
ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಕೈಜೋಡಿಸಿರಿ : ಪ್ರಕಾಶ ವಡ್ಡರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 8- ಗ್ರಾಮದ ಸರ್ವಾಂಗೀಣ ಅಭಿವೃದ್ದಿಗಾಗಿ ಕಾಮನೂರು ಗ್ರಾಮ ದತ್ತು ತೆಗೆದುಕೊಂಡಿದ್ದು ಗ್ರಾಮಸ್ಥರೆಲ್ಲರೂ ಕೈ ಜೋಡಿಸಿರೆಂದು ಜಿಲ್ಲಾ ಪಂಚಾಯತ ಮಾನ್ಯ ಯೋಜನಾ ನಿರ್ದೇಶಕರಾದ ಪ್ರಕಾಶ ವಡ್ಡರ ಕರೆ ನೀಡಿದರು.
ಲೇಬಗೇರಿ ಗ್ರಾಮ ಪಂಚಾಯತಿಯ ಕಾಮನೂರು ಗ್ರಾಮದಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ದತ್ತು ಗ್ರಾಮದ ಅಭಿವೃದ್ದಿ ಕುರಿತು ಗ್ರಾಮಸ್ಥರೊಂದಿಗೆ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಇತ್ತೀಚಿಗೆ ಮಾನ್ಯ ಸಂಸದರ ಅಧ್ಯಕ್ಷತೆಯಲ್ಲಿ ಜರುಗಿದ ದಿಶಾ ಸಭೆಯಲ್ಲಿ ಕೊಪ್ಪಳ ತಾಲೂಕಿನ ಲೇಬಗೇರಿ ಗ್ರಾಮ ಪಂಚಾಯತಿಯ ಕಾಮನೂರು ಗ್ರಾಮ ಹಾಗು ಬೆಟಗೇರಿ ಗ್ರಾಮ ಪಂಚಾಯತಿ ಮೋರನಾಳ ಗ್ರಾಮಗಳನ್ನು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ದತ್ತು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದು ಗ್ರಾಮ ಪಂಚಾಯತಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ರೇಷ್ಮೆ ಇಲಾಖೆಯಿಂದ ಕಾಮಗಾರಿಗಳನ್ನು ಅನುಷ್ಠಾನಿಸಲು ಅವಕಾಶ ಇರುವ ಕುರಿತು ಮಾಹಿತಿ ನೀಡಿದರು. ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಅವಶ್ಯವಿರುವ ಕಾಮಗಾರಿ ಕುರಿತು ಸಭೆಯಲ್ಲಿ ವಿವರಿಸಿದರು.
ಎಲ್ಲಾ ತಾಂತ್ರಿಕ ಸಹಾಯಕರು ಪ್ರತಿ ಕಾಲೋನಿಗೆ ಭೇಟಿ ನೀಡಿ ಚರಂಡಿ, ರಸ್ತೆ, ಶಾಲಾಭಿವೃದ್ದಿ ಕಾಮಗಾರಿಗಳು ಅನುಷ್ಠಾನಿಸಲು ಸಂಪೂರ್ಣ ಮಾಹಿತಿ ಸಲ್ಲಿಸುವಂತೆ ಸೂಚಿಸಿದರು.
ಗ್ರಾಮಕ್ಕೆ ಅವಶ್ಯವಿರುವ ಕಾಮಗಾರಿಗಳನ್ನು ಮಹಾತ್ಮಾ ಗಾಂಧಿ ನರೇಗಾ ಯೋಜನೆ ಹಾಗು ವಿವಿಧ ಇಲಾಖೆಗಳ ಒಗ್ಗೂಡಿಸುವಿಕೆ ಮೂಲಕ ಕಾಮಗಾರಿಗಳನ್ನು ಅನುಷ್ಠಾನಿಸಲಾಗುವದು ಎಂದು ಸಭೆಯಲ್ಲಿ ಗ್ರಾಮಸ್ಥರಿಗೆ ಮನವರಿಕೆ ಮಾಡಿದರು. ಗ್ರಾಮದಲ್ಲಿರುವ ಸಣ್ಣ, ಅತೀ ಸಣ್ಣ ರೈತರಿಗೆ ನರೇಗಾದಡಿ ಸಿಗುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವದು. ಪ್ರತಿಯೊಬ್ಬರು ಯೋಜನೆಯ ಸದುಪಯೋಗ ಪಡೆದುಕೊಳ್ಳಲು ರೈತರು ಅರಿತುಕೊಂಡು ತಮ್ಮ ಆದ್ಯತಾ ಕಾಮಗಾರಿಗಳ ಪಟ್ಟಿಯನ್ನು ಸಿದ್ದಪಡಿಸಲು ತಿಳಿಸಿದರು. ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಅಳತೆ ತೂಕ ಮಾಡುತ್ತಿರುವ ಕುರಿತು ಪರಿಶೀಲಿಸಿದರು. ಮಕ್ಕಳಿಗೆ ಆಹಾರ ವಿತರಿಸುವ ಕುರಿತು ಮಾಹಿತಿ ಪಡೆದರು.
ಗ್ರಾಮದ ಊರ ಮುಂದಿನ ಕೆರೆ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆ ಹಾಗು ಗ್ರಾಮ ಪಂಚಾಯತಿಯಿ0ದ ಅನುಷ್ಠಾನಗೊಳಿಸಬಹುದಾದ ಅವಕಾಶ ಕಾಮಗಾರಿಗಳ ಕುರಿತು ಪರಿಶೀಲಿಸಿದರು.
ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಗ್ರಾಮಸ್ಥರಾದ ದ್ಯಾಮಣ್ಣ ಹೊನ್ನತ್ತಿ, ಮಲ್ಲಪ್ಪ ಕೊಡ್ಲಿ, ದೇವಪ್ಪ, ಮಹಾದೇವಪ್ಪ ಕುರಿ, ಪಂಚಾಯತ ಅಭಿವೃದ್ದಿ ಅಧಿಕಾರಿ ಸಂಗಮೇಶ ತೇರಿನ, ಜಿಲ್ಲಾ ಪಂಚಾಯತ ನರೇಗಾ ಲೆಕ್ಕ ಶಾಖೆ ವ್ಯವಸ್ಥಾಪಕ ಪಂಪನಗೌಡ, ತಾಂತ್ರಿಕ ಸಂಯೋಜಕ ಯಮನೂರಪ್ಪ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಹಾಯಕರು, ಗ್ರಾಮ ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು.