5

ನವೋದಯದ ಹಿರಿಯ ವಿದ್ಯಾರ್ಥಿಗಳಿಂದ ಕಿರಿಯರ ಹಲ್ಲೆ ಪಾಲಕರಿಂದ ಸಂಸದರಿಗೆ ಮನವಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 26- ಕುಕನೂರಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳ ಮೇಲೆ ಸಾಮೂಹಿಕ ಹಲ್ಲೆ ಮಾಡಿದ ಘಟನೆ ನಡೆದಿದೆ.

ಕಳೆದ ಆ. 20, 2024ರಂದು ವಿದ್ಯಾಲಯದ ಆವರಣದಲ್ಲಿ ಹಾಡುಹಗಲೇ ಹಿರಿಯ ವಿದ್ಯಾರ್ಥಿಗಳು ಅಂದರೆ ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳ ಮೇಲೆ ಅತ್ಯಂತ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ.

ಕಟ್ಟಿಗೆ, ಬೆಲ್ಟ್ ಹಾಗೂ ಪೈಪ್ ಗಳ ಮೂಲಕ ಹೊಡೆದಿದ್ದಾರೆ ಕೆಲ ವಿದ್ಯಾರ್ಥಿಗಳಿಗೆ ಗುಪ್ತಾಂಗಗಳಿಗೆ ಹೊಡೆದು ಅಮಾನುಷವಾಗಿ ನಡೆದುಕೊಂಡಿದ್ದಾರೆ. ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಹಲ್ಲೆ ಆಗಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿದ್ದಾರೆ. ಇಷ್ಟೆಲ್ಲಾ ನಡೆದರೂ ಅಲ್ಲಿಯ ಪ್ರಾಚಾರ್ಯರಾಗಲಿ, ಶಿಕ್ಷಕರಾಗಲಿ, ಸಿಬ್ಬಂದಿಯಾಗಲಿ ಯಾವುದೇ ಪಾಲಕರ ಗಮನಕ್ಕೆ ತಂದಿಲ್ಲ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣ ಹೊಸದೇನು ಅಲ್ಲ. ಇಂಥ ಪ್ರಕರಣಗಳು ಈ ಹಿಂದೆ ಕೂಡ ಸಾಕಷ್ಟು ಬಾರಿ ಜರುಗಿದ್ದರೂ ಸೂಕ್ತ ಕ್ರಮ ಜರುಗಿಸಿಲ್ಲ. ಪ್ರತಿ ಸಲ ಅಲ್ಲಿಯ ಸಿಬ್ಬಂದಿ ಹಾಗೂ ಪ್ರಾಚಾರ್ಯರು ಮುಚ್ಚಿ ಹಾಕಿದ್ದಾರೆ. ಇದಕ್ಕೆಲ್ಲ ಅಲ್ಲಿಯ ಆಡಳಿತ ವೈಫಲ್ಯವೇ ಕಾರಣವಾಗಿದೆ.
ಮುಖ್ಯವಾಗಿ ವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಿದ್ದು ಕಂಡು ಬಂದಿದೆ. ಬೀಡಿ, ಸಿಗರೇಟ್, ಗುಟ್ಕಾ ಹಾಗೂ ಮದ್ಯ ಸೇವನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ‌.

ಹೀಗಾಗಿ ಆಡಳಿತ ವೈಫಲ್ಯಕ್ಕೆ ಕಾರಣರಾದ ವಿದ್ಯಾಲಯದ ಪ್ರಾಚಾರ್ಯರನ್ನು ಅಮಾನತು ಮಾಡಬೇಕು.
ಹಲ್ಲೆ ಮಾಡಿದ ವಿದ್ಯಾರ್ಥಿಗಳನ್ನು ವಿದ್ಯಾಲಯದಿಂದ ಶಾಶ್ವತವಾಗಿ ಹೊರಹಾಕಬೇಕು. ಅಲ್ಲಿಯ ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು. ಎಲ್ಲಾ ವಸತಿಗೃಹಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ಪೊಲೀಸ್ ಸಿಬ್ಬಂದಿ ಗಸ್ತು ಹಾಕಬೇಕು.
ಈ ಎಲ್ಲಾ ಬೇಡಿಕೆಗಳನ್ನು ಒಂದು ವಾರದೊಳಗೆ ಈಡೇರಿಸಬೇಕು. ಇಲ್ಲವಾದಲ್ಲಿ ನವೋದಯ ವಿದ್ಯಾಲಯದ ಮುಂದೆ ಎಲ್ಲಾ ಪಾಲಕರು ಸೇರಿ ಪ್ರತಿಭಟನೆ ಮಾಡಲಾಗುವುದು ಎಂದು ಪಾಲಕರು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕುಬೇರ ಮಜ್ಜಿಗಿ, ಶಿವಾನಂದ ಪ್ಯಾಟಿ, ಬಸವರಾಜ ಹುಬ್ಬಳ್ಳಿ, ಜಗನ್ನಾಥ ಬಿಸರಳ್ಳಿ, ಹನುಮಂತಪ್ಪ ಹಳ್ಳಿ, ಯಲ್ಲಪ್ಪ ರಕ್ಕಸಗಿ, ಟಿ.ಎನ್.ಚವ್ಹಾಣ್. ಗಂಗಾಧರ ಡೊಳ್ಳಿನ, ರಂಗನಾಥ ಮೇಟಿ, ನಾಗರಾಜ ಹೊನಗಡ್ಡ, ದ್ಯಾಮಣ್ಣ ವಡ್ರಕಲ್, ಮಲ್ಲಪ್ಪ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!