
ಸಾರಿಗೆ ಸಿಬ್ಬಂದಿಗಳು ಆರೋಗ್ಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ : ಆರ್.ವಿ.ಪುರಾಣಿಕ್
ಕರುನಾಡ ಬೆಳಗು ಸುದ್ದಿ
ವಿಜಯನಗರ, 22- ನಿತ್ಯ ಸಾರ್ವಜನಿಕ ಸೇವೆಯಲ್ಲಿ ಕಾರ್ಯನಿರತರಾಗಿರುವ ಸಾರಿಗೆ ಸಿಬ್ಬಂದಿಗಳು ತಮ್ಮ ಆರೋಗ್ಯದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ವಿಭಾಗೀಯ ನಿಯಂತ್ರಣಾಧಿಕಾರಿ ಆರ್.ವಿ.ಪುರಾಣಿಕ್ ಹೇಳಿದರು.
ನಗರದ ಕೆಕೆಎಸ್‌ಆರ್‌ಟಿಸಿ ಬಸ್ ಡಿಪೋದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಅರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಪ್ರತಿ ವರ್ಷದಂತೆ ಈ ಬಾರಿಯೂ ಸಾರಿಗೆ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆ ಹಾಗೂ ಸಿಬ್ಬಂದಿಗಳಿAದ ರಕ್ತದಾನ ನಡೆಸುತ್ತಿರುವುದು ಶ್ಲಾಘನೀಯ. ಸಾರಿಗೆ ಇಲಾಖೆ ಸಿಬ್ಬಂದಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸದೇ ನಿರ್ಲಕ್ಷಿಸುವುದು ಸಾಮಾನ್ಯವಾಗಿರುವುದರಿಂದ ಸಾರಿಗೆ ಸಿಬ್ಬಂದಿಗಳ ಆರೋಗ್ಯದ ಕಡೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಇದೇ ವೇಳೆ ಸಾರಿಗೆ ಸಿಬ್ಬಂದಿಗಳಿಗೆ ರಕ್ತದೊತ್ತಡ, ಮಧುಮೇಹ, ಕಣ್ಣು ಪರೀಕ್ಷೆ, ಹಲ್ಲಿನ ಪರೀಕ್ಷೆ ತಪಾಸಣೆ ಕ್ಷಯರೋಗ ಸೇರಿದಂತೆ ಸಾಮಾನ್ಯ ರೋಗಗಳ ಬಗ್ಗೆ ತಪಾಸಣೆ ನಡೆಸಿದರು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕರಿಗೆ ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸುವ ಪ್ರಯುಕ್ತ ವಿಭಾಗೀಯ ನಿಯಂತ್ರಣಾಧಿಕಾರಿ ಆರ್.ವಿ.ಪುರಾಣಿಕ್ ಪೋಸ್ಟರ್ ಬಿಡುಗಡೆಗೊಳಿಸಿದರು.
ಈ ವೇಳೆ ವೈದ್ಯರಾದ ಡಾ.ಸಹನಾ, ಡಾ.ಲಕ್ಷ್ಮೀ, ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ವ್ಯವಸ್ಥಾಪಕರ ಆನಂದ್, ಕ್ಷಯರೋಗ ಮೇಲ್ವಿಚಾರಕ ಕಾಸಿಮ್ ಸಾಬ್, ಐಸಿಟಿಸಿ ಸಮಾಲೋಚಕ ಸಿದ್ದೇಶ್ವರ, ವಿಭಾಗಿಯ ಘಟಕ ಅಧ್ಯಕ್ಷ ಪರಮೇಶ್ವರಪ್ಪ ಸೇರಿದಂತೆ ಈ ಕಾರ್ಯಕ್ರಮದಲ್ಲಿ ಅರೋಗ್ಯ ಸಿಬ್ಬಂದಿಗಳು, ವಿಭಾಗೀಯ ಸಿಬ್ಬಂದಿ ಮತ್ತು ಕಾರ್ಮಿಕರು ಭಾಗವಹಿಸಿದ್ದರು.