ, ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಾದ ಆದಿಬಸಯ್ಯ ಹಿರೇಮಠ, ತಾ.ಪಂ ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ , ಗ್ರಾ.ಪಂ ಗಣಕಯಂತ್ರ ನಿರ್ವಾಹಕರು, ಗ್ರಾ.ಪಂ ಇನ್ನಿತರ ಸಿಬ್ಬಂದಿಗಳು, ಸಾರ್ವಜನಿಕರು ಇದ್ದರು.