
ಜನನ ಪ್ರಮಾಣ ಪತ್ರಕ್ಕೆ ಸರ್ವರ್ ಸಮಸ್ಯೆ, ಪಾಲಕರ ಅಲೆದಾಟ ಅನಗತ್ಯ
ಅಂಚೆ ಮೂಲಕ ಪಾಲಕರ ಮನೆಗೆ ತಲುಪಿಸಲು ಸೂಚನೆ : ಎಂ.ಎಸ್.ದಿವಾಕರ್
ಕರುನಾಡ ಬೆಳಗು ಸುದ್ದಿ
ವಿಜಯನಗರ, 13- ಸರ್ವರ್ ಸಮಸ್ಯೆಯಿಂದ ಜನನ ಪ್ರಮಾಣ ಪತ್ರ ವಿತರಣೆಗೆ ಮೂರು ತಿಂಗಳಿನಿ0ದ ಸಾಧ್ಯವಾಗದ ಹಿನ್ನಲೆಯಲ್ಲಿ ಪಾಲಕರ ಮನೆಗಳಿಗೆ ಅಂಚೆ ಮೂಲಕ ತಲುಪಿಸಲು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಸೂಚಿಸಿದ್ದಾರೆ.
ನಗರದ ತಾಯಿ-ಮಕ್ಕಳ ಆಸ್ಪತ್ರೆ (ಎಂಸಿಎಚ್)ಗೆ ಸಾರ್ವಜನಿಕರ ದೂರು ಆಧರಿಸಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಸಾರ್ವಜನಿಕರು ಅನಗತ್ಯವಾಗಿ ಆಸ್ಪತ್ರೆಗೆ ಜನನ ಪ್ರಮಾಣ ಪತ್ರಕ್ಕಾಗಿ ಅಲೆದಾಡುವುದು ಬೇಡ. ಸರ್ವರ್ ಸಮಸ್ಯೆ ಬಗೆಹರಿದ ಬಳಿಕ ಆರೋಗ್ಯ ಇಲಾಖೆಯಿಂದಲೇ ಪಾಲಕರ ಮನೆಗಳಿಗೆ ಅಂಚೆ ಮೂಲಕ ತಲುಪಿಸಲಾಗುವುದು ಎಂದರು. ಬಳಿಕ ಆಸ್ಪತ್ರೆಯಲ್ಲಿ ಬಾಣಂತಿಯರನ್ನು ಭೇಟಿ ಮಾಡಿ ಚಿಕಿತ್ಸೆ ಮತ್ತು ಆರೋಗ್ಯೋಪಾಚಾರದ ಬಗ್ಗೆ ವಿಚಾರಿಸಿದರು. ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳು ಮತ್ತು ಅವರೊಂದಿಗೆ ಬರುವ ಪಾಲಕರಿಗೆ ಗೌರವಯುತವಾಗಿ ಮಾತನಾಡಿಸುವಂತೆ ವಿನಯತೆಯಿಂದ ನಡೆದುಕೊಳ್ಳುವಂತೆ ವೈದ್ಯರು ಸಿಬ್ಬಂದಿಗಳಿಗೆ ಸೂಚಿಸಿದರು. ಆಸ್ಪತ್ರೆಗೆ ಬರುವ ಬಾಣಂತಿಯರಿಗೆ ತಪಾಸಣೆ ಸೇರಿದಂತೆ ಔಷಧಿ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲಿಸದಂತೆ ಪ್ರತ್ಯೇಕವಾಗಿ ಟೋಕನ್ ವ್ಯವಸ್ಥೆ ಮಾಡಲು ತಿಳಿಸಿದರು.
ದುರಸ್ಥಿಯಲ್ಲಿರುವ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಉಪಕರಣವನ್ನು ಸರಿಪಡಿಸಿ ಗರ್ಭೀಣಿಯರಿಗೆ ಉಚಿತವಾಗಿ ಸ್ಕ್ಯಾನಿಂಗ್ ಸೌಲಭ್ಯ ಒದಗಿಸಬೇಕು ಹಾಗೂ ಆಸ್ಪತ್ರೆಯ ಗೋಡೆಯ ಮೇಲೆ ನಿಯಮಾನುಸಾರ ನಾಮಫಲಕಗಳನ್ನು ಅಳವಡಿಸಲು ಸೂಚಿಸಿದರು.
ಖಾಲಿ ಇರುವ ಕೊಠಡಿಗಳಲ್ಲಿ ಹವಾನಿಯಂತ್ರಿತ(ಎಸಿ) ಅಳವಡಿಸಿ ಸುಸಜ್ಜಿತವಾಗಿಟ್ಟುಕೊಳ್ಳುವಂತೆ, ಶಸ್ತ್ರ ಚಿಕಿತ್ಸೆ ಬಳಿಕ ರೋಗಿಗಳನ್ನು ಈ ಕೊಠಡಿಗಳಲ್ಲಿ ಆರೋಗ್ಯೋಪಾಚಾರ ಮಾಡುವಂತೆ ತಿಳಿಸಿದರು.
ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆಯಾಗದಂತೆ ನಿಗಾವಹಿಸಬೇಕು. ಲಭ್ಯವಿಲ್ಲದಿದ್ದರೇ ಖರೀದಿಸಿ ರೋಗಿಗಳಿಗೆ ಉಚಿತವಾಗಿ ವಿತರಿಸಬೇಕು. ಔಷಧಿಗಾಗಿ, ಸ್ಕಾö್ಯನಿಂಗ್ ಹೊರಗಡೆ ಕಳುಹಿಸದಿರುವಂತೆ ಸೂಚಿಸಿದರು.
ರೋಗಿಗಳ ಬೇಡಿಕೆಯಂತೆ ಆಸ್ಪತ್ರೆಯ ಹೊರಭಾಗದಲ್ಲಿ ಕೂಡಲೇ ಆಸನದ ವ್ಯವಸ್ಥೆಯನ್ನು ಕಲ್ಪಿಸಲು ತಿಳಿಸಿದರು. ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಉತ್ತಮವಾಗಿ ನಿರ್ವಹಿಸಿರುವ ಹಿನ್ನಲೆಯಲ್ಲಿ ಸ್ವಚ್ಛತಾ ಸಿಬ್ಬಂದಿಗಳನ್ನು ಕರೆದು ನೈರ್ಮಲ್ಯತೆಗೆ ಆದ್ಯತೆ ನೀಡಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಂಕರನಾಯ್ಕ, ವೈದ್ಯಾಧಿಕಾರಿಗಳಾದ ಡಾ.ಜಂಬಯ್ಯ, ಡಾ.ನೂರ್, ಡಾ.ಚಂದ್ರಮೋಹನ್, ಡಾ.ಹರಿಪ್ರಸಾದ್ ಇದ್ದರು.