IMG-20240827-WA0139

ಅಳವಂಡಿಯಲ್ಲಿ ಜಿಲ್ಲಾಧಿಕಾರಿಗಳಿಂದ ಜನಸ್ಪಂದನ : 192 ಅರ್ಜಿಗಳ ಸ್ವೀಕೃತಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 27- ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್ ಜನಸ್ಪಂದನ ಕಾರ್ಯಕ್ರಮ ನಡೆಸಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವರ ಆಶ್ರಯದಲ್ಲಿ ಅಳವಂಡಿಯ ಹಲವಾಗಲಿ ರಸ್ತೆಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ೨೦೨೩ರ ಸೆಪ್ಟೆಂಬರನಲ್ಲಿ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, ಅಕ್ಟೋಬರ್ ಮಾಹೆಯಲ್ಲಿ ಗಂಗಾವತಿಯಲ್ಲಿ ಮತ್ತು ಡಿಸೆಂಬರನಲ್ಲಿ ಕುಷ್ಟಗಿಯಲ್ಲಿ, ೨೦೨೪ರಲ್ಲಿ ಫೆಬ್ರವರಿಯಲ್ಲಿ ಚಿಕ್ಕವಂಕಲಕುಂಟದಲ್ಲಿ, ಜೂನದಲ್ಲಿ ಕನಕಗಿರಿಯಲ್ಲಿ, ಜುಲೈನಲ್ಲಿ ಮಂಗಳೂರ ಗ್ರಾಮದಲ್ಲಿ ಮತ್ತು ಆಗಸ್ಟ್ ಮಾಹೆಯಲ್ಲಿ ಸಿದ್ದಾಪುರ ಗ್ರಾಮದಲ್ಲಿ ನಡೆಸಿದ ಜನಸ್ಪಂದನ ಕಾರ್ಯಕ್ರಮಗಳಲ್ಲಿ ಸ್ವೀಕೃತಿಯಾದ ಒಟ್ಟು ೧೭೭೦ ಅರ್ಜಿಗಳ ಪೈಕಿ ೧೫೮೨ ಅರ್ಜಿಗಳನ್ನು ವಿಲೇಗೊಳಿಸಿ ಜಿಲ್ಲಾಡಳಿತವು ಉತ್ತಮ ಕಾರ್ಯ ಮಾಡಿದೆ. ಬಾಕಿ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ಸತತ 2 ಗಂಟೆ ಸಮಯ ಅಹವಾಲು ಸ್ವೀಕಾರ : ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ,
ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರೇಷ್ಮಾ ಹಾನಗಲ್, ತಹಸೀಲ್ದಾರರಾದ ವಿಠ್ಠಲ್ ಚೌಗಲಾ, ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್., ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಅಹವಾಲು ಆಲಿಸಿದರು.

ಕಾರ್ಯಕ್ರಮದ ನಿಮಿತ್ತ ಸ್ಥಳದಲ್ಲಿ ಅರ್ಜಿಗಳ ಸ್ವೀಕೃತಿಗೆ ವ್ಯವಸ್ಥೆ ಮಾಡಲಾಗಿತ್ತು. ಸ್ವೀಕೃತವಾದ ಅರ್ಜಿಗಳ ವಿವರವನ್ನು ಏಕಕಾಲಕ್ಕೆ ರಜಿಸ್ಟರನಲ್ಲಿ ಮತ್ತು ಐಪಿಜಿಆರ್ ಎಸ್ ಪೋರ್ಟಲನಲ್ಲಿ ಅಳವಡಿಸುವ ವ್ಯವಸ್ಥೆ ಮಾಡಲಾಗಿತ್ತು.

ಕೊಪ್ಪಳ-ಮುಂಡರಗಿ ಮಧ್ಯೆದ ರಸ್ತೆ ಸೇರಿದಂತೆ ಬೇರೆ ಬೇರೆ ರಸ್ತೆಗಳನ್ನು ಮೊದಲಾದ್ಯತೆಯ ಮೇರೆಗೆ ಸರಿಪಡಿಸಬೇಕು. ವಿವಿಧೆಡೆಯ ಶಾಲೆಗಳಲ್ಲಿನ ಬಿಸಿ ಊಟದ ಕೋಣೆ ಸರಿಪಡಿಸಬೇಕು ಎನ್ನುವುದು ಸೇರಿದಂತೆ ಬೇರೆ ಬೇರೆ ಬೇಡಿಕೆಯ ಒಟ್ಟು ೧೯೨ ಅರ್ಜಿಗಳು ಇದೆ ಸಂದರ್ಭದಲ್ಲಿ ಸ್ವೀಕೃತವಾದವು.

ವಿವಿಧ ಮನವಿಗಳ ವಿವರ : ಆಶ್ರಯ ಯೋಜನೆಯ ಮನೆಯ ಕೊನೆಯ ಬಿಲ್ ಮಾಡಬೇಕು ಎಂದು ಹುಲಿಗೆಮ್ಮ.ಎಂ ಒಡ್ಡರ ಅವರು, ಬೆಳೆಹಾನಿ ಪರಿಹಾರ ಒದಗಿಸಲು ಕೋರಿ ಅನ್ನಪೂರ್ಣ ಬಿ. ಅವರು, ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಕೊಪ್ಪಳ ತಾಲೂಕಿಗೆ ವರ್ಗಾಯಿಸಲು ಕೋರಿ ಮಹಾಂತೇಶ ಭಜಂತ್ರಿ ಅವರು, ಗ್ರಾಮ ನಕ್ಷೆಯ ಪ್ರಕಾರ ಬಂಡಿದಾರಿ ಸಾಗುವಳಿ ಮಾಡಿದ ರಸ್ತೆಯನ್ನು ತೆರವುಗೊಳಿಸಲು ಕೋರಿ ರಮೇಶ ಅಡಿವಿಹಳ್ಳಿ ಅವರು ಮನವಿ ಸಲ್ಲಿಸಿದರು. ಕವಲೂರ ಗ್ರಾಮದ ಎಸ್ ಸಿ ಕಾಲೋನಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ರಣದಪ್ಪ ಸುಂಕಣ್ಣನವರ, ಶಾಲೆ, ದೇವಸ್ಥಾನ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಶುಚಿತ್ವ ಕಾಯ್ದುಕೊಳ್ಳಬೇಕು ಎಂದು ಕೋರಿ ಶಿವಪ್ಪ ಕೊಪ್ಪಳ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜನಸ್ಪಂದನ ಕಾರ್ಯಕ್ರಮದಲ್ಲಿ ಅಳವಂಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಂಕ್ರಮ್ಮ ಹನುಮಪ್ಪ ಜೋಗಿನ, ಶಾರಮ್ಮ ರಾಮಣ್ಣ ಈಳಗೇರ, ಸಿಪಿಐ ಸುರೇಶ, ಪಿಎಸ್ ಐ ಶ್ರೀ ಪ್ರಹ್ಲಾದ್ ನಾಯಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ರೈತರೊಂದಿಗೆ ಊಟ ಮಾಡಿದರು : ಮಧ್ಯಾಹ್ನ ವೇಳೆಗೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಓ ಅವರೊಂದಿಗೆ ಬೆಳಗಟ್ಟಿ ಗ್ರಾಮದ ಸಾವಯವ ಕೃಷಿಕ ಮಲ್ಲಪ್ಪ ಡಂಬಳ ಅವರ ತೋಟಕ್ಕೆ ತೆರಳಿ ರೈತರೊಂದಿಗೆ ಊಟ ಮಾಡಿದರು. ಸಜ್ಜಿರೊಟ್ಟಿ, ತರಿಕಾರಿ ಪಲ್ಯ, ಪಾಯಸ ಸೇರಿದಂತೆ ಸಿರಿ ಧಾನಗಳಿಂದ ಅಡುಗೆ ಸಿದ್ಧಪಡಿಸಿ ಬಡಿಸಿದ್ದು ವಿಶೇಷವಾಗಿತ್ತು.

ಪ್ರಾತ್ಯಕ್ಷಿಕೆ ವೀಕ್ಷಣೆ : ಗ್ರಾಮ ಭೇಟಿ ವೇಳೆ ಜಿಲ್ಲಾಧಿಕಾರಿಗಳು, ಇಪ್ಕೊ ನ್ಯಾನೋ ರಸಗೊಬ್ಬರಗಳ ವಿಚಾರ ಸಂಕಿರಣ ಮತ್ತು ಡ್ರೋಣ ಪ್ರಾತ್ಯಕ್ಷಿಕೆಯ ವೀಕ್ಷಣೆ ನಡೆಸಿದರು. ಶ್ರೀಮತಿ ವೀಣಾ ಮೌನೇಶ ಕಮ್ಮಾರ ಅವರು ಡ್ರೋಣ ಪೈಲಟ್ ಚಲಾಯಿಸಿ ಬೆಳೆಗೆ ಔಷಧಿ ಸಿಂಪಡಣೆ ಮಾಡಿದರು.

ನಿಂಗಪ್ಪ ಚಲವಾಡಗಿ ತೋಟಕ್ಕೆ ಭೇಟಿ : ಬೆಳಗಟ್ಟಿ ಗ್ರಾಮದ ಸಾವಯವ ಕೃಷಿಕ ನಿಂಗಪ್ಪ ಚಲವಾಡಗಿ ಅವರ ತೋಟಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದರು. ಕೃಷಿ, ತೋಟಗಾರಿಕಾ ಇಲಾಖೆಯ ಅನುದಾನದ ಸಹಾಯದಿಂದ ವಿವಿಧ ಕೃಷಿ ಪದ್ಧತಿ ನಡೆಸುತ್ತಿರುವುದನ್ನು ತೋರಿಸಿದರು. ಕೃಷಿ ಜೊತೆಗೆ ಪಶುಪಾಲನೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ವಿವರಿಸಿದರು.

ವಸತಿ ನಿಲಯಕ್ಕೆ ಭೇಟಿ : ಅಳವಂಡಿ ಗ್ರಾಮದಲ್ಲಿನ ಬಿಸಿಎಂ ಇಲಾಖೆಯ ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ಮಹಿಳೆಯರ ವಸತಿ ನಿಲಯಕ್ಕೆ ಸಹ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು. ಪ್ರತಿದಿನದ ಊಟದ ವಿವರ, ಭಾನುವಾರದ ಊಟದ ವಿವರ, ಪುಸ್ತಕ ವಿತರಣೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು. ಸಮಯದ ಮಹತ್ವ ಅರಿತು ವಿದ್ಯಾಭ್ಯಾಸ ನಡೆಸಲು ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು. ಮ್ಯಾನೇಜಮೆಂಟ್ ಸಮಿತಿ ಸೇರಿದಂತೆ ನಾನಾ ವ್ಯವಸ್ಥೆ ಕಲ್ಪಿಸಲು ತಾಲೂಕು ಅಧಿಕಾರಿ ನಾಗರತ್ನ ಮತ್ತು ವಾರ್ಡನ್ ಮೀನಾಕ್ಷಿ ಅವರಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ : ಗ್ರಾಮ ಸಂಚಾರದ ನಂತರ ಜಿಲ್ಲಾಧಿಕಾರಿಗಳು ಪುನಃ ಡಾ.ಅಂಬೇಡ್ಕರ್ ಭವನಕ್ಕೆ ತೆರಳಿ ಸಾರ್ವಜನಿಕರ ಅಹವಾಲು ಆಲಿಸಿದರು. ಬಳಿಕ ಜಿಲ್ಲಾಧಿಕಾರಿಗಳು, ಅಳವಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಗೆ ಮಂಜೂರಾದ ಹುದ್ದೆಗಳು, ಆಸ್ಪತ್ರೆಯಲ್ಲಿನ ವೈದ್ಯಕೀಯ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಗರ್ಭಿಣಿಯರ ನೋಂದಣಿ, ಮಕ್ಕಳ ಚಿಕಿತ್ಸಾ ನೋಂದಣಿಯ ರಜಿಸ್ಟರಗಳನ್ನು ಪರಿಶೀಲಿಸಿದರು. ತಾಲೂಕು ಆರೋಗ್ಯಾಧಿಕಾರಿ ರಾಮಾಂಜನೇಯ ಸೇರಿದಂತೆ ಇನ್ನೀತರರು ಇದ್ದರು.

Leave a Reply

Your email address will not be published. Required fields are marked *

error: Content is protected !!