
ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಿಎಲ್ ಡಿ ಬ್ಯಾಂಕ್ ರಾಜ್ಯಕ್ಕೆ ಪ್ರಥಮ ಸ್ಥಾನ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 27- ಸಹಕಾರಿ ತತ್ವದಿಂದ ರೈತರ ಮತ್ತು ಸಾಲಗಾರರ ಸಮರ್ಪಕ ಮರುಪಾವತಿಯೊಂದಿಗೆ ರಾಜ್ಯದ 183 ಬ್ಯಾಂಕುಗಳಲ್ಲಿ ಸಿರುಗುಪ್ಪ ಪಿ ಎಲ್ ಡಿ ಬ್ಯಾಂಕ್ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಸಂತಸ ತಂದಿದೆ ಎಂದು ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ ತಿಳಿಸಿದರು.
ನಗರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಲ್ಲಿ ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಹಲವು ದಶಕಗಳಿಂದ ಈ ಭಾಗದ ರೈತರ ಅಭಿವೃದ್ಧಿಗೆ ಶ್ರಮಿಸುತ್ತ ರಾಜ್ಯದ ಎಲ್ಲಾ ಬ್ಯಾಂಕುಗಳಿಗಿಂತ ನಮ್ಮ ಬ್ಯಾಂಕ್ ಶೇ.96.51 ವಸೂಲಾತಿ ಯೊಂದಿಗೆ ಬ್ಯಾಂಕ್ ಪ್ರಸಕ್ತ ವರ್ಷ 1 ಕೋಟಿ67 ಲಕ್ಷ ರೂ. ಗಳ ಲಾಭಗಳಿಕೆಯೊಂದಿಗೆ ಎಲ್ಲಾ ವಿಭಾಗದಲ್ಲಿಯೂ ಉತ್ತಮ ಕಾರ್ಯ ನಿರ್ವಹಣೆಯಿಂದ ರಾಜ್ಯದಲ್ಲಿ ಪ್ರಥಮ ಸ್ಥಾನ ಹಾಗೂ ಜಿಲ್ಲೆಯಲ್ಲಿಯೂ ಉತ್ತಮ ಅಭಿವೃದ್ಧಿ ಬ್ಯಾಂಕುಗಳಲ್ಲಿ ಮೊದಲ ಸ್ಥಾನವನ್ನು ಅನೇಕ ವರ್ಷಗಳಿಂದ ಕಾಯ್ದುಗೊಂಡಿದೆ ಈ ಬಾರಿ ಸಾಲ ವಸೂಲಾತಿ ಪ್ರಮಾಣವನ್ನು ಎಲ್ಲಾ ಸದಸ್ಯರ ಸಹಕಾರೊಂದಿಗೆ ಶೇ. 100 ರಷ್ಟು ಸಾಧಿಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿಯೇ ಇತಿಹಾಸ ನಿರ್ಮಾಣ ಮಾಡುವ ಸಂಕಲ್ಪಕ್ಕೆ ಪ್ರತಿಯೊಬ್ಬರು ಕೈಜೋಡಿಸುವಂತೆ ಕರೆ ನೀಡಿದರು.
ಉಪಾಧ್ಯಕ್ಷ ನಾಡಂಗ ಮಲ್ಲಯ್ಯ, ನಿರ್ದೇಶಕರಾದ ಜಡೇಸ್ವಾಮಿ, ಬಿ.ಎಂ.ತಿಮ್ಮಪ್ಪ, ಎ.ಶಿವರುದ್ರಗೌಡ, ಮಲ್ಲಿಕಾರ್ಜುನಗೌಡ, ಬ್ಯಾಂಕ್ ವ್ಯವಸ್ಥಾಪಕ ತಿಪ್ಪಣ್ಣ ಮಾ. ಬನಸೋಡೆ ಸೇರಿದಂತೆ ಸಿಬ್ಬಂದಿಗಳು ಹಾಗೂ ಬ್ಯಾಂಕ್ ಸದಸ್ಯರು ಇದ್ದರು.