
ಕವಿ ಋಷಿ ಆದಿಕವಿ ಮಹರ್ಷಿ ವಾಲ್ಮೀಕಿ : ಉಮಾ ಕಲ್ಮಠ
ಕರುನಾಡ ಬೆಳಗು ಸುದ್ದಿ
“ಕುಜಂತಮ್ ರಾಮರಾಮೇತಿ
ಮಧುರಾಂ ಮಧುರಾಕ್ಷರಂ
ಆರೂಹ್ಯ ಕವಿತಾ ಶಾಖಂ
ವಂದೇ ವಾಲ್ಮೀಕಿ ಕೋಕಿಲಂ ”
ಬುದ್ಧ ಕೌಶಿಕ ಮುನಿ ಎಂಬುವರು ಶ್ರೀರಾಮರಕ್ಷಾಸ್ತೋತ್ರದಲ್ಲಿ ವಾಲ್ಮೀಕಿ ಮಹರ್ಷಿಗಳ ಬಗ್ಗೆ ಬರೆದ ಸುಂದರ ಶ್ಲೋಕವಿದು. ವಾಲ್ಮೀಕಿಯನ್ನು ಕೋಗಿಲೆಗೆ ಹೋಲಿಸಿ ಬರೆಯಲಾಗಿದೆ. ಅದೇ ರೀತಿ ಸಂಸ್ಕೃತ ಶ್ಲೋಕ ಒಂದು ಮಹರ್ಷಿ ವಾಲ್ಮೀಕಿ ಅವರ ಬಗ್ಗೆ ಹೀಗೆ ಹೇಳುತ್ತದೆ.
” ವಾಲ್ಮೀಕಿ ಗಿರಿ ಸಂಭೂತ
ರಾಮಸಾಗರ ಗಾಮಿನಿ
ಪುನಾತಿ ಭುವನಾಮ್ ಪುಣ್ಯ
ರಾಮಾಯಣ ಮಹಾನದಿ ”
ಅಂದರೆ ವಾಲ್ಮೀಕಿ ಎನ್ನುವ ಬೆಟ್ಟದಿಂದ ರಾಮಾಯಣ ಎನ್ನುವ ನದಿ ಉಗಮವಾಯಿತಂತೆ ಹಾಗೆ ಉಗಮವಾದ ನದಿ ಇಡೀ ಭೂಮಂಡಲಕ್ಕೆ ಪುಣ್ಯವನ್ನು ಹರಡುತ್ತಾ ಹರಡುತ್ತಾ ರಾಮ ಎನ್ನುವ ಗುಣಸಾಗರಕ್ಕೆ ಸೇರುತ್ತದೆ ಎಂದು ವರ್ಣಿಸಲಾಗಿದೆ. ರಾಮಾಯಣವೆಂಬ ಮಹಾಕಾವ್ಯವನ್ನು ಜಗತ್ತಿಗೆ ಕೊಟ್ಟವರೇ ಕವಿ ಋಷಿ ಆದಿಕವಿ ಮಹರ್ಷಿ ವಾಲ್ಮೀಕಿಯವರು. ಪ್ರತಿ ವರ್ಷ ಅಶ್ವ ಯುಜ ಮಾಸ ಹುಣ್ಣಿಮೆಯ ದಿನ ವಾಲ್ಮೀಕಿ ಮಹರ್ಷಿಯವರ ಜಯಂತಿಯನ್ನು ಆಚರಿಸಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಯಾರು? ರಾಮಾಯಣದಂತಹ ಮಹಾಕಾವ್ಯವನ್ನು ಬರೆಯಲು ಕಾರಣವೇನು? ಅದಕ್ಕೆ ಪ್ರೋತ್ಸಾಹಿಸಿದವರಾರು?ಎಂಬ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನ ಈ ಲೇಖನದ್ದಾಗಿದೆ.
ನಮ್ಮ ಭಾರತ ದೇಶದಲ್ಲಿ ಅನೇಕ ಋಷಿಗಳು, ಕವಿಗಳು, ಪಂಡಿತರು,ವಿದ್ವಾಂಸರು ಬದುಕಿ, ಬಾಳಿ ಹೋಗಿದ್ದಾರೆ.ಆದರೆ ಒಬ್ಬ ಕವಿಯಾದವರು ಋಷಿ ಆಗಿರುವುದು ಅದು ಕೇವಲ ವಾಲ್ಮೀಕಿ ಮಹರ್ಷಿಗಳು ಮಾತ್ರ.ಇವರನ್ನು ಮಹಾಕವಿ ಎಂಬುದಾಗಿ ಕರೆಯಲಾಗುತ್ತದೆ.
ವಾಲ್ಮೀಕಿ ಮಹರ್ಷಿಗಳ ಪೂರ್ವಾಶ್ರಮ : ಇವರು ಪ್ರಚೇತಸ ಎಂಬ ಮುನಿಯ ಹತ್ತನೇ ಮಗ. ಹಾಗಾಗಿ ಇವರಿಗೆ ಪ್ರಾಚೇತಸಾ ಎಂಬುದಾಗಿ ಕರೆಯುತ್ತಿದ್ದರು.
ಮುಂದೆ ಇವರು ಒಂದು ಉಲ್ಲೇಖದ ಪ್ರಕಾರ ಇವರು ದಾರಿತಪ್ಪಿ ಕಾಡಿನಲ್ಲಿ ಬದುಕಬೇಕಾಯಿತು ಎಂಬುದು ಒಂದು ಉಲ್ಲೇಖವಾದರೆ, ಇನ್ನೊಂದು ಉಲ್ಲೇಖದ ಪ್ರಕಾರ ಅವರ ತಾಯಿ ನದಿ ಸ್ನಾನಕ್ಕೆಂದು ಬಂದಾಗ ನದಿಯ ದಂಡೆಯ ಮೇಲೆ ಕೂಸನ್ನ ಮಲಗಿಸಿ ಸ್ನಾನಕ್ಕೆ ಹೋದಾಗ ಗರುಡ ಒಂದು ಬಂದು ಮಗುವನ್ನು ಎತ್ತಿಕೊಂಡು ಹೋಗಿ ಕಾಡಿನ ಮಧ್ಯೆ ಭಾಗದಲ್ಲಿ ಬಿಟ್ಟಿತೆಂದು ಹೇಳಲಾಗುತ್ತದೆ. ಅಲ್ಲಿಂದ ಅವರ ಬದುಕಿನ ಚಿತ್ರಣವೇ ಬದಲಾಗುತ್ತದೆ. ಕಾಡಿನಲ್ಲಿ ವಾಸಿಸುತ್ತಿದ್ದ ಇವರು ರತ್ನಾಕರ ಎಂಬ ಹೆಸರಿನಿಂದ ಜೀವನವನ್ನು ನಡೆಸುತ್ತಾರೆ. ಕೆಲವರ ಸಹವಾಸದಿಂದ ರತ್ನಾಕರ ಒಬ್ಬ ದರೋಡೆಕೋರನಾಗಿ ಕಾಡಿನಲ್ಲಿ ಹಾದು ಹೋಗುವವರನ್ನು ನಿಲ್ಲಿಸಿ, ಅವರ ಬಳಿ ಇರುವ ವಸ್ತುಗಳನ್ನೆಲ್ಲ ದೋಚಿ ಜೀವನ ಸಾಗಿಸುತ್ತಿರುತ್ತಾನೆ.
ಹೀಗೆ ಒಂದು ದಿನ ಆ ಮಾರ್ಗದಲ್ಲಿ ನಾರದ ಮುನಿಗಳು ಹಾದು ಹೋಗುತ್ತಿರುವಾಗ ಎಂದಿನಂತೆ ರತ್ನಾಕರ ಅವರನ್ನು ನಿಲ್ಲಿಸಿ, ಅವರಲ್ಲಿದ್ದ ವಸ್ತುಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಾನೆ ಆಗ ನಾರದ ಮುನಿಗಳು ನೀನು ಕಿತ್ತುಕೊಳ್ಳಲು ನನ್ನಲ್ಲಿ ಏನು ಬೆಲೆ ಬಾಳುವ ವಸ್ತುಗಳಿಲ್ಲ ಆದರೂ ನಿನ್ನನ್ನು ಕೇಳುತ್ತೇನೆ ನೀನೇಕೆ ಇಂತಹ ಜೀವನ ನಡೆಸುತ್ತಿದ್ದೀಯಾ ಎಂಬ ಪ್ರಶ್ನೆಗೆ ರತ್ನಾಕರ ಇದು ನನ್ನ ಉದ್ಯೋಗ ನನ್ನ ಹೆಂಡತಿ ಮಕ್ಕಳನ್ನು ಸಾಕಲು ನನ್ನ ಜೀವನ ನಡೆಸಲು ಎಂದು ಉತ್ತರಿಸುತ್ತಾನೆ.
ಅದಕ್ಕೆ ನಾರದ ಮಹರ್ಷಿಗಳು ಹಾಗಾದ್ರೆ ನಿನ್ನ ಪಾಪದ ಫಲದಲ್ಲಿ ನಿನ್ನ ಹೆಂಡತಿ ಮಕ್ಕಳು ಪಾಲುದಾರರಾಗುತ್ತಾರ ಅದನ್ನು ನನಗೆ ತಿಳಿಸು ಎಂದಾಗ ರತ್ನಾಕರ ನಾರದರನ್ನು ಒಂದು ಮರಕ್ಕೆ ಕಟ್ಟಿಹಾಕಿ ಕೂಡಲೇ ಮನೆಗೆ ಬಂದು ಹೆಂಡತಿ ಮಕ್ಕಳನ್ನು ನಾರದರು ಕೇಳಿದ ಪ್ರಶ್ನೆಯನ್ನು ಕೇಳುತ್ತಾನೆ. ಹಾಗೂ ಅವರು ಹೇಳುತ್ತಾರೆ, ನಾವೇಕೆ ನಿನ್ನ ಪಾಪದ ಫಲದಲ್ಲಿ ಪಾಲುದಾರರಾಗಬೇಕು? ಅದು ನಿನ್ನ ಕರ್ಮ. ಹೆಂಡತಿ ಮಕ್ಕಳನ್ನು ನೋಡಿಕೊಳ್ಳುವುದು ನಿನ್ನ ಧರ್ಮ ಮತ್ತು ಕರ್ತವ್ಯವಾಗಿದೆ. ಹೀಗೆ ಮಾಡಿ ಬದುಕಬೇಕೆಂಬುದನ್ನು ನಾವೇನು ಹೇಳಿಲ್ಲವಲ್ಲ ಎಂದಾಗ ರತ್ನಾಕರನಿಗೆ ಆಘಾತವಾಗುತ್ತದೆ. ಅಲ್ಲಿಂದ ನಾರದರಲ್ಲಿಗೆ ಓಡೋಡಿ ಬಂದು ಅವರನ್ನು ಹಗ್ಗದಿಂದ ಬಿಡಿಸಿ ಅವರ ಕಾಲಿಗೆ ನಮಸ್ಕರಿಸಿ, ಕ್ಷಮೆ ಕೇಳಿ ತನ್ನ ಮುಂದಿನ ಬದುಕಿನ ಬಗ್ಗೆ ಅವರನ್ನು ಕೇಳುತ್ತಾನೆ. ಆಗ ನಾರದರು ರಾಮನನ್ನು ಕುರಿತು ರಾಮಸ್ಮರಣೆ ಮಾಡು ಎಂದು ಹೇಳುತ್ತಾರೆ. ರತ್ನಾಕರನಿಗೆ ರಾಮ ಎಂಬ ಶಬ್ದ ಉಚ್ಚಾರಣೆ ಮಾಡಲು ಕಷ್ಟವಾಗುತ್ತದೆ.
ಇದನ್ನರಿತ ನಾರದರೂ ಗಿಡಮರಗಳ ಮಧ್ಯೆ ಬೆಳೆದ ಇವರಿಗೆ ಮರ ಮರ ಎಂದು ಜಪಿಸು, ಅದೇ ರಾಮಸ್ಮರಣೆ ಯಾಗುತ್ತದೆ ಎಂದು ಹೇಳಿ ಹೊರಟು ಹೋದರು. ನಾರದರ ಮಾತಿನಂತೆ ರತ್ನಾಕರ ಮರ ಮರ ಎನ್ನುತ್ತಾ ಅದು ರಾಮ ರಾಮ ಧ್ವನಿಯಾಗಿ ಹೊರಹೊಮ್ಮಿತು. ಸುಮಾರು ವರ್ಷಗಳ ಕಾಲ ಅಲ್ಲಿಯೇ ರಾಮಸ್ಮರಣೆಯಲ್ಲಿ ಕುಳಿತ ರತ್ನಾಕರನ ಮಹಿಮೆ ಆಗುತ್ತವೆ ಆದರೂ ಬಾಹ್ಯ ಪ್ರಪಂಚದ ಪರಿಜ್ಞಾನವೇ ಇರದ ಆತ ರಾಮಸ್ಮರಣೆಯಲ್ಲಿ ತಲ್ಲಿ ನನಾಗಿದ್ದ.
ಕೆಲವು ವರ್ಷಗಳ ನಂತರ ನಾರದಮುನಿಗಳು ಅದೇ ದಾರಿಯಲ್ಲಿ ಸಾಗುತ್ತಿದ್ದಾಗ ರಾಮ ರಾಮ ಎಂಬ ಧ್ವನಿ ಕೇಳಿ ಅಲ್ಲಿಯೇ ನಿಂತರು. ಆಗ ಅವರಿಗೆ ರತ್ನಾಕರನ ನೆನಪಾಯಿತು. ಮಣ್ಣಿನ ಹುತ್ತದಿಂದ ಬರುತ್ತಿದ್ದ ಧ್ವನಿಯ ಕಡೆಗೆ ನಡೆದು,ಮಣ್ಣಿನ ಹುತ್ತವನ್ನು ತಮ್ಮ ಕಮಂಡಲದಲ್ಲಿನ ನೀರನ್ನು ಚಿಮಿಕಿಸಿ ಕರಗಿಸಿದರು. ರತ್ನಾಕರನನ್ನು ಎಚ್ಚರಿಸಿದರು. ‘ವಲ್ಮಿಕ ‘ ಎಂದರೆ ಹುತ್ತ.
ವಲ್ಮಿಕ ದಿಂದ ಹೊರಗೆ ಬಂದ ರತ್ನಾಕರ ವಾಲ್ಮೀಕಿ ಆದ.
ವಾಲ್ಮೀಕಿಯಲ್ಲಿದ್ದ ಅಗಾಧ ಶಕ್ತಿಯನ್ನು ಕಂಡು ನಾರದರು ಆತನಿಗೆ ರಾಮ, ಲಕ್ಷ್ಮಣ,ಅಯೋಧ್ಯ, ಮುಂತಾದವುಗಳ ಬಗ್ಗೆ ವಿವರಿಸುತ್ತಾರೆ. ರಾಮನ ಕಥ ಬಗ್ಗೆ ಬರೆಯಿರಿ, ಅಂತಹ ದಿವ್ಯ ಶಕ್ತಿ ನಿಮಗೆ ಇದೆ ಎಂದು
ವಾಲ್ಮೀಕಿಗೆ ಹೇಳುತ್ತಾರೆ. ನಂತರದಲ್ಲಿ ಅಲ್ಲಿಂದ ವಾಲ್ಮೀಕಿ ಋಷಿಗಳು ಸಂಧ್ಯಾ ವಂದನೆ ಸಲ್ಲಿಸಲು ಥಮಸ್ಸಾ ಎಂಬ ನದಿಯ ದಡಕ್ಕೆ ಬಂದಾಗ ಅಲ್ಲಿ ಮರದ ಮೇಲೆ ಎರಡು ಕ್ರೌಂಚ ಪಕ್ಷಿಗಳು ಸಂತೋಷವಾಗಿ ಇದ್ದಾಗ ಅಲ್ಲಿಗೆ ಒಬ್ಬ ಬೇಡ ತನ್ನ ಬಾಣದಿಂದ ಒಂದು ಗಂಡು ಪಕ್ಷಿಗೆ ಹೊಡೆದು ಬೀಳಿಸುತ್ತಾನೆ. ಕೂಡಲೇ ನೆಲಕ್ಕೆ ಬಿದ್ದ ಪಕ್ಷಿ ವಿಲವಿಲನೆ ಒದ್ದಾಡಿ ಸಾವನ್ನಪ್ಪುತ್ತದೆ. ಅಲ್ಲಿಯೇ ಇದ್ದ ಹೆಣ್ಣು ಪಕ್ಷಿ ಸಂಕಟದಿಂದ ಪರಿತಪಿಸುವುದನ್ನು ಕಂಡ ಮಹರ್ಷಿಗಳು ಆ ಬೇಡನಿಗೆ ಈ ರೀತಿಯಾಗಿ ಶಾಪವನ್ನು ಕೊಡುತ್ತಾರೆ.
” ಮಾ ನಿಶಾದ ಪ್ರತಿಷ್ಠಾಂ
ತೋಮ್ ಆಗಮಹ ಶಾಶ್ವತ: ಸಮಾಹ
ಯತ್ ಕ್ರೌoಚ ಮಿಥುನಾ ದೇಶಂ
ಅವಧಿಹಿ ಕಾಮ ಮೋಹಿತಂ. ”
ಅಂದರೆ ಅನ್ಯಾಯವಾಗಿ ಆ ಪಕ್ಷಿಯನ್ನು ಕೊಂದ ನೀನು ಸಾವಿಗೀಡಾಗು,ಎಂಬ ಶಾಪವನ್ನು ಕೊಟ್ಟು ಅಲ್ಲಿಂದ ಸ್ನಾನ ಸಂಧ್ಯಾವಂದನೆಯನ್ನು ಮುಗಿಸಿಕೊಂಡು ಆಶ್ರಮಕ್ಕೆ ಬರುತ್ತಾರೆ.ಆಶ್ರಮಕ್ಕೆ ಬಂದ ವಾಲ್ಮೀಕಿ ತಮ್ಮ ಬಗ್ಗೆ ಬೇಸರ ಕಾಣುತ್ತೆ ಏಕೆಂದರೆ ಆ ಬೇಟೆಗಾರನಿಗೆ ನಾನೇಕೆ ಶಾಪ ಕೊಟ್ಟೆ? ಬೇಟೆಯಾಡುವುದು ಅವನ ಕಾರ್ಯ. ನಾನು ತಪ್ಪು ಮಾಡಿದೆ ಅವನಿಗೆ ಶಾಪ ಕೊಡಬಾರದಿತ್ತು ಎಂದು ನೊಂದುಕೊಂಡರು. ಒಂದೆಡೆ ಪಕ್ಷಿಯ ಬಗ್ಗೆ ಅನುಕಂಪ. ಬೇಡನ ಬಗ್ಗೆಯೂ ಸಹಾನುಭೂತಿ ಹೊಂದಿದ್ದರು.
ಆಗ ಅಲ್ಲಿಗೆ ಬ್ರಹ್ಮದೇವರ ಆಗಮನವಾಯಿತು ಅವರು ವಾಲ್ಮೀಕಿಯನ್ನು ಕುರಿತು ಗತಿಸಿ ಹೋದ ಘಟನೆಗೆ ನೊಂದುಕೊಳ್ಳುವುದು ಬೇಡ. ಪಕ್ಷಿಯ ಶೋಕದ ಕಾರಣಕ್ಕಾಗಿ ನಿಮ್ಮ ಬಾಯಲ್ಲಿ ಬಂದ ಆ ಶಾಪ ಒಂದು ಅತ್ಯದ್ಭುತ ಶ್ಲೋಕವಾಗಿ ಹೊರಹೊಮ್ಮಿದೆ. ನಿಮ್ಮಲ್ಲಿ ಅಂತಹ ದಿವ್ಯ ಜ್ಞಾನವಿದೆ. ಈ ಶ್ಲೋಕ ಜಗತ್ತಿನ ಜನರ ಶೋಕವನ್ನು ಕಳೆಯುವಂತಾಗಲಿ. ಅದಕ್ಕಾಗಿ ರಾಮಾಯಣವೆಂಬ ಮಹಾ ಕಾವ್ಯ ನಿಮ್ಮಿಂದ ರಚನೆಯಾಗಲಿ. ಹೀಗೆ ರಚನೆಯಾಗಿದ್ದೆ ರಾಮಾಯಣವೆಂಬ ಮಹಾಕಾವ್ಯ. ಇದರಲ್ಲಿ 24,000 ಶ್ಲೋಕಗಳಿವೆ.
ವಾಲ್ಮೀಕಿ ಮಹರ್ಷಿಗಳು ರಾಮಾಯಣ ಮಹಾಕಾವ್ಯ ಬರೆಯುವದರ ಜೊತೆಗೆ ಅದರಲ್ಲಿ ಅವರು ಪಾತ್ರಧಾರಿಗಳು ಹೌದು. ರಾಮ ಲಕ್ಷ್ಮಣ ಮತ್ತು ಸೀತೆ ವನವಾಸಕ್ಕೆ ಹೋದಾಗ ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ಹೋಗಿದ್ದರು ಎಂಬ ಉಲ್ಲೇಖಗಳಿವೆ. ನಂತರದಲ್ಲಿ ಶ್ರೀರಾಮ ತನ್ನ ಪತ್ನಿಯನ್ನು ಅಡವಿಗ ಟ್ಟಿದಾಗ ಗರ್ಭವತಿಯಾದ ಸೀತೆಗೆ ಆಶ್ರಯ ಕೊಟ್ಟಿದ್ದು ಇದೇ ವಾಲ್ಮೀಕಿ ಮಹರ್ಷಿಗಳು. ಸೀತೆಗೆ ತಂದೆಯಾಗಿ ಆಕೆ ಮಕ್ಕಳಾದ ಲವ ಕುಶರಿಗೆ ವಿದ್ಯಾ ಗುರುಗಳಾಗಿ ಅವರಿಗೆ ಆಶ್ರಯ ನೀಡಿದಂತವರು. ಕೊನೆಯದಾಗಿ ಸೀತೆ ಪರಿಶುದ್ಧಳೆಂದು ಆಕೆಯನ್ನು ಪತ್ನಿಯಾಗಿ ಸ್ವೀಕರಿಸಬೇಕೆಂದು ರಾಮನಲ್ಲಿಗೆ ಸೀತೆಯನ್ನು ಕರೆದುಕೊಂಡು ಬಂದವರು,ಆದರೆ ಸೀತಾಮಾತೆ ಅಗ್ನಿ ಪ್ರವೇಶ ಮಾಡುವದರೊಂದಿಗೆ ರಾಮಾಯಣ ಅಂತಿಮ ಹಂತಕ್ಕೆ ಬಂದಿತು.
ಹೀಗೆ ಆ ಕಥೆಯಲ್ಲಿ ತಾವೇ ಪಾತ್ರಧಾರಿಗಳಾಗಿ, ಕವಿಗಳಾಗಿ ಬರೆದ ಆ ಮಹಾ ಕಾವ್ಯ ನಮಗೆಲ್ಲ ಆದರ್ಶ. ಬದಲಾವಣೆ ಪ್ರಕೃತಿಯ ನಿಯಮ. ಅದರಲ್ಲೂ ವಾಲ್ಮೀಕಿ ಅವರು ರತ್ನಾಕರ ಎಂಬ ವ್ಯಕ್ತಿತ್ವದಿಂದ ಪರಿಶುದ್ಧರಾಗಿ ವಾಲ್ಮೀಕಿ ಮಹರ್ಷಿಗಳಾಗಿದ್ದು ಇಡೀ ಭೂ ಮಂಡಲಕ್ಕೆ ಅವರು ಆದರ್ಶಪ್ರಾಯರು.ಅಂತಹ ಆದರ್ಶಗಳನ್ನು ನಾವೆಲ್ಲ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅವರ ಜಯಂತಿಯ ಆಚರಣೆಗೆ ಒಂದು ಅರ್ಥ ಬಂದೀತು.
ಉಮಾ ಗವೀಶ ಕಲ್ಮಠ
ಶಿಕ್ಷಕಿ ಸರಕಾರಿ ಪ್ರೌಢಶಾಲೆ ಹಟ್ಟಿ (ಅಳವಂಡಿ) ಕೊಪ್ಪಳ