
ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ
ಯುವ ಸಮೂಹ ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು : ಪ್ರೊ.ಎಂ.ಮುನಿರಾಜು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 29- ದೇಶದ ಯುವಕರನ್ನು ಕ್ರೀಡೆಯಲ್ಲಿ ಭಾಗವಹಿಸುವಂತೆ ಉತ್ತೇಜಿಸಲು, ಕ್ರೀಡಾಪಟುಗಳನ್ನು ಮುಖ್ಯವಾಹಿನಿಗೆ ಕರೆತರಲುರಾಷ್ಟ್ರೀಯ ಕ್ರೀಡಾದಿನವನ್ನು ದೇಶದಾದ್ಯಂತ ಆಚರಣೆ ಮಾಡಲಾಗುತ್ತಿದ್ದು, ಯುವ ಸಮೂಹವು ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕುಲಪತಿ ಪ್ರೊ.ಎಂ.ಮುನಿರಾಜು ಅವರು ಕರೆ ನೀಡಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಮತ್ತು ಕ್ರೀಡಾ ವಿಜ್ಞಾನ ವಿಭಾಗ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಗುರುವಾರ ಆಯೋಜಿಸಿದ್ದ ಖೊ-ಖೊ ಪಂದ್ಯಾವಳಿಯನ್ನು ಮೇಜರ್ ಧ್ಯಾನ್‌ಚಂದ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳು ನಮ್ಮನ್ನು ನಾವು ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಾಗಿರುವಂತೆ ಮಾಡುತ್ತವೆ. ನಮ್ಮಲ್ಲಿರುವ ಹಿಂಜರಿಕೆಯನ್ನು ತೊರೆದು, ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಸ್ಫರ್ಧಾ ಮನೋಭಾವ ತೋರಿಸಬೇಕು ಎಂದು ಹೇಳಿದರು.
ವಿವಿಯ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ.ಕುಮಾರ್ ಅವರು ಮಾತನಾಡಿ, ಸಮಾಜ ವಿಜ್ಞಾನ ನಿಕಾಯದ ವಿಭಾಗಗಳಿಗೆ ಸ್ವಂತ ಕಟ್ಟಡದ ಕೊರತೆಯಿದ್ದು, ಒದಗಿಸಿಕೊಟ್ಟಲ್ಲಿ ನಿಕಾಯದ ವಿದ್ಯಾರ್ಥಿಗಳಿಗೆ ಕ್ರೀಡೆ ಮತ್ತು ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕುಲಪತಿಗಳು ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದರು.
ಮೇಜರ್ ಧ್ಯಾನ್ ಚಂದ್ ಸ್ಮರಣಾರ್ಥ ಆಯೋಜಿಸಿದ್ದ ಖೊ-ಖೊ ಪಂದ್ಯಾವಳಿಯಲ್ಲಿ ವಿಜೇತರಾದ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕುಲಪತಿಗಳು ಟ್ರೋಫಿ ವಿತರಿಸಿದರು.
ವಿಭಾಗದ ಮುಖ್ಯಸ್ಥರಾದ ಡಾ. ಶಶಿಧರ ಕೆಲ್ಲೂರ ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ದೈಹಿಕ ಶಿಕ್ಷಣ ಮತ್ತು ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಸಂಪತ್ ಕುಮಾರ, ಅತಿಥಿ ಉಪನ್ಯಾಸಕರಾದ ಮಹೇಶ, ರಾಜೇಶ, ವಿದ್ಯಾರ್ಥಿಗಳಾದ ಶಿವಪುತ್ರ ಹಾಗೂ ಇತರರು ಭಾಗವಹಿಸಿದ್ದರು.