
ಮಳೆಯಿಂದ ಆದ ಬೆಳೆ ನಷ್ಟಕ್ಕೆ ಪರಿಹಾರ ನೀಡಿ : ಶಾಂತಕುಮಾರ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 26- ರಾಜ್ಯಾದ್ಯಂತ ಮಿತಿಮೀರಿದ ಮಳೆಯಿಂದ ಅತಿವೃಷ್ಟಿ ಉಂಟಾಗಿ ಇದರಿಂದ ಕಬ್ಬು. ಬತ್ತ. ಬಾಳೆ ಇನ್ನಿತರ ಬೆಳೆಗಳು ನಾಶವಾಗಿವೆ. ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ನಷ್ಟದ ಸಮೀಕ್ಷೆ ಮಾಡಿಸಿ ವಿಪ್ಪತ್ತು ಪರಿಹಾರ ನಿಧಿಯಿಂದ ಕೂಡಲೇ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ರೈತ ಸಂಘಟನೆಗಳು ಒಕ್ಕೂಟ ಹಾಗೂ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರ ಒತ್ತಾಯಿಸಿದರು.
ನಗರದ ರೇಣುಕಾ ಹೋಟೆಲ್ನಲ್ಲಿ ಪತ್ರಕರ್ತನ್ನು ಉದ್ದೇಶಿಸಿ ಮಾತನಾಡಿ, ರಾಜ್ಯಾದ್ಯಂತ ಎಪಿಎಂಸಿಗಳಲ್ಲಿ ರೈತರು ಮಾರಾಟ ಮಾಡುವ ತರಕಾರಿ ಹಣ್ಣು ದಿನಸಿಗಳಿಗೆ ೧೦% ಕಮಿಷನ್ ಹಣವನ್ನು ದಲ್ಲಾಳಿಗಳು ರೈತರಿಂದ ವಸೂಲಿ ಮಾಡುತ್ತಿದ್ದಾರೆ, ಹಾಗೂ ವೇಸ್ಟೇಜ್ ಎಂದು ಮೂರು ನಾಲ್ಕು ಕೆಜಿ ಸಂಗ್ರಹಿಸುತ್ತಿದ್ದಾರೆ ಇದು ಕಾನೂನು ಬಾಹಿರವಾಗಿರುತ್ತದೆ ಈ ಬಗ್ಗೆ ಕಠಿಣ ಕ್ರಮ ಕೈಕೊಂಡು ರೈತರ ಶೋಷಣೆ ನಿಲ್ಲಿಸಬೇಕೆಂದು ಕೃಷಿ ಮಾರಾಟ ಮಂಡಳಿ ರಾಜ್ಯ ಆಯುಕ್ತರಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ ಎಂದು ಶಾಂತಕುಮಾರ್ ತಿಳಿಸಿದ್ದಾರೆ.
ಭತ್ತಕ್ಕೆ ನಿಗದಿ ಮಾಡಿರುವ ಕನಿಷ್ಠ ಬೆಂಬಲ ಬೆಲೆ ಉತ್ಪಾದನಾ ವೆಚ್ಚಕ್ಕೆ ಕಡಿಮೆಯಾಗಿರುವ ಕಾರಣ ರಾಜ್ಯ ಸರ್ಕಾರ ಪ್ರತಿ ಕ್ವಿಂಟಲ್ ಹೆಚ್ಚುವರಿ ೫೦೦ ರೂ. ಪ್ರೋತ್ಸಾಹಧನ ನೀಡಿ. ಭತ್ತ ಖರೀದಿ ಕೇಂದ್ರಗಳ ತೆರೆಯಬೇಕು. ಅಲ್ಲದೆ ರಾಜ್ಯದಲ್ಲಿ ಆನ್ಲೈನ್ ಬೆಟ್ಟಿಂಗ್ ಗೇಮ್ ಮೊಬೈಲ್ ಬೆಟ್ಟಿಂಗ್ ಗೇಮ್‌ಗಳ ಆ್ಯಪ್‌ಗಳನ್ನು ನಿಷೇಧಿಸಬೇಕು, ಇಂತಹ ಆಟಗಳಿಂದ ಯುವಕರ ಭವಿಷ್ಯ ಹಾಳಾಗುತ್ತಿದೆ ಹಣ ಕಳೆದುಕೊಂಡ ನೂರಾರು ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಈಗಾಗಲೇ ಇಂತಹ ಆ್ಯಪ್‌ಗಳನ್ನು ತಮಿಳುನಾಡು. ತೆಲಂಗಾಣ ರಾಜ್ಯಗಳಲ್ಲಿ ನಿಷೇಧ ಮಾಡಿದ್ದಾರೆ ಅದರಂತೆ ರಾಜ್ಯದಲ್ಲಿಯೂ ಸಹ ಈ ಆ್ಯಪ್‌ಗಳನ್ನು ನಿಷೇಧ ಮಾಡಬೇಕು ಎಂದು ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಿಗೆ ಒತ್ತಾಯ ಮಾಡಲಾಗಿದೆ ಎಂದು ತಿಳಿಸಿದರು.