
ರಾಜ್ಯಪಾಲರನ್ನ ಓಡಿಸುವೆ ಎಂದು ಹೇಳಿಕೆ ನೀಡಿದ ಐವನ್ ಡಿಸೋಜಾ ವಿರುದ್ಧ ಕ್ರಮ ಕೈಗೊಳ್ಳಲು ಮನವಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 22- ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ನಮ್ಮ ರಾಜ್ಯದಲ್ಲಿ ಆರಾಜಕತೆ ಎಬ್ಬಿಸಿ ಈ ಸುಂದರ ದೇಶವನ್ನು ಬಾಂಗ್ಲಾದೇಶ ಮಾದರಿಯಲ್ಲಿ ನಮ್ಮ ರಾಜ್ಯದ ರಾಜ್ಯಪಾಲರನ್ನ ಓಡಿಸುವೆ ಎಂದು ಹೇಳಿಕೆ ನೀಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿಗಳು ಎಸ್ಪಿ ಶೋಭಾ ರಾಣಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ನಗರದ ಎಸ್ಪಿ ಕಚೇರಿಗೆ ತೆರಳಿದ ಕಾರ್ಯಕರ್ತರು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶೋಭಾ ರಾಣಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ.ಎಸ್. ಸಿದ್ದಪ್ಪ ಅವರು ಮಾತನಾಡಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ನಿವೇಶನ ಹಗರಣದಲ್ಲಿ ಸಿ.ಎಂ.ಸಿದ್ದರಾಮಯ್ಯ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ, ಈ ಹಿನ್ನೆಲೆ ಘನವೆತ್ತ ರಾಜ್ಯಪಾಲರು ಕಾನೂನಾತ್ಮಕವಾಗಿ ತನಿಖೆಗೆ ಆದೇಶ ನೀಡಿದ್ದು, ಕೈ ನಾಯಕರು ಇದನ್ನು ವಿರೋಧಿಸಿ ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ರೀತಿಯಲ್ಲಿ ಹೇಳಿಕೆ ನೀಡಿ ಅಪಮಾನಿಸಿದ್ದಾರೆ.
ಎಮ್ಮೆ ಲ್ಸಿ ಐವನ್ ಡಿಸೋಜಾ ಅವರು ರಾಜ್ಯಪಾಲರ ಬಗ್ಗೆ ಅವಹೇಳನ ರೀತಿಯಲ್ಲಿ ಹೇಳಿಕೆ ನೀಡುವುದರ ಜೊತೆಗೆ ಬಾಂಗ್ಲಾ ದೇಶದ ಸ್ಥಿತಿ ನಿಮಗೂ ಬರಲಿದೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಇದು ಅತ್ಯಂತ ಖಂಡನೀಯ, ಕೂಡಲೇ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಸುದರ್ಶನ್ ರೆಡ್ಡಿ, ಗಿರೀಶ್ ಪಾಟೀಲ, ವಿಜಯ್, ಪ್ರತಾಪ್ ಸಿಂಹ, ನವೀನ್, ಪ್ರಕಾಶ್ ಸೇರಿದಂತೆ ಇತರರು ಇದ್ದರು.