
ಕಾಯಿಲೆಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಿ : ರವೀಂದ್ರ ನಂದಿಹಾಳ
ಕರುನಾಡ ಬೆಳಗುಬ ಸುದ್ದಿ
ಕುಷ್ಟಗಿ, 25- ಕಾಯಿಲೆಗಳು ಬಂದಾಗ ಪರದಾಡುವ ಬದಲಿಗೆ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಮೇಲ್ವಿಚಾರಕ ರವೀಂದ್ರ ನಂದಿಹಾಳ ಹೇಳಿದರು.
ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ನಡೆದ ಡೆಂಘಿ ಹಾಗೂ ಮಲೇರಿಯಾ ವಿರೋಧಿ ಮಾಸಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾನಸಿಕ ಮತ್ತು ಶಾರೀರಿಕವಾಗಿ ಬಲವಾಗಿದ್ದಲ್ಲಿ ಕಾಯಿಲೆಗಳನ್ನು ದೂರ ಸರಿಸಬಹುದಾಗಿದ್ದು ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನಿಂತ ನೀರು ಸೊಳ್ಳೆಗಳ ಸಂತಾನೋತ್ಪತ್ತಿಗೆ ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ಸಲಹೆಯನ್ನು ನೀಡಿದರು.
ಸಂಜೆಯ ಸಮಯದಲ್ಲಿ ಮನೆಯಲ್ಲಿ ಧೂಪ ಅಥವಾ ಹೊಗೆ ಹಾಕುವುದರಿಂದ ಸೊಳ್ಳೆಗಳು ಮನೆಯ ಸಮೀಪ ಬರುವದಿಲ್ಲ ಎಂದರು.
ರೋಗವನ್ನು ನಿಯಂತ್ರಣ ಮಾಡಬಹುದು. ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ನಿಂತ ನೀರು ಸೊಳ್ಳೆಗಳ ತವರು ಮನೆ ಇದ್ದಂತೆ, ಆ ದೃಷ್ಟಿಯಿಂದ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು.
ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಡಿವಾಣ ಹಾಕಿದರೆ ಮಲೇರಿಯಾ ಹಾಗೂ ಡೆಂಘಿ ರೋಗವನ್ನು ತಡೆಗಟ್ಟಬಹುದು ಎಂದರು.
ಈ ಸಂದರ್ಭದಲ್ಲಿ ಶ್ರೀನಿವಾಸ ಕಂಟ್ಲಿ, ಪೂರ್ಣಿಮಾ ದೇವಾಂಗಮಠ, ಗಾಯಿತ್ರಿ ಕುದರಿಮೋತಿ, ತಾರಾಬಿ ಯಲಬುರ್ಗಿ, ಸಲೀಮಾ ಬೇಗಂ, ಅಮೃತಾ ಹೊಸಮನಿ ಸೇರಿದಂತೆ ಹಲವರು ಇದ್ದರು.