ಗವಾಯಿಗಳಿಗೆ ಭಾರತರತ್ನ ಪ್ರಶಸ್ತಿ ನೀಡಿ

ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 03- ವಿಕಲಚೇತನರಾಗಿದ್ದು ಕೂಡಾ ಸಂಗೀತ ಕ್ಷೇತ್ರದಲ್ಲಿ ಸಾಮಾನ್ಯರಿಗಿಂತ ಹೆಚ್ಚಿನ ಸಾಧನೆ ಮಾಡಿದ ಹಾಗೂ ವಿಕಲಚೇತನರ ಬದುಕಿಗೆ ಆಶಾಕಿರಣವಾಗಿದ್ದ ಪಂಡಿತ ಪುಟ್ಟರಾಜ ಗವಾಯಿಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿಯ ನೀಡುವ ಕಾರ್ಯವನ್ನು ಸರಕಾರ ಮಾಡಬೇಕು ಎಂದು ಮಾಜಿ ಸಚಿವರಾದ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ಅವರು ತಾಲೂಕಿನ ಬಹದ್ದೂರಬಂಡಿ ಶಾಲೆಯಲ್ಲಿ ವಿಕಲಚೇತನ ನೌಕರರ ಸಂಘ ತಾಲೂಕ ಘಟಕ ಹಾಗೂ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ,ಪಂಡಿತ ಪುಟ್ಟರಾಜ ಗವಾಯಿಗಳು ಹುಟ್ಟುತ್ತಾ ಅಂಧರಾಗಿ ಹುಟ್ಟಿದ್ದರೂ ಕೂಡಾ ಯಾವುದೇ ರೀತಿಯಲ್ಲಿ ದೃತಿಗೇಡದೆ ಸಂಗೀತವನ್ನು ಅಭ್ಯಾಸ ಮಾಡುತ್ತಾ ಸಂಗೀತ ಕ್ಷೇತ್ರದಲ್ಲಿ ಸಾಮಾನ್ಯರು ಮಾಡದ ಸಾಧನೆ ಮಾಡುವುದರ ಜೊತೆ ಜೊತೆಯಲ್ಲಿ ತಮ್ಮ ಹಾಗೇ ಇರುವ ಅನೇಕ ವಿಕಲಚೇತನರ ಬಾಳು ಕೂಡಾ ಸರಿಯಾದ ದಿಕ್ಕಿನಲ್ಲಿ ಸಾಗಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಆಶ್ರಮವನ್ನು ಪ್ರಾರಂಭ ಮಾಡುವ ಮೂಲಕ ವಿಕಲಚೇತನರ ಬದುಕಿಗೆ ಬೆಳಗಾಗಿದ್ದಾರೆ.

ವಿಕಲಚೇತನರಾಗಿದ್ದು ಕೂಡಾ ಸಮಾಜಕ್ಕೆ ಮಾದರಿಯಾಗುವ ರೀತಿಯ ಸಾಧನೆ ಮಾಡಿದ ಪಂ.ಪುಟ್ಟರಾಜ ಗವಾಯಿಗಳಿಗೆ ಸರ್ಕಾರ ಕೂಡಲೇ ಮರಣೋತ್ತರ ಭಾರತರತ್ನ ಪ್ರಶಸ್ತಿಯನ್ನು ಅಂದಾಗ ಮಾತ್ರ ವಿಕಲಚೇತನರ ಸಮುದಾಯಕ್ಕೆ ಗೌರವ ನೀಡಿದಂತೆ ಆಗುತ್ತದೆ.ನಾನು ಕೂಡಾ ಸರಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತೆನೆ.ವಿಕಲಚೇತನರು ತಮ್ಮ ಅಂಗವೈಕಲ್ಯತೆಯನ್ನು ಮೆಟ್ಟಿನಿಂತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರೂ ಅನೇಕರಿದ್ದಾರೆ.ಅಂಥವರನ್ನು ಗುರುತಿಸಿ ಗೌರವಿಸುವ ಕಾರ್ಯ ಸರಕಾರ ಮಾಡಬೇಕಿದೆ.ವಿಕಲಚೇತನರ ಬಗ್ಗೆ ಅನುಕಂಪ ಪಡುವ ಬದಲಾಗಿ ಅವರಿಗೆ ಅವಕಾಶಗಳನ್ನು ಒದಗಿಸಿ ಕೊಡುವ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕಿದೆ ಎಂದು ಹೇಳಿದರು.
ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ವಿಕಲಚೇತನ ನೌಕರರಿಗೆ ೭ನೇ ವೇತನ ಆಯೋಗದ ಪ್ರಕಾರ ಅವರ ಮೂಲ ವೇತನದ ಶೇ.೬ ರಷ್ಟು ಸಂಚಾರಿ ಭತ್ಯೆ,ಪೋಷಣಾ ಭತ್ಯೆ ಜಾರಿಗೆ ಮಾಡುವಂತೆ ಆಯೋಗ ವರದಿ ಕೊಟ್ಟು ೨ ತಿಂಗಳು ಕಳೆದರೂ ಸರಕಾರ ಮಾತ್ರ ಆದೇಶ ಜಾರಿಗೆ ಮಾಡಿರುವುದಿಲ್ಲ ಹಾಗೂ ನಿರುದ್ಯೋಗಿ ವಿಕಲಚೇತನರ ಅಂಗವೈಕಲ್ಯತೆಯ ಭತ್ಯೆಯನ್ನು ಹೆಚ್ಚಳ ಮಾಡುವುದು, ಶಕ್ತಿ ಯೋಜನೆಯ ಅಡಿಯಲ್ಲಿ ಪುರುಷ ವಿಕಲಚೇತನರಿಗೆ ಉಚಿತ ಪ್ರಯಾಣ,ವಿ.ಆರ್.ಡಬ್ಲೂ ಹಾಗೂ ಎಂ.ಆರ್.ಡಬ್ಲೂ ಗಳನ್ನು ಆಯಂ ಮಾಡುವುದು,ವಿಕಲಚೇತನ ಮಕ್ಕಳಿಗೆ ನೀಡಲಾಗುವ ವಿದ್ಯಾರ್ಥಿ ವೇತನ ಹೆಚ್ಚಳ ಮಾಡುವುದು ಸೇರಿದಂತೆ ಅನೇಕ ವಿಕಲಚೇತನರ ಬೇಡಿಕೆಗಳನ್ನು ಸರಿಯಾದ ಸಮಯದಲ್ಲಿ ಈಡೇರಿಸಿದಾಗ ಮಾತ್ರ ದಿನಾಚರಣೆಗೆ ಮಹತ್ವ ಬರುತ್ತದೆ ಎಂದು ಹೇಳಿದರು.
ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಯೋಗಾನಂದ ಲೇಬಗೇರಿ ಮಾತನಾಡುತ್ತಾ,ವಿಕಲಚೇತನರು ಸಂಕುಚಿತವಾದ ಮನೋಭಾವನೆಯನ್ನು ಬಿಟ್ಟು ವಿಶಾಲವಾದ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು.ವಿಕಲಚೇತನರ ಸಿಗಬೇಕಾದ ಸೌಲಭ್ಯಗಳ ಕುರಿತು ಅಧಿಕಾರಿಗಳು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು.ಜನಪ್ರತಿನಿಧಿಗಳು ಅವುಗಳನ್ನು ಸರಿಯಾದ ವ್ಯಕ್ತಿಗೆ ತಲುಪುವಂತೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಮಂಜುನಾಥ ಕುರಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಕಾರ್ಯದರ್ಶಿ ಮಾರುತಿ ಆರೇರ,ತಾಲೂಕ ಕಾರ್ಯದರ್ಶಿ ಮಲ್ಲಪ್ಪ ಗುಡದನ್ನವರ,ಸಹ ಸಂಘಟನಾ ಆಯುಕ್ತರಾದ ಶರೀಫಸಾಬ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪೂರ್ಣಿಮಾ ತುಪ್ಪದ,ಶಾಲಾ ಅಭಿವೃದ್ದಿ ಸಮಿತಿಯ ಸದಸ್ಯರಾದ ಬಾಬಾ ಕಿಲ್ಲೇದಾರ,ಬಸಣ್ಣ ಕಬ್ಬೇರ,ದರಿಯಾಸಾಬ ಕಾತರಕಿ,ಉರ್ದು ಶಾಲಾ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಹುಸೇನಸಾಬ ಕಮ್ಮಾರಶಿಕ್ಷಕರಾದ ಭಾರತಿ ಹವಳೆ,ಮಮತ,ಹನುಮವ್ವ,ಮೇರಾಜುನ್ನಿಸಾ,ಭಾರತಿ ಉಪಾಧ್ಯ,ಗೀತಾ ಕುರಿ,ಜಲಜಾಕ್ಷಿ,ನಗ್ಮಾ,ಹನುಮಂತಪ್ಪ,ರಾಜಾ ಹುಸೇನ ಸೇರಿದಂತೆ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿ ಮಮತಾ ನಿರೂಪಿಸಿದರು.ಬಹಹದ್ದೂರಬಂಡಿ ಕ್ಲಸ್ಟರ್ ನ ಸಿ.ಆರ್.ಪಿ.ಹನುಮಂತಪ್ಪ ಕುರಿ ಸ್ವಾಗತಿಸಿ,ಶಿಕ್ಷಕಿ ಗಂಗಮ್ಮ ಕಪರಶೆಟ್ಟಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!