ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ಖಂಡಿಸಿ.
ಬಹಿರಂಗ ಕ್ಷಮೆಯಾಚನೆಗೆ ಒತ್ತಾಯಿಸಿ ಪ್ರತಿಭಟನೆ

ಕರುನಾಡ ಬೆಳಗು‌ ಸುದ್ದಿ
ಕೊಪ್ಪಳ, 06- ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ಖಂಡಿಸಿ ಕೊಪ್ಪಳದ ಬಸವಪರ ಸಂಘಟನೆಗಳಿಂದ ಯತ್ನಾಳ ಬಹಿರಂಗ ಕ್ಷಮೆಯಾಚನೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಶುಕ್ರವಾದಂದು‌ ಬಸವೇಶ್ವರ ವೃತ್ತದಲ್ಲಿ‌ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವಪರ ಸಂಘಟನೆಗಳು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಒತ್ತಾಯಿಸಿದರು.
ಮನವಿಯಲ್ಲಿ ಪಹಣಿಯಲ್ಲಿ ವಕ್ ನಮೂದು ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಬೀದರಿನ ಕಾರ್ಯಕ್ರಮವೊಂದರಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವಕ್ಕೆ ಅವಮಾನವಾಗುವ ರೀತಿಯಲ್ಲಿ ನೀಡಿರುವ ಹೇಳಿಕೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಕೊಪ್ಪಳ ಜಿಲ್ಲಾ ಘಟಕ ಹಾಗೂ ಎಲ್ಲಾ ಬಸವಪರ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ.

ಧರ್ಮದ ಹೆಸರಿನಲ್ಲಿ ಶತ ಶತಮಾನಗಳಿಂದ ಶೋಷಣೆಗೆ ಒಳಗಾದ ಮನುಕುಲವನ್ನು ಉದ್ಧರಿಸಿದವರು ಮಹಾ ಪುರುಷ ವಿಶ್ವಗುರು ಬಸವಣ್ಣನವರು. ಅವರು ಹನ್ನೆರಡನೇ ಶತಮಾನದಲ್ಲಿ ಉದಯಿಸಿ, ಜಾತಿ, ವರ್ಣ, ವರ್ಗರಹಿತ, ಸರ್ವ ಜೀವಿಗಳ ಏಳಿಗೆಗಾಗಿ ಧಾರ್ಮಿಕ, ಸಾಮಾಜಿಕ ಕ್ರಾಂತಿಯನ್ನು ಮಾಡಿದ್ದು ಕರ್ನಾಟಕದ ಇತಿಹಾಸದಲ್ಲಿಯೇ ಒಂದು ಮೈಲಿಗಲ್ಲು.

ಅವರ ತತ್ವಗಳು ಕೇವಲ ಕರ್ನಾಟಕವನ್ನು ಮಾತ್ರ ಅಲ್ಲ. ಭಾರತವನ್ನು ಮಾತ್ರ ಅಲ್ಲ. ಸೃಷ್ಟಿಯಲ್ಲಿನ ಇಡೀ ಮಾನವ ಕುಲವನ್ನು ಬೆಳಗುವ ಅಂಶಗಳು. ಅವರು ಸರ್ವ ಕಾಯಕ ಸಮುದಾಯದ ಶರಣರೊಂದಿಗೆ ಕಟ್ಟಿದ ಮಹಾಮಾರ್ಗವನ್ನು ಜಗತ್ತಿನಾದ್ಯಂತ ಪ್ರತಿಯೊಬ್ಬರೂ ಮೆಚ್ಚುವಂತಹದ್ದು ಆಗಿರುತ್ತದೆ. ಇದನ್ನು ಅರಿತ ಪ್ರಪಂಚದ ಮುಂದುವರಿದ ರಾಷ್ಟ್ರಗಳಲ್ಲಿ ಒಂದಾದ ಇಂಗ್ಲೆಂಡ ಥೇಮ್ಸ್ ನದಿ ದಂಡೆಯ ಮೇಲೆ ಅವರ ಪ್ರತಿಮೆಯನ್ನು ಸ್ಥಾಪಿಸಿ ಗೌರವ ಸಲ್ಲಿಸಲಾಗಿದೆ.

ಇಂತಹ ಸಂದರ್ಭದಲ್ಲಿ ಲಿಂಗಾಯತರಾಗಿಯೇ ಹುಟ್ಟಿದ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಬೀದರಿನ ವಕ್ಫ್ ಜಾಗೃತಿ ಕಾರ್ಯಕ್ರಮ ಒಂದರಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡುವಾಗ ಗುರು ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಉದ್ಭಟತನದ ಮಾತುಗಳನ್ನು ಆಡಿದ್ದಾರೆ. ತಾನು ಹುಟ್ಟಿದ ಧರ್ಮದ ಬಗ್ಗೆಯೇ, ತನ್ನ ಧರ್ಮದ ಗುರುವಾದ ಬಸವಣ್ಣನವರ ಬಗ್ಗೆಯೇ ಇಂತಹ ಮಾತುಗಳನ್ನ ಆಡಿದ್ದು ನೋಡಿದರೆ ಸಂಸ್ಕಾರವಿಲ್ಲದ ವ್ಯಕ್ತಿ ಎಂದು ದೂರಿದ್ದಾರೆ.

“ಒಂದನ್ನಾಡಲು ಹೋಗಿ ಒಂಬತ್ತನಾಡುವ ಡಂಭಕರ ಮೆಚ್ಚ ನಮ್ಮ ಕೂಡಲಸಂಗಮದೇವಾ” ಎಂದು ಬಸವಣ್ಣನವರು ಹೇಳಿದ್ದಾರೆ. ಲಿಂಗಾಯತ ಧರ್ಮೀಯರಾದ ಯತ್ನಾಳರಿಗೆ ನಾಲಿಗೆ ಮೇಲೆ ಹಿಡಿತ ತಪ್ಪಿ ಅರಿವಿಲ್ಲದೆ ಪುಢಾರಿಯಂತೆ ಮಾತನಾಡುವುದು ಶೋಭೆ ತರುವಂಥದಲ್ಲ.

ಬಸವಣ್ಣನವರ ಬಗ್ಗೆ ಲಘುವಾಗಿ ಮಾತನಾಡಿ ಬಸವ ಭಕ್ತರಿಗೆ ನೋವು ಉಂಟು ಮಾಡಿದ್ದಕ್ಕೆ ಕೂಡಲೇ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಲೇಬೇಕು. ಇಲ್ಲವಾದರೆ ಮುಂದೆ ಅವರ ವಿರುದ್ಧ ಉಗ್ರ ಹೋರಾಟ ಮಾಡುವದು ಅನಿವಾರ್ಯವಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡುತ್ತಿದ್ದೇವೆ.

ಪ್ರತಿಭಟನೆ ನೇತ್ರತ್ವವನ್ನು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಹನುಮೇಶ ಕಲ್ಕಂಗಿ , ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವಕುಮಾರ. ಕುಕನೂರ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕ ಜಿಲ್ಲಧ್ಯಕ್ಷೆ ಅರ್ಚನಾ ಸುಪಠ,

ಲಿಂಗಾಯತ ಧರ್ಮ ಮಹಾಸಭಾ ರಾಜ್ಯಾಧ್ಯಕ್ಷ ಈಶಣ್ಣ ಕೊರ್ಲಹಳ್ಳಿ, ವಿಶ್ವಗುರು ಬಸವೇಶ್ವರ ಟ್ರಸ್ಟ್ ಅದ್ಯಕ್ಷ ಗುಡದಪ್ಪ ಹಡಪದ , ಮುಖಂಡರಾದ ದಾನಪ್ಪ ಶೆಟ್ಟರ,
ಶರಣಬಸನಗೌಡ ಪಾಟೀಲ, ಬಸವರಾಜ ಬಳ್ಳೋಳ್ಳಿ, ಜಿಲ್ಲಾಧ್ಯಕ್ಷರು, ಶೇಖರ ಇಂಗಳದಾಳ,
ರಾಜೇಶ ಸಸಿಮಠ.ಸಾವಿತ್ರಿ ಮುಜುಂದಾರೆ.
ಸೌಮ್ಯ ನಾಲವಾಡ, ಸಂಗಮೇಶ ವಾರದ
ಶಿವಬಸಯ್ಯ ವೀರಾಪೂರ. ಸೋಮನಗೌಡ ಹೊಗರನಾಳ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!