
ಕೊಪ್ಪಳ : ಸಂಭ್ರಮದಿಂದ ಜರುಗಿದ ಶ್ರೀಕೃಷ್ಣ ಜನ್ಮಾಷ್ಟಮಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 26- ನಗರದ ಪ್ರಶಾಂತ ಬಡಾವಣೆಯ ಶ್ರೀವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿಯ ಮೊದಲ ದಿನದ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಶ್ರೀಮದ್ಯೋಗೀಶ್ವರ ಯಾಜ್ಞವಲ್ಕ್ಯ ಪ್ರತಿಷ್ಠಾನದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸೋಮವಾರ ಶ್ರೀಕೃಷ್ಣ ಮೂರ್ತಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಆವರಣದಲ್ಲಿ ಮಕ್ಕಳಿಂದ ಶ್ರೀಕೃಷ್ಣ, ರಾಧೆಯ ಛದ್ಮವೇಷ ಸ್ಪರ್ಧೆ ನಡೆದಿದ್ದು, ಕೃಷ್ಣ ಮತ್ತು ರಾಧೆಯ ಉಡುಪು ಧರಿಸಿ ಮಕ್ಕಳು ಗಮನ ಸೆಳೆದರು. ಶ್ರೀಕೃಷ್ಣನ ವಿವಿಧ ಗೀತೆಗಳಿಗೆ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದರು.
ಕೃಷ್ಣ ಬೆಳಿಗ್ಗೆ ಸುಪ್ರಭಾತ್, ಪಂಚಾಮೃತ ಅಭಿಷೇಕ, ಶ್ರೀಕೃಷ್ಣ ಸಹಸ್ರನಾಮ, ಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದವು. ಶ್ರೀಕೃಷ್ಣ ದೇವಾಲಯಕ್ಕೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಯಿತು.
ಸನ್ಮಾನ : ಸಂಸದ ಕೆ ರಾಜಶೇಖರ ಹಿಟ್ನಾಳ ಹಾಗೂ ನಗರಸಭೆ ನೂತನ ಅಧ್ಯಕ್ಷ ಅಮ್ಜದ ಪಟೇಲ್ ಸೇರಿದಂತೆ ಅನೇಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪಂಡಿತ್ ರಘುಪ್ರೇಮಾಚಾರ್ಯ ಮುಳಗುಂದ ಇವರಿಂದ ಭಾಗವತ್ ಪ್ರವಚನ ಹಾಗೂ ಸಂಜೆ ತೊಟ್ಟಿಲು ಸೇವೆ, ತಡರಾತ್ರಿ ಹರಕೆ ಬಿಡುವ ಸೇವೆ ನಡೆಯಿತು.
ಇಂದು ವಿವಿಧ ಕಾರ್ಯಕ್ರಮ : ನಗರದ ಪ್ರಶಾಂತ ಬಡವಾಣೆಯ ಶ್ರೀವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಮಂಗಳವಾರ ಸುಪ್ರಭಾತ, ನಿರ್ಮಾಲ್ಯಾಭಿಷೇಕ, ತೊಟ್ಟಿಲು ಸೇವೆ, ಪಂಚಾಮೃತ ಅಭಿಷೇಕ ನೈವೇದ್ಯ, ಮಹಾಮಂಗಳಾರತಿ, ಪಾರಣಿ, ತೀರ್ಥಪ್ರಸಾದ ಜರುಗಲಿದೆ.
ಸಂಜೆ ೪ಕ್ಕೆ ಪ್ರವಚನ, ಸೇವಾಕರ್ತರಿಗೆ ಫಲ ಮಂತ್ರಾಕ್ಷತೆ, ಗ್ರಾಮ ಪ್ರದಕ್ಷಿಣೆ, ಗೋಪಾಲ ಕಾವಲಿ, ಪಲ್ಲಕ್ಕಿ ಸೇವೆ ಜರುಗಲಿವೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.